Article

ಕೊನೆಯ ಕಂತು

ದೈನಂದಿನ ಕಾರ್ಯಗಳಿಗೆ ಪೂರ್ಣ ವಿರಾಮವನಿತ್ತು ದಿನಮಣಿಯಿಂದು ಜಾರುತಿಹನು, ಶಶಿಯ ತಂಬೆಳಗಿನ ಪ್ರಕಟಣೆಯೊಂದಿಗೆ. ಕಣ್ತೆರೆದಷ್ಟು ದೂರ ಕಾಣುವ ದಿಗಂತದ ಹುಟ್ಟಿನಲ್ಲೋ ಅಥವಾ ಕೊನೆಯಲ್ಲೋ ಬೆಳಗೊಂದು ಮರೆಯಾಗುವ ಕ್ಷಣದಂತೆ ಮತ್ತೊಂದು ವರ್ಷ ಸರಿದು ಹೋಯಿತು ಜೀವಿಸಿಯೂ ತಿಳಿಯದೇ, ತಿಳಿದೂ ಜೀವಿಸದೆ. ೨೩ರ ಕಂತಿನ ಕೊನೆಯಲ್ಲಿ ಅಪರಿಚಿತ ಭಾವವೊಂದರ ಮುನ್ನುಡಿಯೊಂದಿಗೆ ೨೪ನ್ನು ಬರ ಮಾಡಿ ಬಿಗಿದಪ್ಪಿದುದರ ಹಸಿ ನೆನಪು, ಹುಸಿಯಾಗದೇ ಹಸನಾಗಿರುವಾಗಲೇ ಪರಿಚಿತ ಭಾವವೊಂದು ಅಪರಿಚಿತದೊಡಲಿನಲ್ಲಿ ಕಾಣೆಯಾಗುವ ಕ್ಷಣವಿಂದು ಪರಿಚಯವಾಗುತ್ತಿದೆ.
೨೦೨೪ ಎಂಬುದು ಸಂಭ್ರಮದ ಗಣಿಯಾಯಿತೇ? ಕಡೆದ ಕಡಗೋಲಿನ ತುದಿಯಲ್ಲಿ ನವನೀತದ ಪುಟ್ಟ ತುಂಡೊಂದು ಲಾಸ್ಯಾಸ್ಪದವಾಗಿ ನಗುವಾಗ ಮಂದಸ್ಮಿತರಾಗಿದ್ದು ಸುಳ್ಳಲ್ಲ. ಕಡೆಯುವಿಕೆಯ ರಭಸದಲ್ಲಿ ಕೊಚ್ಚಿ ಕಂಗೆಟ್ಟಾಗ ಅದೇ ಕಡಗೋಲಿನ ತುದಿಗೆ ರೋಷಾವೇಶದಿಂದ ಕಟು ನುಡಿದೆವೆಂಬುದು ಸತ್ಯವೇ. ಚಿಟ್ಟೆಯೊಂದು ಚಂದವಾಗಿ ಹಾರುವಾಗ ಕಂಬಳಿಹುಳವನ್ನು ಜ್ಞಾಪಿಸಿಕೊಂಡಿಹೆವು ತಾನೇ? ಮಗುವ ನಗುವಿನ ನಿಷ್ಕಲ್ಮಶತೆಯಲ್ಲಿ ಕಳೆದು ಹೋದ ಬಾಲ್ಯವನ್ನೆಲ್ಲಾ ಹಂಬಲಿಸಿಹೆವಲ್ಲಾ! ಕೊರಗಿ ಕೊರಡಾಗುವ ಕ್ಷಣಗಳಲ್ಲೆಲ್ಲಾ ಅದೇ ನೀಲಗಿರಿಯಲ್ಲಿನ ಉತ್ತುಂಗಕ್ಕೇರುವ ಶ್ರೀಗಂಧವನ್ನೊಮ್ಮೆ ನೆನೆಸಿಹೆವು. ಕಂಗಳ ಕೊಳದಿ ಅಜ್ಞಾತವಾಗಿ ಅವಿತಿದ್ದ ಅದೆಷ್ಟೋ ಅನೂಹ್ಯ ಕನಸುಗಳಿಗೆ ನೀರೆರೆಯಬೇಕೆಂಬ ಹಂಬಲವು ಮಾನಸಾಬ್ಧಿಯಲ್ಲಿ ಸೆಲೆಯೊಡೆಯಿತಲ್ಲವೇ!? ಕರಿತಾಗದ ನೂರೆಂಟು ಪ್ರಾಸಗಳ, ಛಂದೋಬದ್ಧವಾದ ನುಡಿಯ ಹಾಲ್ಗಡಲಿನಲ್ಲಿ ಮಿಂದು ಸುಖಿಗಳೆಂದು ಭಾವಿಸುವಂತೆ ಮಾಡಿದ ೨೪ ಸಂಭ್ರಮದ ಹೊನಲಲ್ಲವೇ? ಕಳೆದು ಹೋದ ದಿವಾಕರನನ್ನು ಮಗದೊಮ್ಮೆ ಬರುವನೆಂಬ ದಿಟ್ಟ ತಾಳ್ಮೆಯೊಂದಿಗೆ, ಪುಟ್ಟ ಆಸೆಯೊಂದಿಗೆ ಕಾದಿಹೆವಲ್ಲವೇ? ತಿಳಿಯದ ನಗುವಿಗೆ ಕಾರಣವಾದ ತಿಳಿದೂ ತಿಳಿಯದಿರುವ ತಂಬೆಳಗನ್ನು ಪರಿಚಯಿಸಿದ್ದು ೨೪ಲ್ಲವೇ.? ನಗುವ ಮಲ್ಲಿಗೆಯ ನವೀನತೆಯಲ್ಲಿ ರಸಘಳಿಗೆಯನ್ನಾಸ್ವಾದಿಸಿದ ದುಂಬಿಯ ಸಾರ್ಥಕ್ಯವನ್ನು ಆ ಝೇಂಕಾರದಲ್ಲೇ ಗಮನಿಸಿ ಸಂತಸಗೊಂಡಿಲ್ಲವೇ? ನಿಷ್ಕಲ್ಮಶವಾಗಿ, ನಿಸ್ವಾರ್ಥದಿಂದ ಓಂಕಾರನೆದುರಲ್ಲಿ ಕೈಮುಗಿದು ಬೇಡಿಹೆವಲ್ಲಾ, ಕೆಲವು ಧಮನಿಯ ಬಡಿತ ನೂರ್ಕಾಲ ಸುಖವಾಗಿರಲೆಂದು, ಸುಳ್ಳಿಹುದೇ ಈ ಪ್ರಾರ್ಥನೆಯಲ್ಲಿ? ಕೊಚ್ಚಿಹೋದ ಕನಸಿನ ತುಂಡನ್ನೆಲ್ಲಾ ಕೆಂಬಣ್ಣದಿಂದ ಮತ್ತೊಮ್ಮೆ ಒಟ್ಟಾಗಿಸಿ, ಮುರುಕು ಕನ್ನಡಿಯ ಬದಲು ಪ್ರತಿಫಲನದ ಚಂದಗಾರಿಕೆಯ ಬಟ್ಚಲಾಗಿ ಮಾರ್ಪಾಡಾಗಿಸಿದೆವಲ್ಲಾ, ಬದುಕಲಿಲ್ಲವೇ ೨೪ರ ಬಹು ಸೌಮ್ಯಾಬ್ಧಿಯಲ್ಲಿ?
ಬೆಳಗುವ ಜ್ಯೋತಿಯಲ್ಲಿ ಕೇವಲ ದೀಪದ ಬೆಳಗನ್ನೇ ನೋಡಿದರೆ, ಕರಕಲಾಗುವ ಬತ್ತಿಯೊಂದರ ತಮದ ಪ್ರಪಂಚದ ಅರಿವಾಗುವುದೆಂತು! ಮನದುಂಬಿ ನಗುವಾಗಲೆಲ್ಲಾ, ಹೃದಯ ಕಲಕುವಂತೆ ಕಂಬನಿ ಸುರಿಸಿದುದರ ನೆನಪು ಕರಿಮೋಡದಂತೆ ಆಚ್ಛಾದಿಸಬೇಕೆಂಬ ವಾದವಲ್ಲ, ಬದಲಾಗಿ ಕಂಗೆಟ್ಟ ಕ್ಷಣಗಳು ಮರೆಯದಿರಲಿ ಸುಖದ ಮಾಧುರ್ಯತೆಯಲಿ ಎಂಬ ಮಹದಾಸೆ. ನಡೆದ ತಪ್ಪುಗಳಿಗೆ ಕ್ಷಮೆಯಿಹುದು ಧರಿತ್ರಿಯ ಮಡಿಲಿನಲ್ಲಿ, ಭೈರವನ ಕಾಲಾಗ್ನಿಯಲಿ, ಮರುಕಳಿಸುವ ಪ್ರಮಾದಗಳಿಗೆ? ಊಹುಂ! ಕೊನೆಯ ಪುಟದ ಕೊನೆಯಾಕ್ಷರ ನಿರ್ಮಲವಾಗಬೇಕೆಂದರೆ, ಬರೆದ ನೂರೆಂಟು ಅಧ್ಯಾಯಗಳಲ್ಲಿನ ತಪ್ಪುಗಳರಿವು ಅರಿವಳಿಕೆಯಲ್ಲಿ ಅಚ್ಚಳಿಯದಂತೆ ಸ್ಥಾಪಿತವಾಗಿರಬೇಕು.
ಹಾಗಾದರೆ,ಪ್ರತಿದಿನವೂ ಹುಟ್ಚಿ ಮರೆಯಾಗುವ ರವಿಯ ಸೊಬಗನ್ನು ಕಳೆದ ಅದೆಷ್ಟು ದಿನಗಳಲ್ಲಿ ಕಣ್ತುಂಬಿಸಿಕೊಂಡಿಹೆವು? ಪಾರಿಜಾತದ ಮೊಗ್ಗೊಂದು ಬಿರಿವಾಗ ಸದ್ದಿಲ್ಲದೇ ನಗುವ ಆ ನಗುವಿನಲ್ಲಿ ಎಷ್ಟು ದಿನ ಪಾಲುದಾರರಾಗಿಹೆವು? ಹರಿವ ನದಿಯಲ್ಲಿನ ಹರಿವಿನೊಳಗೆ ಹರಿಯದೇ ಹಳತಾಗುವ ಹೆಬ್ಬಂಡೆಯ ಅಗಲವರಿತಿದ್ದೆಷ್ಟು? ಪಶ್ಚಿಮಾದಿಯಾಗಿ ಬೀಸುವ ಕುಳಿರ್ಗಾಳಿಯ ಚೆಂದದ, ಅಂದದ ಚೆಲುವಿನಲ್ಲಿ ಚೈತನ್ಯತೆಯೊಂದಿಗೆ ಸಂವಹನ ಮಾಡುವ ತರಗೆಲೆಗಳ ತನ್ಮಯತೆಯನ್ನು ಆರಾಧಿಸಿದ್ದೆಷ್ಟು? ಉರಿವ ಜ್ವಾಲೆಯ ಆದಿಯಲ್ಲಿ ವಿಷಾದದ ನಗು ಬೀರುವ ಬತ್ತಿಯೊಂದರ ಭಾವವರಿತಿದ್ದೆಷ್ಟು? ಬದುಕಿದೆವಾ ೨೪ರ ಬಹು ಸಡಗರದಲ್ಲಿ.? ಕಾಣದಿರುವ ಅಕಲ್ಪಿತ ಕೋಲಾಹಲಗಳಲ್ಲಿ ಸಂಕಲ್ಪಗಳನ್ನೆಲ್ಲಾ ತೆರೆದಿಟ್ಟು, ಕಲ್ಪನಾಲೋಕವಿಲಾಸಿಯಾಗಿ ವಿಹರಿಸಲಿಲ್ಲವೇ? ಕಾಲಚಕ್ರದ ಕಡು ನಿಯತಿಯಲ್ಲಿ ಹಸ್ತಕ್ಷೇಪದ ಹೊಣೆಗಾರಿಕೆಯನ್ನು ಹೊರಲೇಕೆ ಹಿಂಜರಿತಿಹೆವು? ಕ್ರಮಾನುಸಾರವಾಗಿ ಕಂಡ ಕಾಮನಬಿಲ್ಲಿನ ಕನಸುಗಳನ್ನೆಲ್ಲಾ ಸರೋವರದ ಸುಪ್ತತೆಯಲ್ಲಿ ಪ್ರತಿಬಿಂಬವಾಗಿ ಹುಡುಕಿ ಸೋತೆವಲ್ಲವೇ? ಜೀವಿಸಿದೆವಾ ೨೪ರಲ್ಲಿ?
ಕೆಲವು ಹಲವು ಪ್ರಶ್ನೆಗಳಿಗೆ ಉತ್ತರ ನುಡಿಯಲ್ಲಲ್ಲ, ಕೃತಿಯಲ್ಲಿ. ಕಾಲಚಕ್ರ ತಿರುಗುವ ಪರಿ ಬಹುಶಃ ಗಂಗೆಯೊಲವು ನೀಲಕಂಠನಿಗೊಂದೇ ತಿಳಿದಿಹುದೇನೋ! ಬದುಕುವ ಪ್ರತೀ ಘಳಿಗೆಯೂ, ಜೀವಿಸಿದ ಪ್ರತೀ ರಸಘಳಿಗೆಯೂ, ಆತ್ಮಾವಲೋಕನವೆಂಬ ಸಾರ್ಥಕ್ಯ ಮೌನದಲ್ಲಿನ ಪ್ರತೀ ಉಚ್ವ್ಛಾಸ-ನಿಶ್ವಾಸಗಳಲ್ಲಿಯೂ, ಪ್ರೇಮದುಂಬಿ ನುಡಿವ ಪ್ರತಿಯೊಂದು ಅಕ್ಷರದಲ್ಲಿಯೂ, ಜೊತೆಗಾಗುವ ಪ್ರತೀ ಹೃದಯದ ಬಡಿತದಲ್ಲಿಯೂ ಮೈಮರೆವ ಬದಲು ಪ್ರತೀ ಹೃದಯ ದೇಗುಲದ ದೀಪವ ಹಚ್ಚಿ, ನಗುವ ತೈಲದಿಂದ ಮನಸ ನಮಿಸಿ ಜೀವಿಸಿದರೆ ಪ್ರತೀ ನಾಡಿ ಕ್ಷಣವೂ ಸಾರ್ಥಕ್ಯ ಭಾವದೊಂದಿಗೆ ಕೂಡಿರಬಹುದು. ಕೈಗೆಟುಕದ ದೂರದಲ್ಲಿನ ಸೌಂದರ್ಯವನ್ನೆಲ್ಲಾ ಆಸ್ವಾದಿಸಲಾಗದಷ್ಟು ಬುದ್ಧಿಹೀನರಂತೂ ನಾವಲ್ಲ. ಬರುವ ನಾಳೆಗೋಸುಗ ಕನಸಿನ ಅರಮನೆಯನ್ನೇ ಕಟ್ಟುವ ನಮಗೆ ತಳಹದಿಯೊಂದು ತನ್ಮಯತೆ, ಸುಶೀಲತೆ, ಸೌಮ್ಯತೆಯಿಂದ ಸದೃಢವಾಗಿರಬೇಕೆಂಬ ನಿಲುವು ಗಟ್ಟಿಯಾದರೆ, ಉತ್ತರ ಸಿಗದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕಾಯಕವನ್ನು ಆರಂಭಿಸಿದರೆ, ತೆರೆದಿಟ್ಟ ಪುಟಗಳನ್ನು ಮತ್ತೊಮ್ಮೆ ಸಹನೆಯಿಂದ ಅಭ್ಯಸಿಸಿದರೆ, ಅರಗದ ಸತ್ಯಗಳೆದುರು ತಾಂಡವವಾಡುವ ಸುಳ್ಳನ್ನು ನಂಬದೇ ಬದಿಗೊತ್ತಿದರೆ, ಅಪೂರ್ಣತೆಯಲ್ಲಿನ ಪೂರ್ಣತೆಯನ್ನು ಕಂಡುಕೊಂಡರೆ, ನಗು ಚೆಲ್ಲಿದ ವದನಗಳ ನೆರಿಗೆಗಳಲ್ಲಿನ ನೋವಿನೆಳೆಯನ್ನು ಅರಿತರೆ, ಅರಮನೆಯ ಬದಲು ಜಗನ್ಮೋಹನ ದೇವಲೋಕವನ್ನೇ ಕಟ್ಚಬಹುದು.
ಅಂತೆಯೇ, ಅಪರಿಚಿತತೆಯಿಂದ ಪ್ರಾರಂಭಿಸಿದರೂ ಆಪ್ಯಾಯಮಾನವಾಗಿ ಎದೆಗಪ್ಪಿದ ೨೪,ಅಪರಿಚಿತವಾಗಿಯೇ ಸರಿದು ಹೋಗುವ ಭಾರ ಪ್ರಾಯಶಃ ಅಧಿಕವೆನಿಸಬಹುದು. ಭಾವಾಂತರಂಗದ ಪ್ರತೀ ಅಲೆಯ ಏರಿಳಿತಗಳ ಹೊಯ್ದಾಟದಲ್ಲಿ ಸಮಪಾಲನ್ನು ತಂದೊದಗಿಸಿದ ೨೦೨೪ಕ್ಕೆ ಸಂಭ್ರಮವೆನ್ನುವ ಬಿರುದಿನ ಹೊರತು ಏನೇನ್ನಬೇಕು? ಪರಿಚಿತ ಭಾವವೊಂದರ ಪರಿಶುದ್ಧತೆಯ ಪ್ರಶ್ನೆ ಪತ್ರಿಕೆಯದು ೨೪ರ ಬಹು ಸಂಭ್ರಮ.

ಪೂರ್ಣವಿರಾಮದ ಮೊದಲು,
ಪರಿಚಿತದೆದುರು ಅಪರಿಚಿತವಾಗಿಯೂ ಅವ್ಯಾಹತವಾಗಿ ಮನದ ಹಾಲ್ಗಡಲಿನಲ್ಲಿ, ಶುಕ್ಲ ದಶಮಿಯ ಬೆಳ್ಳಿ ಬಿಂದಿಗೆಯಂತೆ ಕಂಗೊಳಿಸಿದ, ಉಸುಕು ಮರೆತರೂ ಅಲೆ ಮರೆಯದ, ನೆನಪು ಮಾಸಿದರೂ, ಉಸಿರು ಮರೆಯದ ದಿವ್ಯ ಸೌಮ್ಯ ಸಾನ್ನಿಧ್ಯಗಳಿಗೆ, ಪರಿಪಕ್ವತೆಯ ಮುಳ್ಳು ಹಾದಿಯಲ್ಲಿ ಪರಿಪೂರ್ಣತೆಯ ನಂದಾದೀವಿಗೆಯನ್ನು ನಿಸ್ವಾರ್ಥದಿಂದ ತಿಳಿದೋ, ತಿಳಿಯದೆಯೋ ಹೊತ್ತಿಸಿದ ಕೆಲವು ಹಲವು ಸುಂದರ ಮನಗಳಿಗೆ ಹೃದಯ ತುಂಬಿದ ಕೃತಜ್ಞತೆಗಳು!

೨೦೨೫ ನಗುವ ಜೊತೆಯಲ್ಲಿನ ನವನವೀನ ಭಾವಗಳನ್ನು ನಯವಾಗಿ, ನೈಜವಾಗಿ, ನಿರಂತರತೆಯ ನದಿಯಾಗಿ ನಿಮ್ಮೊಡಲ ತುಂಬಲಿ.

-ಇಂತಿನಿಮ್ಮ,
ಅಪರಿಚಿತೆ

One Comment

  • Sudha

    ಕೊನೆಯ ಕಂತು ಓದಿದೆ. ಚಲೊ ಇದೆ..‌24 ರ ಖುಷಿ ವಿದಾಯ, 25 ರ ನವೀನತೆಯ ಆರಂಭ

Leave a Reply

Your email address will not be published. Required fields are marked *