ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ಧತಿಯ ಅನಿವಾರ್ಯತೆ 2
ಕಲ್ಪನಾತೀತ
ಇವರ ಸಂಯೋಜನೆಯಲ್ಲಿ
“ಸಾಹಿತ್ಯ ರಚನೆಕಾರರಿಗೆ ಮನ್ನಣೆ 2024”
“ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ಧತಿಯ ಅನಿವಾರ್ಯತೆ”
ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಬಂದ ಪ್ರಬಂಧ
‘ಭಾರತ’ ಎಂಬ ಪದವೇ ತಿಳಿಸುವಂತೆ ಜ್ಞಾನದಲ್ಲಿ ತೊಡಗಿಕೊಂಡು ಪ್ರಕಾಶಮಾನವಾಗಿ ಕಂಗೊಳಿಸುವ ಭವ್ಯ ರಾಷ್ಟçವೇ ಭಾರತ.ಪುರಾತನ ಕಾಲದಿಂದಲೂ ಇಲ್ಲಿ ಜ್ಞಾನಪರಂಪರೆಯು ಅನೂಚಾನವಾಗಿ ಹರಿದುಬರುತ್ತಾ ಇದೆ. ಪುಣ್ಯ ಭೂಮಿ ಭಾರತದಜೀವಾಳವಾಗಿರುವುದು ಅಥವಾ ಭಾರತದ ಸತ್ತ್ವ ಅಡಗಿರುವುದು ಭಾರತೀಯ ಸಂಸ್ಕೃತಿಯಲ್ಲಿ. ಈ ಭಾರತೀಯ ಸಂಸ್ಕೃತಿಯ ಬೆನ್ನೆಲುಬಾಗಿರುವುದೇ ಭಾರತೀಯ ಶಿಕ್ಷಣ ಪದ್ಧತಿ.
‘ಶಿಕ್ಷಣ’ ಎಂಬ ಪದವು ‘ಶಿಕ್ಷ – ವಿದ್ಯೋಪಾದಾನೇ’ ಎಂಬ ಮೂಲ ಧಾತುವಿನಿಂದ ಉಂಟಾಗಿದೆ. ಅರ್ಥಾತ್ ವಿದ್ಯೆಯನ್ನು ಪಡೆದುಕೊಳ್ಳುವುದೇ ಶಿಕ್ಷಣ. ವಿದ್ಯೆ ಎಂದರೇನೆAಬ ಜಿಜ್ಞಾಸೆಗೆ ಶಾಸ್ತçವು ಉತ್ತರಿಸುತ್ತದೆ “ಸಾ ವಿದ್ಯಾ ಯಾ ವಿಮುಕ್ತಯೇ”. ಯಾವುದು ಬಂಧನದಿAದ ಬಿಡುಗಡೆಗೊಳಿಸುವುದೋ ಅದೇ ವಿದ್ಯೆ, ಅದನ್ನು ಪಡೆದುಕೊಳ್ಳುವುದೇ ಶಿಕ್ಷಣ. ನಮಗರಿವಿಲ್ಲದೆಯೇ ನಾವು ಅನೇಕ ಬಂಧನಗಳಿಗೆ ಸಿಲುಕಿಕೊಂಡಿರುತ್ತೇವೆ. ನಮ್ಮಲ್ಲಿನ ದುಷ್ಟ ಪ್ರವೃತ್ತಿಗಳು, ಕಾಮನೆಗಳು, ಅಜ್ಞಾನ, ಅಹಂಕಾರ ಇವುಗಳು ನಮ್ಮನ್ನು ಬಂಧಿಸಿರುವ ಬAಧನಗಳು. ಶಿಕ್ಷಣವನ್ನು ಪಡೆಯುತ್ತಾ ಹೋದಂತೆ ಈ ಎಲ್ಲಾ ಬಂಧನಗಳಿAದ ಕಳಚುತ್ತಾ ಬಿಡುಗಡೆಯ ಹಾದಿಯತ್ತ ಪಯಣ ಸಾಧ್ಯವಾಗುತ್ತದೆ.
ಬಿಡುಗಡೆಯ ಪರಮ ಗುರಿ ಯಾವುದೆಂದು ನೋಡುವುದಾದರೆ ಅದು ಮೋಕ್ಷಪ್ರಾಪ್ತಿ. ಈ ಮಾನವ ಜನ್ಮದಲ್ಲಿ ಸಾಧಿಸಬೇಕಾದವು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು. ಧರ್ಮವೆಂಬ ತಳಹದಿಯಲ್ಲಿ ಅರ್ಥ ಮತ್ತು ಕಾಮಗಳನ್ನು ಅರ್ಜಿಸಿ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಾ ಆತ್ಮೋನ್ನತಿಯನ್ನು ಹೊಂದಿ ಈ ಜನ್ಮ ಮರಣವೆಂಬ ಬಂಧನ ಚಕ್ರದಿಂದ ಬಿಡುಗಡೆ ಪಡೆದು ಆನಂದಮಯ ಸ್ಥಿತಿಯನ್ನು ಅನುಭವಿಸುವುದೇ ಮೋಕ್ಷ ಅಥವಾ ವಿಮುಕ್ತಿ. ಈ ವಿಮುಕ್ತಿಯನ್ನು ತಂದುಕೊಟ್ಟು ಜೀವನದ ಅಂತಿಮ ಲಕ್ಷ್ಯವನ್ನು ಸಾಧಿಸಲು ಸಹಕಾರಿಯಾಗಿರುವುದೇ ಶಿಕ್ಷಣ.
ಭವಿಷ್ಯಕ್ಕೆ ಅಗತ್ಯವಿರುವ ಶಿಕ್ಷಣ ಪದ್ಧತಿಯು ಹೇಗಿರಬೇಕೆಂಬುದನ್ನು ಯೋಜಿಸಬೇಕಾದಲ್ಲಿ ವರ್ತಮಾನದಲ್ಲಿ ಯಾವ ರೀತಿ ಇದೆಯೆಂದು ಯೋಚಿಸಬೇಕು, ಭೂತಕಾಲದಲ್ಲಿದ್ದ ಪರಿಯೇನು ಎಂಬುದನ್ನೂ ಅವಲೋಕಿಸಬೇಕಾಗುತ್ತದೆ. ತಂದೆತಾಯಿಗಳಿಬ್ಬರೂ ಉದ್ಯೋಗಿಗಳಾದ್ದರಿಂದ ಮಗುವು ತನ್ನ ಎರಡು-ಮೂರು ವರ್ಷ ವಯಸ್ಸಿನಲ್ಲಿ ಬೇಬಿ ಸಿಟ್ಟಿಂಗ್ ಗೆ ಹೋಗುವ ಮುಖಾಂತರ ತನ್ನ ಶಿಕ್ಷಣದ ಪಯಣವನ್ನಾರಂಭಿಸಿದರೆ ಯುವಾವಸ್ಥೆಯನ್ನು ಹೊಂದಿ ಅನೇಕ ಪದವಿ-ಪುರಸ್ಕಾರಗಳನ್ನು ಪಡೆಯುವ ಮೂಲಕ ಮುಕ್ತಾಯಗೊಳಿಸುತ್ತದೆ. ಈ ಶಾಲಾಕಾಲೇಜು ಶಿಕ್ಷಣದ ಗುರಿ ಏನು ಎಂದರೆ ಪರೀಕ್ಷೆಯ ವಾರ್ಷಿಕ ಫಲಿತಾಂಶ ಅತ್ಯಧಿಕವಾಗಿರಬೇಕು, ಸಮಾಜದಲ್ಲಿ ಘನತೆಯನ್ನು ಕಾಯ್ದಿರಿಸಿಕೊಂಡ ಕ್ಷೇತ್ರದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬೇಕು, ದುಡ್ಡಿನ ಕಂತು-ಕಂತುಗಳನ್ನು ಕಟ್ಟಿ ಪ್ರತಿಷ್ಠಿತ ಕಾಲೇಜಿನಲ್ಲಿ ಓದಿ ಅಂತಿಮವಾಗಿ ಬಾಚಿ-ಬಾಚಿ ದುಡ್ಡನ್ನು ಪಡೆಯುವ ಯಾವುದೋ ಪರ ಊರಿನಲ್ಲಿಯೋ ಪರ ದೇಶದಲ್ಲಿಯೋ ಉದ್ಯೋಗಕ್ಕೆ ಸೇರಬೇಕು. ಇಷ್ಟನ್ನು ಸಾಧಿಸಿ ಬಿಟ್ಟರೆ ತಂದೆ-ತಾಯಿಗಳಿಗೂ ಎಲ್ಲಿಲ್ಲದ ಹೆಮ್ಮೆ, ಅಪಾರ ಸಂತೋಷ, ಜೀವನ ಸಾರ್ಥಕತೆಯ ಭಾವ !!
ಇಂತಹ ಶಿಕ್ಷಣ ನಿಜವಾದ ಶಿಕ್ಷಣವೇ? ಬೆಳಗ್ಗೆ ೧೦ ರಿಂದ ಸಂಜೆ ೫ ರ ವರೆಗೆ ಸಮವಸ್ತçವನ್ನು ಧರಿಸಿದೆಲ್ಲರೂ, ಸಮಾನವಾದ ಪಾಠ ಪುಸ್ತಕವನ್ನು ಇಟ್ಟುಕೊಂಡು, ಸಮಾನವಾದ ಬೋಧನೆಯನ್ನು ಕೇಳಿಸಿಕೊಂಡು, ಸಮಾನವಾದ ಟಿಪ್ಪಣಿಯನ್ನು ರಚಿಸಿಕೊಂಡು,ಏಕಮುಖವಾಗಿ ವಿದ್ಯಾರ್ಥಿಯನ್ನು ಪರೀಕ್ಷಿಸಬಲ್ಲಂತಹ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದೇ ನಿಜವಾದ ಶಿಕ್ಷಣವೇ? ಇದು ವಿದ್ಯೆಯ
ಅಂತಿಮ ಗುರಿಯಾದ ಬಂಧನದಿಂದ ಬಿಡುಗಡೆ ಎಂಬುದರತ್ತ ಕರೆದೊಯ್ಯುತ್ತಿದೆಯೇ? ಪುಸ್ತಕಗಳ ಹೊರೆಯೆಂಬ ಬಂಧನವನ್ನು ಹೊತ್ತುಕೊAಡು, ಎಲ್ಲಾ ತಲೆಗೂ ಒಂದೇ ಪಾಠವೆಂಬ ಪಾಠ್ಯ ಬಂಧನಕ್ಕೆ ಒಳಪಟ್ಟು, ಬೆಳಗ್ಗೆ ೧೦ ರಿಂದ ಸಂಜೆ ೫ ಎಂಬ ಸಮಯದ ಪರಿಮಿತಿಯ ಬಂಧನದಲ್ಲಿ ಇಂತಿಷ್ಟು ನಿಗದಿತ ಸಮಯದಲ್ಲಿ ಪೂರ್ವನಿರ್ಧಾರಿತ ಪಾಠ್ಯಬಿಂದುಗಳನ್ನು ಮುಗಿಸಬೇಕೆಂಬ ಒತ್ತಡದ
ಬಂಧನದಲ್ಲಿ, ರ್ಯಾಂ ಕ್ ಬರಲೇ ಬೇಕೆಂಬ ಆಗ್ರಹಾತ್ಮಕ ಬಂಧನದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪಾಡೇನು? ಬಂಧನಗಳ ಬಂಧದಲ್ಲಿ ಸಿಲುಕಿಹಾಕಿಕೊಂಡಿರುವ ಶಿಕ್ಷಣಪದ್ಧತಿಯಿಂದ ಬಿಡುಗಡೆ ಎಂಬ ಲಕ್ಷö್ಯವನ್ನು ತಲುಪುವುದು ಸಾಧ್ಯವೇ? ಈ ರೀತಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ದುಡ್ಡು ಸಂಪಾದನೆ ಎಂಬ ಬಂಧನದ ಪಾಶಕ್ಕೆ ಸಿಲುಕಿ ತಮ್ಮ ಆರೋಗ್ಯ-ದಿನಚರಿ, ಆಚಾರ-ವಿಚಾರ, ಮನೆ-ಮಠ ಇತ್ಯಾದಿ ವಿಷಯಗಳ ಬಗ್ಗೆಯೂ ಗಮನ ಹರಿಸದೆ ಒತ್ತಡದ ಯಾಂತ್ರಿಕ ಜೀವನವೆಂಬ ಬಂಧನದಲ್ಲಿ ಒದ್ದಾಡುತ್ತಾರೆ. ಇದು ನಿಜವಾದ ಶಿಕ್ಷಣ ಖಂಡಿತವಾಗಿಯೂ ಅಲ್ಲ. ಬದಲಾಗಿ ಇದು ವೈಭವೋಪೇತವಾದ ಭಾರತದ ವಿಜೃಂಭಣೀಯ ಸಾಮಾಜಿಕ ಸ್ಥಿತಿ-ಗತಿಯನ್ನು ಕಂಡಂತಹ
ಪರಕೀಯರ ಹೊಟ್ಟೆಯಲ್ಲಿನ ಕಿಚ್ಚು ಧಗಧಗಿಸಿ ರೌದ್ರರೂಪವನ್ನು ತಾಳಿ, ಭಾರತದ ವೈಭವತೆಗೆ ಕಾರಣವಾದ ಶಿಕ್ಷಣ ಪದ್ಧತಿಯನ್ನು ಭಸ್ಮಗೊಳಿಸಿದ ದುರುಳ ದುಃಸ್ಥಿತಿಯೇ ಹೊರತು ಮತ್ತೇನೂ ಅಲ್ಲ. ಭಾರತದ ಹಳ್ಳಿ-ಹಳ್ಳಿಗಳಲ್ಲಿದ್ದ ಗುರುಕುಲಗಳು ಮಾಯವಾಗಿ ಟಿ.ಬಿ.ಮೆಕಾಲೆಯ ಸಹಕಾರದಿಂದ ಬ್ರಿಟನ್ ಸರಕಾರ ಜಾರಿಗೊಳಿಸಿದ ಹೊಸ ಶಿಕ್ಷಣ ನೀತಿಯನ್ನು ಅನುಸರಿಸುವ ಇಂಗ್ಲಿಷ್ ಸ್ಕೂಲ್, ಮಾಮಾರ್ಡನ್ ಸ್ಕೂಲ್, ಪಬ್ಲಿಕ್ ಸ್ಕೂಲ್ ಗಳು ತಲೆ ಎತ್ತಿದವು. ಪ್ರಸ್ತುತ ಈ ಮೆಕಾಲೆ ಶಿಕ್ಷಣವು ಭಾರತದ ಹಳ್ಳಿ-ಹಳ್ಳಿಯಲ್ಲಿಯೂ ತನ್ನ ಕದಂಬ ಬಾಹುವನ್ನು ಚಾಚಿ, ಶಿಕ್ಷಣದಲ್ಲಿನ ಭಾರತೀಯತೆಯನ್ನು ಶೂನ್ಯಗೊಳಿಸಿರುವುದು ನಿಜವಾಗಿಯೂ ಶೋಚನೀಯ. ಇದು ಕಳೆದೆರಡು ಶತಮಾನಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಆದಂತಹ ಏಕಾಏಕಿಯಾದ ಬದಲಾವಣೆ.
ಭಾರತೀಯ ಶಿಕ್ಷಣ ಎಂದರೇನು ಮತ್ತು ಭಾರತೀಯ ಶಿಕ್ಷಣ ಪದ್ಧತಿಯು ಯಾವುದು ಎಂಬುದು ಮುಂದಿರುವ ಪ್ರಶ್ನೆ. ಯಾವುದು ಭಾರತೀಯ ಸಂಸ್ಕೃತಿಯನ್ನು ತಿಳಿಸಿಕೊಡುವುದೋ ಅದೇ ಭಾರತೀಯ ಶಿಕ್ಷಣ. ಭಾರತೀಯ ಸಂಸ್ಕೃತಿಯ ಆಗರ ವೇದಗಳು. ಈ ವೇದಗಳು ಮಾನವರಾದ ಪ್ರತಿಯೊಬ್ಬರೂ ಜೀವನವನ್ನು ಹೇಗೆ ನಡೆಸಬೇಕೆಂದು ಮಾರ್ಗದರ್ಶನ ನೀಡುತ್ತವೆ. ಪ್ರತಿಯೊಂದು ಹೊಸ ವಸ್ತುವನ್ನು ಕೊಂಡುಕೊಳ್ಳುವಾಗ ಅದನ್ನು ಉಪಯೋಗಿಸುವ ವಿಧಾನ, ಮುಂಜಾಗ್ರತಾಕ್ರಮಗಳೇ ಮೊದಲಾದುದನ್ನು ತಿಳಿಸುವ ಕೈಪಿಡಿಯೊಂದು ಅದರೊAದಿಗೆ ಸಿಗುತ್ತದೆ. ಅದೇ ರೀತಿ ಈ ಮಾನವ ಜನ್ಮವನ್ನು ದಯಪಾಲಿಸಿದ ಭಗವಂತನೂ ಜೀವನಕ್ಕೊಂದು ಕೈಪಿಡಿಯನ್ನಿತ್ತಿದ್ದಾನೆ, ಅದುವೇ ವೇದವು. ಈ ವೇದಗಳು ಯಾವುದೇ ದೇಶ-ಕಾಲ-ಜಾತಿ-ಭೇದ-ಲಿಂಗ-ವಯಸ್ಸಿನ ಮಿತಿ ಇಲ್ಲದೇ ಎಲ್ಲರೂ ಅಧ್ಯಯನ ಮಾಡಬೇಕಾಗಿರುವಂತಹವು ಎಂದು ಸ್ವತಃ ವೇದಗಳೇ ಸಾರಿ ಹೇಳುತ್ತವೆ. “ಯಥೇಮಾಂ ವಾಚಂ ಕಲ್ಯಾಣೀಮಾವದಾನಿ ಜನೇಭ್ಯಃ” (ಯಜುರ್. ೨೬.೨) ಈ ಮಂಗಳಕರವಾದ ವೇದವಾಣಿಯನ್ನು ಮಾನವರೆಲ್ಲರ ಸಲುವಾಗಿ ಉಪದೇಶಿಸುತ್ತಿದ್ದೇನೆ ಎಂದು. ಈ ವೇದಗಳು ಮಾನವನು ಕಾಣುವ ಜೀವನದ ಹಂತ-ಹಂತವನ್ನೂ ದಾಟುವ ಮಾರ್ಗದರ್ಶನ, ಈ ಜಗತ್ತಿನಲ್ಲಡಗಿರುವ ಸತ್ಯ ಸಂಗತಿಳ ತಿಳಿವಳಿಕೆ, ನಮ್ಮಲ್ಲೇಳುವ ಪ್ರಶ್ನೆಗಳಿಗೆ ವೈಜ್ಞಾನಿಕವಾದ ಉತ್ತರ ಇವೆಲ್ಲವನ್ನೂ ಸಮರ್ಪಕವಾಗಿ ಕೊಡುತ್ತವೆ. ಹಾಗಾಗಿ ಮಾನವನು ಪಡೆಯಬೇಕಾದ ಶಿಕ್ಷಣದ ಬಗ್ಗೆಯೂ ತುಂಬಾ ಚೆನ್ನಾಗಿ ಬೆಳಕು ಚೆಲ್ಲುತ್ತವೆ.
ವೇದೋಕ್ತ ಶಿಕ್ಷಣದ ಅಥವಾ ಭಾರತೀಯ ಶಿಕ್ಷಣದ ಆರಂಭ ಆಗುವುದು ಶಿಶುವಿನ ಗರ್ಭಾವಸ್ಥೆಯಿಂದಲೇ! ವೇದಗಳಲ್ಲಿ ಆತ್ಮನ ಉನ್ನತಿಗಾಗಿ ಹದಿನಾರು ಸಂಸ್ಕಾರಗಳು ಹೇಳಲ್ಪಟ್ಟಿವೆ. ಗರ್ಭಾಧಾನ, ಪುಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ಅನ್ನಪ್ರಾಶನ, ನಿಷ್ಕ್ರಮಣ, ಕರ್ಣವೇಧ, ಚೂಡಾಕರ್ಮ, ಉಪನಯನ, ವೇದಾರಂಭ, ಸಮಾವರ್ತನ, ವಿವಾಹ, ವಾನಪ್ರಸ್ಥ, ಸಂನ್ಯಾಸ, ಅಂತ್ಯೇಷ್ಟಿ. ಸಂತಾನವನ್ನು ಪಡೆಯಬೇಕೆಂಬ ಇಚ್ಛೆ ಹೊಂದಿರುವ ಪತಿ-ಪತ್ನಿಯರು ಉತ್ತಮ ಪ್ರಜ್ಞಾವಂತ ಪ್ರಜೆಯನ್ನು ಹೊಂದಲು ಮಾಡಿಕೊಳ್ಳುವ ಪೂರ್ವತಯಾರಿಯೇ ಗರ್ಭಾಧಾನ. ಗರ್ಭಧಾರಣೆಯ ಅನಂತರ ಗರ್ಭಕ್ಕೂ, ಮಗುವಿಗೂ, ಗರ್ಭಿಣಿಗೂ ಬಲವನ್ನು ಹಿಂಡಿ ಕೊಟ್ಟು ಸದೃಢರಾಗುವಂತೆ ಮಾಡುವ ಸಂಸ್ಕಾರ ಪುಂಸವನ. ಆರೇಳನೆಯ ತಿಂಗಳು ಗರ್ಭಸ್ಥ ಶಿಶುವಿನ ಬೌದ್ಧಿಕ, ಮಾನಸಿಕ ಶ್ರೇಯಸ್ಸಿಗಾಗಿ ಸೀಮಂತೋನ್ನಯನ ಸಂಸ್ಕಾರ. ಇನ್ನು ಮುಂದಿನ ಎಂಟು ಸಂಸ್ಕಾರಗಳೂ ಎಂಟು ವರ್ಷದ ಒಳಗೆ ಮಾಡಿಸುವುದಾಗಿದೆ. ಅಂದರೆ ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಗಾದೆಯಂತೆ ಎಳೆಯ ವಯಸ್ಸಿನಲ್ಲಿ ಕೊಟ್ಟ ಸಂಸ್ಕಾರ, ತಿಳಿವಳಿಕೆಯು ಮಗುವಿಗೆ ಸುಂದರ
ಜೀವನವನ್ನು ರೂಪಿಸಿಕೊಳ್ಳಲು ಸಹಕರಿಸುವುದು. ಏಳನೆಯ ವಯಸ್ಸಿನ ತನಕ ಬಾಲರು ತಂದೆ-ತಾಯಿ, ಅಜ್ಜ-ಅಜ್ಜಿಯರೊಂದಿಗೆ ನಲಿ-ನಲಿಯುತ್ತಾ, ಆಟವಾಡುತ್ತಾ, ಖುಷಿ-ಖುಷಿಯಿಂದ ಬಾಲ್ಯವನ್ನು ಕಳೆಯಬೇಕು. ಎಂಟನೆಯ ವಯಸ್ಸಿನಲ್ಲಿ ಉಪನಯನ ಸಂಸ್ಕಾರವನ್ನು ಮಾಡಿಸಿ ಗುರುಕುಲಕ್ಕೆ ಕರೆದೊಯ್ದು ಜ್ಞಾನಾರ್ಜನೆಗಾಗಿ ತಮ್ಮ ಮಗುವನ್ನು ಗುರುಗಳಿಗೊಪ್ಪಿಸಿ ಬರುವ ಸಂಸ್ಕಾರವೇ ಉಪನಯನ. ಗುರುಗಳು ವಿದ್ಯಾರ್ಥಿಗಳಿಗೆ ಮಾಡುವ ಪ್ರಥಮ ಪಾಠವೇ ವೇದಾರಂಭ. ಆಚಾರ್ಯರು ಅರ್ಥಾತ್ ಗುರುಗಳು ನೂತನ ಬ್ರಹ್ಮಚಾರಿಗೆ ಗಾಯತ್ರೀಮಂತ್ರದ ಉಪದೇಶ ಮಾಡುವ ಮುಖಾಂತರ ಪಾಠದ ಆರಂಭವನ್ನು ಮಾಡುತ್ತಾರೆ. ಈ ಎಲ್ಲಾ ಸಂಸ್ಕಾರಗಳು ಗಂಡು-ಹೆಣ್ಣೆAಬ ಭೇದವಿಲ್ಲದೇ, ಜಾತಿ-ಪಂಥಗಳೆ ತರತಮವಿಲ್ಲದೇ ಎಲ್ಲರಿಗೂ ಮಾಡಲೇ ಬೇಕಾದವುಗಳು. ಹಾಗಾಗಿ ಬ್ರಹ್ಮಚಾರಿಗಳಂತೆ ಬ್ರಹ್ಮಚಾರಿಣಿಯರಿಗೂ ಉಪನಯನ, ಗುರುಕುಲವಾಸಗಳು ಇವೆ. ಗುರುಕುಲದಲ್ಲಿ ಇಪ್ಪತ್ತನಾಲ್ಕು ಗಂಟೆ ಆಚಾರ್ಯವರ್ಯರ, ಹಿರಿಯರ, ಸಜ್ಜನರ ಒಡನಾಟ. ತಮ್ಮ ವಿದ್ಯಾರ್ಥಿಗಳನ್ನು ಅತ್ಯಂತ ನಿಕಟವಾಗಿರಿಸಿಕೊಂಡು ಅವರೊಂದಿಗೆ ಬೆರೆತು, ಅವರ ನೋವು-ನಲಿವುಗಳಿಗೆ ಸ್ಪಂದಿಸುತ್ತಾ, ಅವರ ಕುತೂಹಲ-ಪ್ರಶ್ನೆಗಳನ್ನು ಪರಿಹರಿಸುತ್ತಾ, ದೋಷಯುಕ್ತ ಕಾರ್ಯವನ್ನು ಮಾಡಿದಾಗ ಅವರನ್ನು ತಿದ್ದುತ್ತಾ, ಉತ್ತಮ ಕಾರ್ಯಗಳನ್ನು ಮಾಡಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಅಡಗಿರುವ ವಿವಿಧ ಕೌಶಲ-ಸಾಮರ್ಥ್ಯಗಳನ್ನು ಗಮನಿಸಿ ಅವುಗಳನ್ನು ವಿಕಾಸಗೊಳಿಸುತ್ತಾ, ಪ್ರತಿಯೊಬ್ಬ ವಿದ್ಯಾರ್ಥಿಯ ದೈಹಿಕ-ಮಾನಸಿಕ-ಆಧ್ಯಾತ್ಮಿಕ ಶ್ರೇಯೋಭಿವೃದ್ಧಿಗಾಗಿ ಶ್ರಮವಹಿಸುವವರು ಆಚಾರ್ಯರು. ತಮ್ಮ ಗುರುಕುಲದಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಸಮಾಜದಲ್ಲಿ ಪ್ರಾಮಾಣಿಕವಾಗಿ ಸರಳ-ಸಜ್ಜನಿಕೆಯ ಬಾಳನ್ನು ಬಾಳುವ, ಸಮಾಜದ ಒಳಿತಿಗಾಗಿ ಶ್ರಮಪಡುವ, ಚಾರಿತ್ರ್ಯವಂತ ಪ್ರಜೆಯನ್ನಾಗಿಸುವ ಹಿರಿದಾದ ಜವಾಬ್ದಾರಿಯನ್ನು ಹೊತ್ತವರು
ಆಚಾರ್ಯರು. ಗುರುಕುಲಗಳಲ್ಲಿ ಬ್ರಹ್ಮಚಾರಿ-ಬ್ರಹ್ಮಚಾರಿಣಿಯರು ಯಾವುದೇ ಒತ್ತಡ, ಕಟ್ಟುಪಾಡುಗಳಿಗೊಳಪಡದೇ, ಸುಂದರ ಪ್ರಕೃತಿಮಾತೆಯ ಮಡಿಲಿನಲ್ಲಿ, ಗುರುಕುಲದ ದಿನಚರ್ಯೆ-ಋತುಚರ್ಯೆಗಳಿಗೆ ಬದ್ಧರಾಗಿ, ನಿಯಮಿತ ಯೋಗಾನುಷ್ಠಾನಗಳನ್ನು ಪಾಲಿಸುತ್ತಾ, ಸತ್ತ್ವಯುತಆಹಾರವನ್ನು ಸೇವಿಸುತ್ತಾ, ಉತ್ತಮ ವಿಚಾರಗಳನ್ನು ಚರ್ಚಿಸುತ್ತಾ, ಸತ್ಯಾನ್ವೇಷಿಗಳಾಗಿ ಜ್ಞಾನಾರ್ಜನೆಯನ್ನು ಮಾಡುತ್ತಾರೆ. ಗುರುಕುಲಗಳಲ್ಲಿ ಕಲಿಯುವುದು ಜೀವನ ಶಿಕ್ಷಣವನ್ನೇ ಹೊರತು ಪುಸ್ತಕದ ಬದನೆಕಾಯಿಯನ್ನಲ್ಲ. ನೂರು ವರ್ಷಗಳ ಮುಂದಿನ ದೀರ್ಘ ಬಾಳನ್ನು ಬಾಳಲು ಬೇಕಾದೆಲ್ಲಾ ಪೂರ್ವತಯಾರಿಯನ್ನು ಮಾಡಿಕೊಳ್ಳುವುದು ಜೀವನದ ಮೊದಲ ಘಟ್ಟವಾದ ಈ ಬ್ರಹ್ಮಚರ್ಯ ಕಾಲದಲ್ಲಿ. ಆದ್ದರಿಂದ ಇಂತಹ ಶಿಕ್ಷಣವನ್ನು ಪಡೆದವನು ಎಂದಿಗೂ ಜೀವನದಲ್ಲಿ ಸೋತು ಬೆಂಡಾಗಲು, ಹೇಡಿಯಾಗಿ ಆತ್ಮಹತ್ಯೆ ಮಾಡಿಕೊಳ್ಳಲು, ಲಂಚಕೋರನಾಗಲು, ಭವ್ಯಬAಗಲೆಯಲ್ಲಿ ವಾಸ ಮಾಡುತ್ತಾ ಐಶಾರಾಮಿ ಕಾರುಗಳಲ್ಲಿ ಓಡಾಡಲು, ಅತ್ಯಾಚಾರ-ಅನಾಚಾರ-ಕಪಟತನಗಳನ್ನು ಮಾಡಲು ಖಂಡಿತವಾಗಿಯೂ ಸಾಧ್ಯವಿಲ್ಲ. ಬದಲಾಗಿ ಆದರ್ಶಮಯ ಜೀವನವನ್ನು ನಡೆಸುವ ಚಾರಿತ್ತ್ರ್ಯವಂತ ಪ್ರಜೆಯಾಗಿ ಸಮಾಜದಲ್ಲಿ ಬದುಕುವವನಾಗುತ್ತಾನೆ. ಯಾಕೆಂದರೆ ಗುರುಕುಲಗಳಲ್ಲಿ ಕೊಡುವ ಭಾರತೀಯ ಶಿಕ್ಷಣವು ಅಪಾರ ಮೌಲ್ಯಯುತವಾಗಿರುವಂತಹದು, ವಿದ್ಯಾರ್ಥಿಯ ಸುಂದರ ಭವಿಷ್ಯವನ್ನು ರೂಪಿಸುವಂತಹದು.
ಗುರುಕುಲಗಳಲ್ಲಿ ಶಿಸ್ತು, ಸಮಯಪಾಲನೆ ಇರುವುದು. ಆದರೆ ನಿಗದಿತ ಕಾಲಾವಧಿಯಲ್ಲಿ ನಿಗದಿತ ಪಾಠ, ಒಂದಾದ ಮೇಲೊಂದು ವಿಷಯದ ಬೋಧನೆ, ತಿಂಗಳಿಗೆ ಹಾಗೂ ವರ್ಷಕ್ಕೆ ಇಂತಿಷ್ಟು ಪಠ್ಯವಿಷಯಗಳು ಕಲಿಸಲ್ಪಟ್ಟಿರಬೇಕೆಂಬ ಯಾವುದೇ ಕಟ್ಟುಪಾಟುಗಳು ಇಲ್ಲಿಲ್ಲ. ಬದಲಾಗಿ ಮುಕ್ತ ಮನಸಿನ ವಿರ್ದ್ಯಾರ್ಥಿಗಳು ಆಚಾರ್ಯರ ಪರಿವೀಕ್ಷಣೆಯಡಿಯಲ್ಲಿ ಮುಕ್ತರಾಗಿರುತ್ತಾರೆ. ಆಚಾರ್ಯರು ಸದಾಕಾಲ ವಿದ್ಯಾರ್ಥಿಗಳ ಜೊತೆಗೇ ಇರುವುದರಿಂದ ಅವರ ಆಸಕ್ತಿ, ಸಾಮರ್ಥ್ಯಗಳನ್ನು ಗಮನಿಸುತ್ತಾ, ಪ್ರತಿಯೊಬ್ಬರ ಅಭಿರುಚಿ, ಆಸಕ್ತಿ ಕ್ಷೇತ್ರವನ್ನು ಗುರುತಿಸುತ್ತಾರೆ. ಆಯಾ ವಿದ್ಯಾರ್ಥಿಯನ್ನು ಅದೇ ಕ್ಷೇತ್ರದಲ್ಲಿ ಮುಂದುವರಿಯಲು ಸಲಹೆ, ಮಾರ್ಗದರ್ಶನವನ್ನು ನೀಡುತ್ತಾರೆ. ಅದಕ್ಕೆ ಹೊಂದಿಕೊAಡು ವಿದ್ಯಾರ್ಥಿಗಳು ಆಯಾ ವಿಷಯದಲ್ಲಿ ಪಾರಂಗತರಾದ ಆಚಾರ್ಯರೊಂದಿಗೆ ತಮ್ಮ ತಮ್ಮ ಅಧ್ಯಯನ ವಿಷಯಗಳಲ್ಲಿ ಪೂರ್ತಿ ಸಮಯ ತಲ್ಲೀನರಾಗಿರುತ್ತಾರೆ. ಆಹಾ! ಅಧ್ಯಯನದಲ್ಲಿ ಎಂತಹಾ ತನ್ಮಯತೆ! ಆನಂದಾನುಭೂತಿ!!
ಕಲಿಕೆಯಲ್ಲಿ ಮಕ್ಕಳು ಆನಂದವನ್ನು ಕಾಣುವುದು ನಮ್ಮ ಪಠ್ಯವಿಷಯಗಳನ್ನು ಮಕ್ಕಳ ತಲೆಯಲ್ಲಿ ತುರುಕಿದಾಗ ಅಲ್ಲ. ಮುಗ್ಧ ಮನಸಿನ ಪುಟ್ಟ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಬೈಗುಳವು ಪ್ರತ್ಯುತ್ತರವಾಗಿ ಅವರ ಬಾಯಿ ಮುಚ್ಚಿಸಿ ಮನಸನ್ನು ಮುದುಡಿಸುವುದರಿಂದಲೂ ಅಲ್ಲ. ಅವರೊಂದಿಗೆ ತಾಳ್ಮೆಯನ್ನುಳ್ಳವರಾಗಿ ವ್ಯವಹರಿಸಿ ಅವರು ಕೇಳುವ ಚಿಕ್ಕ-ಪುಟ್ಟ ಪ್ರಶ್ನೆಗಳನ್ನೂ ಕಡೆಗಣಿಸದೇ ಪ್ರೀತಿಯಿಂದ ಸಮಾಧಾನದಿAದ ಉತ್ತರಿಸುತ್ತಾ ಮುಕ್ತವಾತಾವರಣದಲ್ಲಿ ಬಿಟ್ಟಾಗ ಕಲಿಕೆ ಆನಂದದಾಯಕವಾಗುತ್ತದೆ. ಅಷ್ಟೇ ಅಲ್ಲದೆ ಮಕ್ಕಳ ಆಸಕ್ತಿ-ಸಾಮರ್ಥ್ಯಗಳಿಗನುಗುಣವಾಗಿ ಶಿಕ್ಷಣವನ್ನು ಕೊಡಬೇಕು, ವಿಶೇಷ ತರಬೇತಿಯನ್ನು ನೀಡಬೇಕು. ಆಗ ಮಕ್ಕಳನ್ನು ಒಂದು ಕಡೆ ಕೂರಿಸಿ ಪುಸ್ತಕ-ಪೆನ್ನು ಹಿಡಿಸಿ ಒತ್ತಾಯವಾಗಿ ಓದಿಸಿ ಬರೆಸುವ, ಶಿಕ್ಷೆ ಕೊಟ್ಟು ಹಿಂಸಿಸುವ ಪ್ರಸಂಗವೇ ಬರುವುದಿಲ್ಲ. ಆದ್ದರಿಂದ ಪಾಲಕರು ತಮ್ಮ ಇಚ್ಛೆಗೆ ತಕ್ಕಂತೆ ಅಥವಾ ಸಮಾಜದಲ್ಲಿ ಯಾವ ಕ್ಷೇತ್ರದಲ್ಲಿ ಮುಂದುವರೆದರೆ ಪ್ರಾಶಸ್ತ್ಯವಿದೆ ಎಂಬುದನ್ನು ನೋಡಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಬಿಟ್ಟು, ತನ್ನ ಆಸಕ್ತಿ ಕ್ಷೇತ್ರದಲ್ಲಿ ಮುಂದುವರಿದ ಯಾವುದೇ ವಿದ್ಯಾರ್ಥಿಯು ಜೀವನದಲ್ಲಿ ಯಶಸ್ಸನ್ನು, ಗೆಲುವನ್ನು, ಸಂತೃಪ್ತಿಯನ್ನು ಕಾಣುವುದು ನಿಶ್ಚಿತ ಎಂಬ ಮಹತ್ವದ ವಿಷಯವನ್ನು ಅರ್ಥೈಸಿಕೊಂಡು ನಡೆದುಕೊಳ್ಳುವ ಅವಶ್ಯಕತೆ ಇದೆ.
ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಎರಡು ಬಗೆಯ ಶಿಕ್ಷಣವನ್ನು ಕೊಡಲಾಗುವುದು. ಮೊದಲನೆಯದಾಗಿ ಆಸಕ್ತಿ ಕ್ಷೇತ್ರಕ್ಕೆ ತಕ್ಕಂತೆ ಒAದು ಕ್ಷೇತ್ರದಲ್ಲಿ ಆಳವಾದ ಅಧ್ಯಯನ. ಸಂಗೀತ, ಗಣಿತ, ಖಗೋಲ, ವಾಸ್ತುಶಿಲ್ಪ, ವ್ಯಾಕರಣ, ಕುಂಬಾರಿಕೆ, ಬಡಗಿವೃತ್ತಿ, ಗೃಹನಿರ್ಮಾಣ ಶಾಸ್ತç, ಅಸ್ತç-ಶಸ್ತç ಪ್ರಯೋಗ, ವೈದ್ಯಕೀಯ ಶಾಸ್ತç, ಚಿಕಿತ್ಸಾ ಶಾಸ್ತç, ಭೌತವಿಜ್ಞಾನ, ರಸಶಾಸ್ತç ಯಾವುದಾದರೂ ಇರಬಹುದು. ಎರಡನೆಯದಾಗಿ ಎಲ್ಲರೂ ಮೂಲಭೂತವಾಗಿ ಪಡೆಯಬೇಕಾದ ಶಿಕ್ಷಣ. ಅದುವೇ ವೇದದ ಜ್ಞಾನ, ಜೀವನ ಮೌಲ್ಯಗಳ ಶಿಕ್ಷಣ. ಯೋಗಶಾಸ್ತçದಲ್ಲಿ ಯಮ- ನಿಯಮಗಳೆಂಬ ಐದೈದು ಜೀವನ ಮೌಲ್ಯಗಳನ್ನು ಹೆಸರಿಸಿದ್ದಾರೆ, ವಿವರಿಸಿದ್ದಾರೆ. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ
ಎಂಬೀ ಐದು ಯಮಗಳು ಪಂಚ ಸಾಮಾಜಿಕ ಕರ್ತವ್ಯಗಳು. ಅಹಿಂಸೆ ಎಂದರೆ ಬೇರೆ ಜೀವಜಂತುಗಳಿಗೆ ತೊಂದರೆ ಕೊಡದಿರುವುದು, ನಾವೂ ತೊಂದರೆಗೆ ಒಳಪಡದಿರುವುದು. ಸತ್ಯವೆಂದರೆ ಇರುವುದನ್ನು ಇರುವಂತೆ ಕಾಣುವುದು, ಹೇಳುವುದು. ಕಳ್ಳತನ ಮಾಡದಿರುವುದು ಅಸ್ತೇಯ. ಬ್ರಹ್ಮಚರ್ಯವೆಂದರೆ ಜ್ಞಾನದಲ್ಲಿ ತೊಡಗಿಕೊಳ್ಳುವುದು. ಸಂಪತ್ತನ್ನು ಕೂಡಿಡದೇ ನಮ್ಮ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತಾ
ಬರುವುದು ಅಪರಿಗ್ರಹ. ಇವು ಸಮಾಜದಲ್ಲಿ ಬಾಳುವ ಪ್ರತಿಯೊಬ್ಬನೂ ಸಮಾಜದ ಉನ್ನತಿಗಾಗಿ ಪಾಲಿಸಲೇ ಬೇಕಾದ ಕರ್ತವ್ಯಗಳಾಗಿವೆ. ವೈಯಕ್ತಿಕ ಕರ್ತವ್ಯಗಳಾದ ನಿಯಮಪಂಚಕಗಳು ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರಪ್ರಣಿಧಾನ ಎಂಬುದಾಗಿ. ಶೌಚ ಎಂದರೆ ಬಾಹ್ಯವಾಗಿ ಆಂತರಿಕವಾಗಿ ಶುದ್ಧತೆಯನ್ನು ಕಾಪಾಡಿಕೊಳ್ಳುವುದು. ಸಂತೋಷವೆAದರೆ ಮಾನಸಿಕ ಶಾಂತಿ-ನೆಮ್ಮದಿಗಳನ್ನು ಹೊAದುವುದು. ಕಷ್ಟವನ್ನು ಸಹಿಸಬಲ್ಲ ಸಹನಾಶಕ್ತಿಯೇ ತಪಸ್ಸು. ಸ್ವಾಧ್ಯಾಯವೆಂದರೆ ತನ್ನನ್ನು ತಾನು ಅವಲೋಕಿಸಿಕೊಳ್ಳುವುದು ಮತ್ತು ಸ್ವಂತವಾಗಿ ವಿವಿಧ ವಿಷಯಗಳನ್ನು ಕುರಿತು ಅಧ್ಯಯನ ಮಾಡುವುದು. ನನ್ನೊಂದಿಗೆ ಭಗವಂತನು ಸದಾ ಇದ್ದಾನೆ ಎಂಬ ವಿಶ್ವಾಸವನ್ನು ಹೊಂದಿ ವ್ಯವಹರಿಸುವುದು ಈಶ್ವರಪ್ರಣಿಧಾನ. ಈ ನಿಯಮಪಂಚಕಗಳು ಪ್ರತಿಯೊಬ್ಬ ಮನುಷ್ಯನು ತನ್ನ ವೈಯಕ್ತಿಕ ಉನ್ನತಿಗಾಗಿ ಪಾಲಿಸಲೇ ಬೇಕಾದ ಕರ್ತವ್ಯಗಳು. ಈ ಹತ್ತು ಯಮನಿಯಮಗಳನ್ನು ಯಾವುದೇ ಚ್ಯುತಿ ಉಂಟಾಗದAತೆ ಪ್ರತಿಯೊಬ್ಬ ಪ್ರಜೆಯೂ ಪಾಲಿಸತಕ್ಕದ್ದೆಂದು ಶಾಸ್ತçವು ಆದೇಶಿಸುತ್ತದೆ. ಇಂತಹ ಮೌಲ್ಯಯುತ ಪಾಠ-ಪ್ರವಚನಗಳು ಗುರುಹಿರಿಯರ ಅನುಭವ, ಮಾರ್ಗದರ್ಶನಗಳೊಂದಿಗೆ ನಡೆಯುತ್ತವೆ ಈ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ.
ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಪರೀಕ್ಷಾವಿಧಾನಗಳು ಹೇಗಿರುತ್ತವೆ ಎಂದು ನೋಡುವುದಾದರೆ, ಅವು ವಿದ್ಯಾರ್ಥಿಯ ಪ್ರಗತಿ-ಅವನತಿಗಳನ್ನು ಸರ್ವತೋಮುಖವಾಗಿ ಅವಲೋಕಿಸುತ್ತವೆ. ಪೂರ್ವನಿಗದಿತ ಸಮಯದಲ್ಲಿ ವರ್ಷ ಪೂರ್ತಿ ಓದಿದ್ದನ್ನು ೩ ಗಂಟೆಗಳ ಕಾಲಾವಧಿಯಲ್ಲಿ ಗೀಚಿ ಹಾಕಿ, ಪರೀಕ್ಷೆ ಮುಗಿದ ಅನುಕ್ಷಣ ಆಚೆ ಬಂದು ನಿಟ್ಟುಸಿರು ಬಿಟ್ಟು ಮರೆತುಬಿಡುವಂತಹ ಪರೀಕ್ಷೆ ಅದಲ್ಲ. ಆಚಾರ್ಯರು ಬೇರೆ ಬೇರೆ ಸಂದರ್ಭಗಳಲ್ಲಿ ವಿವಿಧ ಆಯಾಮಗಳಲ್ಲಿ ವಿದ್ಯಾರ್ಥಿಯನ್ನು ಅವಲೋಕಿಸುತ್ತಾರೆ. ಕಥೆಯೊಂದು ಕೇಳಿ ಬರುತ್ತದೆ.
ಗುರುಕುಲ ಶಿಕ್ಷಣವನ್ನು ಪಡೆಯುತ್ತಿದ್ದ ಮೂವರು ಹಿರಿಯ ವಿದ್ಯಾರ್ಥಿಗಳನ್ನು ಪರೀಕ್ಷಿಸಬೇಕೆಂದು ಆಚಾರ್ಯರು ನಿರ್ಧರಿಸಿದರು. ಗುರುಕುಲದ ಛಾತ್ರಾವಾಸದಿಂದ ಭೋಜನಶಾಲೆಗೆ ಬರುವ ದಾರಿಯಲ್ಲಿ ಆಚಾರ್ಯರು ಮುಳ್ಳಿನಿಂದ ಕೂಡಿದ ಕಟ್ಟಿಗೆಯ ಹೊರೆಯನ್ನು ದಾರಿಗೆ ಅಡ್ಡಲಾಗಿ ಇರಿಸಿದರು. ಆಚಾರ್ಯರು ಈ ಮೂರು ವಿದ್ಯಾರ್ಥಿಗಳ ವರ್ತನೆಯನ್ನು ನೋಡಬೇಕೆಂದು ಎಲೆಯ ಮರೆಯಲ್ಲಿ ಕುಳಿತರು. ಮೊದಲನೆಯವನು ದಾರಿಯ ಮಧ್ಯದಲ್ಲಿ ಈ ಮುಳ್ಳಿನ ಹೊರೆಯನ್ನು ಕಂಡು ಬೈದುಕೊಳ್ಳುತ್ತಾ ಅದನ್ನು ಹಾರಿಕೊಂಡು ದಾಟಿ ಮುಂದೆ ಹೋದನು. ಎರಡನೆಯವನು ಬಂದು ತನಗೆ ದಾಟಲು ಬೇಕಾದಷ್ಟೇ ಜಾಗದಲ್ಲಿನ ಮುಳ್ಳನ್ನು ಪಕ್ಕಕ್ಕೆ ಸರಿಸಿ ಜಾಗ ಮಾಡಿಕೊಂಡು ಮುಂದೆ ಸಾಗಿದನು. ಮೂರನೆಯವನು ಈ ಮುಳ್ಳಿನ ಹೊರೆ ಮುಂಬರುವ ಎಲ್ಲರ ಕಾಲಿಗೆ ಚುಚ್ಚಿ ನೋವನ್ನುಂಟುಮಾಡಬಹುದೆಂದು ಹೇಳಿ ಜಾಗರೂಕತೆಯಿಂದ ಆ ಮುಳ್ಳಿನ ಹೊರೆಯನ್ನು ಪೂರ್ತಿಯಾಗಿ ಬದಿಗೆ ಸರಿಸಿ ದಾರಿಯನ್ನು ಸ್ವಚ್ಛ ಮಾಡಿಬಿಟ್ಟನು. ಬಳಿಕ ಆಚಾರ್ಯರು
ಮೂವರನ್ನೂ ಕರೆದು ಮೊದಲನೆಯವನಿಗೆ ನೀನು ಇನ್ನೂ ಅನೇಕ ವರ್ಷಗಳ ಕಾಲ ಗುರುಕುಲವಾಸ ಮಾಡಿ, ದೋಷಗಳನ್ನು ದೂರಮಾಡಿಕೊಂಡು ಗುಣಾಧಾನವನ್ನು ಮಾಡಿಕೊಳ್ಳಬೇಕೆಂದೂ, ಎರಡನೆಯವನಿಗೆ ನೀನು ಕೇವಲ ಸ್ವಾರ್ಥದ ಯೋಚನೆ ಮಾಡದೇ ಪರ ಹಿತವನ್ನೂ ಆಲೋಚಿಸಬೇಕಾಗಿರುವುದರಿಂದ ಕೆಲವು ವರ್ಷವಾದರೂ ಗುರುಕುಲವಾಸ ಮಾಡಬೇಕೆಂದೂ, ಮೂರನೆಯವನಿಗೆ ನೀನು ಸರ್ವರ ಹಿತವನ್ನು ಬಯಸಿ, ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದರಿಂದ ನಿನ್ನ ಗುರುಕುಲವಾಸ ಕೊನೆಗೊಳ್ಳುತ್ತಿದೆ ಎಂದೂ ತಿಳಿಸಿದರು. ಈ ರೀತಿಯ ಪರೀಕ್ಷೆಗಳು ನಡೆಯುವಂತಹದು ಈ ಭಾರತೀಯ ಶಿಕ್ಷಣಪದ್ಧತಿಯಲ್ಲಿ.
ಶಿಕ್ಷಣವನ್ನು ಕೊಡುವ ಆಚಾರ್ಯರ ಗುಣಲಕ್ಷಣವನ್ನೂ ಶಾಸ್ತçಗಳು ಚೆನ್ನಾಗಿ ವರ್ಣಿಸುತ್ತವೆ. ಆಚಾರ್ಯರಾಗಲೂ ಯೋಗ್ಯತೆ ಬೇಕು. ಇಲ್ಲಿ ಬಿ.ಎಡ್ ಅಥವಾ ಎಮ್.ಎಡ್ ಪದವಿಗಳು ಮಾನದಂಡವಾಗುವುದಿಲ್ಲ. ಬದಲಾಗಿ ಗುರುಕುಲವನ್ನು ನಡೆಸುವ ಆಚಾರ್ಯರು ವೇದಗಳು ವರ್ಣಿಸುವಂತೆ ಮೂರನೆಯ ಆಶ್ರಮದವರು ಆಗಿರಬೇಕು. ಮೊದಲನೆಯದಾಗಿ ಬ್ರಹ್ಮಚರ್ಯಾಶ್ರಮದಲ್ಲಿ ಚೆನ್ನಾಗಿ ವಿದ್ಯಾರ್ಜನೆ ಮಾಡಿಕೊಂಡು, ತದನಂತರ ತಾವು ಕಲಿತುದರ ಪ್ರಾಯೋಗಿಕ ಅನ್ವಯವನ್ನು ಎರಡನೆಯ ಆಶ್ರಮವಾದ ಗೃಹಸ್ಥಾಶ್ರಮದಲ್ಲಿ ಪೂರೈಸಿಕೊಂಡು, ಹತ್ತು-ಹಲವು ಅನುಭವಗಳನ್ನು ಪಡೆದುಕೊಳ್ಳುತ್ತಾ, ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಬೆಳೆಸುವ ಅನುಭವವನ್ನೂ ಪಡೆದು, ತಮ್ಮ ಗೃಹಸ್ಥಧರ್ಮವನ್ನೂ ಚೆನ್ನಾಗಿ ಪಾಲಿಸುತ್ತಾ, ವರ್ಧಮಾನರಾಗುತ್ತಿದ್ದಂತೆ ಪಕ್ವತೆಯನ್ನು ಹೊಂದುತ್ತಾ, ತಮ್ಮ ಮಕ್ಕಳು ಬೆಳೆದು ಸ್ವಾವಲಂಬಿಗಳಾಗಿ ಜೀವನವನ್ನು ನಡೆಸಲು ಯೋಗ್ಯರಾದ ಮೇಲೆ ಮನೆಯ ಜವಾಬ್ದಾರಿಯನ್ನು ಮಕ್ಕಳಿಗೆ ಬಿಟ್ಟುಕೊಟ್ಟು ಮುಂದಿನ ಪೀಳಿಗೆಯ ತಯಾರಿಗಾಗಿ, ಸ್ವಾರ್ಥವನ್ನು ತ್ಯಜಿಸಿ ಸಮಾಜಸೇವೆಗಾಗಿ ಜೀವನವನ್ನು ಅರ್ಪಿಸುವುದು ಮುಂದಿನ ಆಶ್ರಮವಾದ ವಾನಪ್ರಸ್ಥದಲ್ಲಿ. ಈ ವಾನಪ್ರಸ್ಥಿಗಳೇ ಗುರುಕುಲವನ್ನು ಮುನ್ನಡೆಸುವ ಯೋಗ್ಯ ಆಚಾರ್ಯರು. ಎಲ್ಲಾ ಹಂತಗಳನ್ನೂ ದಾಟಿ ಬಂದಿರುವುದರಿAದ ಆಚಾರ್ಯರಿಗೆ ಮಕ್ಕಳ ಮನಸು ಚೆನ್ನಾಗಿ ಅರ್ಥವಾಗುತ್ತದೆ. ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಲು ಸಾಧ್ಯವಾಗುತ್ತದೆ. ಎಂತಹ ಅದ್ಭುತವಾದ ಪರಿಕಲ್ಪನೆ ಈ ವೈದಿಕ ಶಿಕ್ಷಣದ್ದಾಗಿದೆ!! ಆಚಾರ್ಯರು ಸರಿ-ತಪ್ಪುಗಳನ್ನು, ಹಿತ-ಅಹಿತಗಳನ್ನು, ಸತ್ಯ-ಅಸತ್ಯಗಳನ್ನು ತಿಳಿದವರಾಗಿರಬೇಕು ಮತ್ತು ಸರಿಯಾದ ದಾರಿಯನ್ನು ಅನುಸರಿಸುವವರೂ ಆಗಿರಬೇಕು. ಯಾಕೆಂದರೆ ವಿದ್ಯಾರ್ಥಿಗಳು ಬೋಧನೆಯಿಂದ ಕಲಿಯುವುದಕ್ಕಿಂತಲೂ ಹಿರಿಯರ ಆಚರಣೆಯನ್ನು ಅನುಸರಿಸಿಕೊಂಡು ಕಲಿತುಕೊಳ್ಳುವುದು ಜಾಸ್ತಿ ಇರುವುದು. ಆದ್ದರಿಂದ ತಾನು ಮೊದಲು ನಡೆದು ಅನಂತರ ವಿದ್ಯಾರ್ಥಿಗಳಿಗೆ ನುಡಿಯುವವನು ಆಚಾರ್ಯನು. ಪ್ರಸ್ತುತ ಈ ವಿಷಯದಲ್ಲಿ ಮನೆಮನೆಗಳಲ್ಲಿ ಪ್ರಮಾದ ಉಂಟಾಗುತ್ತಿರುವುದನ್ನು ಕಾಣುತ್ತಿದ್ದೇವೆ. ತಂದೆ ತಾಯಿಗಳು ಮೊಬೈಲ್ ಲೋಕದಲ್ಲಿ ಮಗ್ನರಾಗಿದ್ದುಕೊಂಡು ಮಗುವಿಗೆ ಓದು, ಬರೆ, ಕಲಿ ಎಂದರೆ ಹೇಗೆ ತಾನೇ ಮಗುವಿನ ಮನಸ್ಸು ಅಧ್ಯಯನದಲ್ಲಿ ಸ್ಥಿರವಾದೀತು? ತಾನು ಸುಳ್ಳು ಹೇಳುತ್ತಾ ಮಗುವಿಗೆ ಸತ್ಯವನ್ನಾಡಲು ಹೇಗೆ ಕಲಿಸುವುದು? ಗಂಭೀರವಾಗಿ ಆಲೋಚಿಸಿ ತಿದ್ದಿಕೊಳ್ಳಬೇಕಾದ ವಿಷಯ ಇದು.
ಗುರುಕುಲದಲ್ಲಿ ಇಪ್ಪತ್ತನಾಲ್ಕು ಗಂಟೆ ಆಚಾರ್ಯರ ಪರಿವೀಕ್ಷಣೆಯಲ್ಲಿ ವಿದ್ಯಾರ್ಥಿಗಳಿರುತ್ತಾರೆ, ಇಷ್ಟು ಗುಣಮಟ್ಟ ಹೊಂದಿದ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾರೆ. ಇಂತಹ ಗುರುಕುಲಕ್ಕೆ ಪಾಲಕರು ಶುಲ್ಕವೆಷ್ಟು ಕಟ್ಟಬೇಕು ಎಂಬ ಪ್ರಶ್ನೆ ಸಹಜ. ಅಚ್ಚರಿಯ ಸಂಗತಿ
ಎAದರೆ ಪೂರ್ತಿ ಗುರುಕುಲ ಶಿಕ್ಷಣ ಉಚಿತವಾಗಿ, ಯಾವುದೇ ಶುಲ್ಕವಿಲ್ಲದೇ ನಡೆಯುವಂತಹದು. ಗುರುಕುಲದ ಎಲ್ಲಾ ಖರ್ಚು-ವೆಚ್ಚಗಳನ್ನು ನಿಭಾಯಿಸಿಕೊಂಡು, ಗುರುಕುಲಕ್ಕೆ ಅವಶ್ಯಕವಾಗಿರುವ ಎಲ್ಲಾ ಭೌತಿಕ ಸಂಪತ್ತನ್ನು ಒದಗಿಸಿ ಕೊಡುವ ಜವಾಬ್ದಾರಿ ಎಲ್ಲಾ ಸಮಾಜ ಬಾಂಧವರದಾಗಿದೆ. ತಮ್ಮ ಊರಿನ ಗುರುಕುಲವನ್ನು ನಡೆಸುವುದು ಆಯಾ ಊರಿನ ಗೃಹಸ್ಥರ ಕರ್ತವ್ಯವಾಗಿದೆ. ಭಾರತೀಯ ಶಿಕ್ಷಣ
ಪದ್ಧತಿಯಲ್ಲಿ ಶಿಕ್ಷಣ ಶುಲ್ಕರಹಿತವಾಗಿ ಸಿಗಬೇಕೆಂಬುದಕ್ಕೆ ಬಲವಾದ ಕಾರಣವಿದೆ. ಶಿಕ್ಷಣವೆಂಬುದು ಮಾನವರಾದ ಪ್ರತಿಯೊಬ್ಬರಿಗೂ ಸಿಗಬೇಕಾದ ಮೂಲಭೂತ ಅವಶ್ಯಕತೆ. ಶುಲ್ಕ ಕಟ್ಟಿ ಶಿಕ್ಷಣವನ್ನು ಪಡೆಯಬೇಕೆಂದಾದಲ್ಲಿ ಶ್ರೀಮಂತರ ಮಕ್ಕಳಿಗೆ ಮಾತ್ರ ಶಿಕ್ಷಣವು ದೊರಕುವುದು. ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಿಡುವರು. ಶಿಕ್ಷಣದಿಂದ ವಂಚಿತನಾದವನು ಸಮಾಜದಲ್ಲಿ ಪ್ರಾಮಾಣಿಕ
ಸತ್ಪçಜೆಯಾಗಿ ಬಾಳುವುದು ಹೇಗೆ ಸಾಧ್ಯ? ಆತ ಕಳ್ಳನೋ, ಕಟುಕನೋ, ದರೋಡೆಕೋರನೋ, ಅತ್ಯಾಚಾರಿಯೋ ಆಗಿ ಬಿಟ್ಟಲ್ಲಿ ಅದು ಸಾಮಾಜಿಕವಾಗಿ ತೊಂದರೆಯನ್ನು ಉಂಟುಮಾಡುತ್ತದೆ. ಆ ಕಾರಣದಿಂದ ಶಿಕ್ಷಣ ಎಲ್ಲರಿಗೂ ಸಿಗಬೇಕು, ನಿಶ್ಶುಲ್ಕವಾಗಿ ಸಿಗಬೇಕೆಂಬುದು ಭಾರತೀಯ ಚಿಂತನೆ.
ಈ ಮೇಲೆ ಚಿತ್ರಿಸಿದಂತೆ ಅತ್ಯಂತ ಮಹತ್ವವಾದ, ಅರ್ಥಪೂರ್ಣವಾದ, ವೈಜ್ಞಾನಿಕವಾದ, ಸರ್ವಮಾನ್ಯವಾದ ಭಾರತೀಯ ಶಿಕ್ಷಣ ಪದ್ಧತಿಯ ಅವಶ್ಯಕತೆ ನಮ್ಮ ಸಮಾಜಕ್ಕೆ ಇಲ್ಲವೇ? ವರ್ತಮಾನದ ಶಿಕ್ಷಣದಿಂದಾಗುತ್ತಿರುವ ಕೊರತೆಗಳನ್ನು ನೀಗಿ ಶಿಕ್ಷಣದಿಂದ ಸಿಗಬೇಕಾದ
ಎಲ್ಲಾ ಪ್ರಯೋಜನಗಳನ್ನೂ ಪೂರೈಸಿಕೊಟ್ಟು ಸುಂದರ ಭವಿಷ್ಯವನ್ನು ನಿರ್ಮಾಣ ಮಾಡಲು ಏಕಮಾತ್ರ ಪರಿಹಾರವೆಂದರೆ ಪ್ರಸ್ತುತ ಅನುಸರಿಸುತ್ತಿರುವ ಶಿಕ್ಷಣಪದ್ಧತಿಯನ್ನು ತೊಡೆದು ಹಾಕಿ, ವೈದಿಕ ಶಿಕ್ಷಣ ಪದ್ಧತಿಯನ್ನು ಅಥವಾ ಭಾರತೀಯ ಶಿಕ್ಷಣ ಪದ್ಧತಿಯನ್ನು ಸರ್ವರೂ ಸಾರ್ವತ್ರಿಕವಾಗಿ ಅನುಸರಿಸುವುದು. ಈಗಿನ ಸಾಮಾಜಿಕ ವಿದ್ಯಮಾನವನ್ನು ಗಮನಿಸಿದಾಗ ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ಧತಿಯ ಅವಶ್ಯಕತೆ ಅಷ್ಟೇ ಅಲ್ಲ, ಅನಿವಾರ್ಯತೆ ಇದೆ, ಇದ್ದೇ ಇದೆ.
ಭವಿಷ್ಯದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯ ಅಳವಡಿಕೆ ಆಗಬೇಕಾದಲ್ಲಿ ವರ್ತಮಾನದಲ್ಲಿ ಈ ಶಿಕ್ಷಣದ ಕುರಿತು ಎಚ್ಚೆತ್ತುಕೊಂಡವರು ಒಂದಾಗಿ ಶ್ರಮವಹಿಸಬೇಕು. ಇತ್ತೀಚೆಗೆ ಶಾಲಾಶಿಕ್ಷಣದಲ್ಲಿ ಸರಿಯಾದ ಮೌಲ್ಯಯುತ ಶಿಕ್ಷಣ ಸಿಗುತ್ತಿಲ್ಲವೆಂಬುದನ್ನು ಮನಗಂಡು, ಕೆಲವು ಅನೌಪಚಾರಿಕ ಶಿಕ್ಷಣಪದ್ಧತಿಯಲ್ಲಿ ನಡೆಯುವ ಗುರುಕುಲಗಳು ಅಲ್ಲಲ್ಲಿ ನಡೆಯುತ್ತಲಿವೆ, ಕೆಲವೆಡೆ ಚಿಗುರೊಡೆಯುತ್ತಲಿವೆ. ಆ ಕುರಿತು ಮಾಹಿತಿಗಳನ್ನು ಸಂಗ್ರಹಿಸಿ ಪಾಲಕರು ತಮ್ಮ ಮಕ್ಕಳನ್ನು ಇಂತಹ ಗುರುಕುಲಗಳಿಗೆ ಕಳುಹಿಸುವ ಪ್ರಯತ್ನವನ್ನು ಮಾಡಬಹುದು. ಎಚ್ಚರ ವಹಿಸಬೇಕಾದ ವಿಷಯವೆಂದರೆ ಗುರುಕುಲವೆಂಬ ಹೆಸರಿನಲ್ಲಿ ಅನೇಕ ಮಾಮೂಲಿ ಶಾಲೆಗಳು ನಡೆಯುತ್ತಲಿರುತ್ತವೆ. ಇದು ನಿಜವಾದ ಗುರುಕುಲತ್ವವನ್ನು ಹೊಂದಿದ ಗುರುಕುಲವೇ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಇಲ್ಲವೇ ಈ ಜೀವನ ಶಿಕ್ಷಣಕ್ಕೆ ಸಂಬAಧಿಸಿದAತೆ, ವೇದಗಳಿಗೆ ಸಂಬAಧಿಸಿದAತೆ ಕೆಲವು ತರಗತಿಗಳು ನಡೆಯುತ್ತವೆ, ಆನ್ ಲೈನ್ ಮುಖಾಂತರವೂ ನಡೆಯುತ್ತವೆ. ಆ ಕುರಿತು ಮಾಹಿತಿಯನ್ನು ಕಲೆ ಹಾಕಿಕೊಂಡು ಅದಕ್ಕೆ ಸೇರಿಕೊಂಡು ತಮ್ಮ ಮನೆಗಳಲ್ಲಿಯೇ ಮಕ್ಕಳಿಗೆ ಈ ಜೀವನ ಶಿಕ್ಷಣವನ್ನು ಕೊಡಲು ಪ್ರಯತ್ನಿಸಬಹುದು. ಕೊನೇ
ಪಕ್ಷ ನಮ್ಮ ಮಗು ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿಯೇ ಓದಬೇಕು, ರ್ಯಾಂ ಕ್ ಪಡೆಯಲೇ ಬೇಕೆಂಬ ಆಗ್ರಹಕ್ಕೆ ತಾವು ಬಲಿಯಾಗದೇ, ತಮ್ಮ ಮಕ್ಕಳನ್ನು ಬಲಿಪಶುಗಳನ್ನಾಗಿಸದೇ, ಎಳೆಯ ವಯಸ್ಸಿನಲ್ಲಿ ಮಾತೃಭಾಷೆಯಲ್ಲಿ ಕಲಿತರೇ ಮಕ್ಕಳು ವಿಷಯವನ್ನು ಅರ್ಥೈಸಿಕೊಳ್ಳಲು ಅನುಕೂಲವಾಗುವುದೆಂಬುದನ್ನು ಮನಗಂಡು ಈ ಅನುಕೂಲತೆಯನ್ನು ಮಾಡಿಕೊಡಬಹುದು. ಮಕ್ಕಳ ಆಸಕ್ತಿ ಕ್ಷೇತ್ರವನ್ನು ಗಮನಿಸಿ ಅದೇ ದಾರಿಯಲ್ಲಿ ಅವರನ್ನು ಪ್ರೇರೇಪಿಸಬಹುದು. ಇಷ್ಟನ್ನಾದರೂ ಮಾಡಿದರೆ ಶಿಕ್ಷಣದಲ್ಲಿ ಸ್ವಲ್ಪವಾದರೂ ಭಾರತೀಯತೆ ರಕ್ಷಿಸಲ್ಪಡುವುದು. ಈ ರೀತಿ ಸಣ್ಣ-ಪುಟ್ಟ ಹೆಜ್ಜೆಗಳನ್ನಿಡುತ್ತಾ ಮುಂದೆ ಮುಂದೆ ಸಾಗಿ, ಭವಿಷ್ಯದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊAಡು ಮುನ್ನಡೆಯುವ ಸುಂದರ ಸಮಾಜದ ಸಾಕ್ಷೀಭೂತರು ನಾವಾಗೋಣ ಎಂಬ ಮಹತ್ವಾಕಾಂಕ್ಷೆಯೊಂದಿಗೆ, ಈ ಕಾರ್ಯದಲ್ಲಿ ಪ್ರಯತ್ನಶೀಲರಾಗಲು ಆ ಭಗವಂತನ ಅನುಗ್ರಹವು ಸದಾ ನಮ್ಮೊಂದಿಗಿರಲೆAಬ ಪ್ರಾರ್ಥನೆಯೊಂದಿಗೆ ಇತಿಶ್ರೀಯನ್ನು
ಹಾಡುತಿರುವೆನು.
By- ಕು. ಗೌರಿ,ಟಿ,ಮುಂಡಗೋಡ