Article

ಭವ್ಯ ಭಾರತೀಯ ಸಂಸ್ಕೃತಿ


ಭರತವರ್ಷವಿದು ಯೋಗಭೂಮಿ
ಕಣ ಕಣದಲಿ ದೇಶಭಕ್ತಿಯ ಕುಡಿದೀಪಗಳನ್ನು ಬೆಳಗಿಸುವ
ಆತ್ಮಾಭಿಮಾನದ ಅಸ್ಮಿತೆಯ ಪುಣ್ಯಭೂಮಿ
ಕನ್ಯಾಕುಮಾರಿಯ ಕಡಲಿನೊಡಲಿನಿಂದ
ಹಿಮಗಿರಿಯ ಸಿರಿ ಶಿಖರದುತ್ತುಂಗದವರೆಗಿನ
ದಟ್ಟ ಪ್ರಕೃತಿ ಐಸಿರಿಯ ಸಮೃದ್ಧ ಭೂಮಿ
ಸಂಸ್ಕಾರ-ಸAಸ್ಕೃತಿಯ, ನಾಡು-ನುಡಿ ವೈಭವದ
ಶ್ರೀಮುಡಿ ಕಳಶದ ಮೆರವಣಿಗೆಯೇ
ನಮ್ಮ ಭಾರತ, ನಮ್ಮೆಲ್ಲರ ಭಾರತ
ಭಾರತವೆಂಬುದು ಯೋಗಭೂಮಿ, ಯಾಗಭೂಮಿ, ಪುಣ್ಯಭೂಮಿ, ಕರ್ಮಭೂಮಿ, ತಪೋಭೂಮಿ, ತ್ಯಾಗಭೂಮಿ. ಸನಾತನ ಧರ್ಮದ ತೊಟ್ಟಿಲಾದ ಭಾರತವು ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಪರಂಪರೆ, ತತ್ವಜ್ಞಾನ, ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ತವರೂರು. ಭವ್ಯ ಪರಂಪರೆಯು ಶತ ಶತಮಾನಗಳಿಂದ ಭಾರತದ ಪ್ರಜೆಗಳ ಜೀವನಕ್ಕೆ ಪುಷ್ಠಿ ನೀಡುತ್ತ, ಅಕ್ಕರೆಯ ಜೋಗುಳ ಹಾಡುತ್ತ ಪೊರೆಯುತ್ತ ಬಂದಿದೆ. ಸಮಗ್ರ ವಿಶ್ವಕ್ಕೆ ದಿವ್ಯತೆಯ ಅಮೃತಪಾನ ಮಾಡಿಸುವ ಅದ್ಭುತ ಶಕ್ತಿ ಭಾರತಕ್ಕಿದೆ. ಅತಿ ಕ್ಲಿಷ್ಟ ಹಾಗೂ ಸಂದಿಗ್ಧ ಪರಿಸ್ಥಿತಿಗಳಲ್ಲಿ ಸೂಕ್ಷö್ಮವಾಗಿ ಅವಲೋಕನಗೈದು, ದೃಢ ನಿರ್ಧಾರ ಕೈಗೊಂಡು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಕಂಡುಕೊಳ್ಳುವ ಧೀಶಕ್ತಿ ಭಾರತಕ್ಕಿದೆ. ಭಾರತದ ಸಮಚಿತ್ತತೆ, ಅಂತಃಸತ್ವ, ಸಮಗ್ರ ದೃಷ್ಟಿಕೋನ, ಉನ್ನತ ವಿಚಾರಧಾರೆ ಇವು ಜಗತ್ತಿಗೇ ಮಾದರಿಯಾಗಬಲ್ಲವು. ಸಮಷ್ಟಿಯ ಸಂದೇಶವನ್ನು ವಿಶ್ವಕ್ಕೇ ಸಾರಬಲ್ಲವು.
“ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ”
ಭಾರತದ ಶ್ರೇಷ್ಟ ಗ್ರಂಥ ರಾಮಾಯಣದಲ್ಲಿ ಹೀಗೊಂದು ಮಾತಿದೆ. ಸ್ವರ್ಣಲಂಕೆಯ ಸಕಲ ವೈಭವಗಳನ್ನು ತಿರಸ್ಕರಿಸಿದ ಶ್ರೀರಾಮಚಂದ್ರನು ತಾಯಿ ಮತ್ತು ತಾಯ್ನಾಡಿನ ಮಹತ್ವವನ್ನು ಅನಾದಿ ಕಾಲದಲ್ಲಿಯೇ ಬಣ್ಣಿಸಿದ್ದಾನೆ. ಭಾರತ ದೇಶದ ಹಿರಿಮೆ ಗರಿಮೆಗಳು ಅಸೀಮ ಕಡಲಿನ ಅನಂತ ನೀಲಿಮೆಯ ಪ್ರತಿರೂಪ.
ನಮ್ಮ ನಾಡು, ನುಡಿ, ಸಂಸ್ಕೃತಿ, ಕಾವ್ಯ – ಸಾಹಿತ್ಯ ಪರಂಪರೆ ಇವು ತಮ್ಮದೇ ಆದ ಅನನ್ಯತೆ, ವಿಶಿಷ್ಟತೆಯನ್ನು ಇಂದಿಗೂ ಉಳಿಸಿಕೊಂಡಿವೆ. ಭಾರತೀಯತೆಯ ಅನನ್ಯತೆ ಹಾಗೂ ಅಖಂಡತೆಯನ್ನು ನಾವೀಗ ಅವಲೋಕಿಸೋಣ.
• ನಾಗರಿಕತೆಯ ತೊಟ್ಟಿಲು ಭಾರತ, ಅನನ್ಯ ಭೌಗೋಳಿಕ ಸಮೃದ್ಧಿಯ ಸಿರಿ ನಾಡು ಭಾರತ
ಭಾರತವೆಂಬುದು ವಿಶ್ವದ ಪ್ರಾಚೀನ ನಾಗರಿಕತೆಯ ಹೆಬ್ಬಾಗಿಲು. ಭರತ ಭೂಮಿಯ ಹಿರಿಮೆ, ಗರಿಮೆ, ಭವ್ಯ ಸಂಸ್ಕೃತಿಯನ್ನು ಅಧ್ಯಯನ ಮಾಡಬೇಕಾದರೆ ಪ್ರಾಚೀನ ನಾಗರಿಕತೆಗಳ ಕಥಾನಕ ಅತ್ಯವಶ್ಯ. ವಿಶ್ವದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಗ್ರೀಕ್, ರೋಮನ್, ಮೆಸಪೊಟೇಮಿಯನ್, ಬ್ಯಾಬಿಲೋನಿಯನ್, ಸಿಂಧೂ ಮುಂತಾದ ಹಲವಾರು ನಾಗರಿಕತೆಗಳು ಹೆಸರುಮಾತಾಗಿದ್ದದ್ದು ಕಂಡುಬರುತ್ತದೆ. ಕೆಲವು ನಾಗರಿಕತೆಗಳು ಒಮ್ಮೆ ವಿಜೃಂಭಣೆಯಿAದ ಮೆರೆದು ಕಾಲಕ್ರಮೇಣ ನಿರ್ನಾಮವಾದರೆ ಕೆಲವು ನಾಗರಿಕತೆಗಳು ಸದಾ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವುದು ಒಂದು ವಿಶೇಷ. ಇವುಗಳಲ್ಲಿ ಭಾರತದ ಸಿಂಧೂ ನಾಗರಿಕತೆ ಸಹಸ್ರ ಸಹಸ್ರ ವರುಷಗಳಿಂದ ಉನ್ನತಿಯ ಹಾದಿಯಲ್ಲಿ ಕ್ರಮಿಸುತ್ತಿದೆ.
ಭಾರತೀಯ ನಾಗರಿಕತೆಯ ಸುದೀರ್ಘ ಇತಿಹಾಸವೇ ಭಾರತೀಯತೆಯ ಸಮಗ್ರತೆಯನ್ನು ಎತ್ತಿ ಹಿಡಿಯುತ್ತದೆ. ಜಾಗತಿಕ ಮಟ್ಟದಲ್ಲಿ ಪ್ರಾಚ್ಯ ಶಾಸ್ತçಜ್ಞರು ಭಾರತೀಯ ನಾಗರಿಕತೆಯ ಆಧಾರದಿಂದ ಭಾರತೀಯರ ಜೀವನಾದರ್ಶ, ಉನ್ನತ ದೂರದೃಷ್ಟಿತ್ವ, ಯೋಗಜ್ಞಾನ, ತತ್ವಜ್ಞಾನಗಳನ್ನು ಅಧ್ಯಯನ ಮಾಡಿ ಒಪ್ಪಿಕೊಂಡು, ಅಪ್ಪಿಕೊಂಡು ಅಂಗೀಕರಿಸತೊಡಗಿದ್ದಾರೆ.
ಪ್ರಕೃತಿಯ ಮಡಿಲಿನ ಕೂಸು ಭರತಭೂಮಿಯ ನಿಸರ್ಗದತ್ತವಾದ ಭೌಗೋಳಿಕ ಲಕ್ಷಣಗಳು ಭಾರತೀಯ ಸಂಸ್ಕೃತಿಗೆ ಮತ್ತಷ್ಟು ಮೆರುಗು ನೀಡಿವೆ. ದಕ್ಷಿಣದ ಕನ್ಯಾಕುಮಾರಿಯ ಕಡಲ ತೀರದಿಂದ ಉತ್ತರಾಂಚಲದ ಹಿಮಾಲಯದವರೆಗಿನ ಅಖಂಡ ಹಿಂದುಸ್ಥಾನವು ಸುಮಾರು ೩೨೧೪ ಕಿ.ಮೀ. ನಷ್ಟು ಉತ್ತರ-ದಕ್ಷಿಣ ವಿಸ್ತರಣೆಯನ್ನು ಹೊಂದಿದೆ.
“ಚತುಃ ಸಮಸ್ಥಾನ ಸಂಸ್ಥಿತಮ್” ಎಂಬುದು ಪ್ರಾಚೀನ ಭೂಗೋಳ ಶಾಸ್ತçಜ್ಞರ ನುಡಿ. ಭಾರತದ ಭೌಗೋಳಿಕ ಸನ್ನಿವೇಶಗಳ ಸಹಯೋಗದಲ್ಲಿ ನಾಡು-ನುಡಿ-ಹಬ್ಬದ ಸಂಭ್ರಮದ ದಿಬ್ಬಣ ಪುಟಗೊಂಡಿದೆ. ಭಾರತದ ನೆಲ- ಜಲ- ಮುಗಿಲಿನ ಸಾಂಗತ್ಯದಲ್ಲಿ ಧೀಮಂತ ಸಂಸ್ಕೃತಿಯೊAದು ಮೈದಳೆದಿದೆ. ಗಿರಿ- ಶಿಖರ-ಪರ್ವತದ ಸಿರಿ ಮುಡಿಗಳಲ್ಲಿ, ಹಸಿರು ಐಸಿರಿಯ ಹೊಂಬೆಳಕಿನಲ್ಲಿ ಅಖಂಡ ಭಾರತದ ಅಂತಃಸತ್ವ ಅಂತರ್ಗತವಾಗಿದೆ. ಬೆಟ್ಟ ಬಯಲಿನ ವಿಸ್ತಾರದೆದೆಯಲಿ ಮಾನವತೆಯ ಮಹಾಮೌನವೊಂದು ಅನವರತ ಅಲೆ ಅಲೆಯಾಗಿ ಹೊಮ್ಮುತ್ತಿರುತ್ತದೆ.
ಸಹ್ಯಾದ್ರಿಯ ಶೃಂಗಗಳಲ್ಲಿ, ಹಸಿರು ಹಂಬಿನ ಅಗಾಧ ಸಮೃದ್ಧಿಯಲ್ಲಿ ಶತ ಶತಮಾನಗಳ ಇತಿಹಾಸದ ಕಥೆಯಿದೆ. ಭಾರತೀಯ ಭೌಗೋಳಿಕ ಪ್ರಾಕೃತಿಕ ಶ್ರೀಮಂತಿಕೆಯ ಸಹಯಾನದೊಂದಿಗೆ ಪ್ರಾಚೀನ ನಾಗರಿಕತೆಯ ತೊಟ್ಟಿಲು ತೂಗಲ್ಪಟ್ಟಿದೆ.
ಭೌಗೋಳಿಕ ವೈವಿಧ್ಯತೆಯೊಂದಿಗೆ ಭಾರತವು ತನ್ನ ಅಖಂಡತೆ, ಅನನ್ಯತೆಗಳನ್ನು ಇಂದಿಗೂ ಉಳಿಸಿಕೊಂಡಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಹಿಮಾಲಯ ಪರ್ವತ ಶ್ರೇಣಿ, ಮಹಾ ಸಾಗರಗಳು, ಪ್ರಸ್ಥ ಭೂಮಿ, ಮರುಭೂಮಿ, ಪಶ್ಚಿಮ ಘಟ್ಟಗಳ ದಟ್ಟ ಕಾನನಗಳು, ನಿತ್ಯ ಹರಿದ್ವರ್ಣ ಕಾಡುಗಳು, ದ್ವೀಪಗಳು, ಕರಾವಳಿ ತೀರಗಳು………………ಹೀಗೆ ವೈವಿಧ್ಯಮಯ ನೈಸರ್ಗಿಕ ಲಕ್ಷಣಗಳನ್ನು ಹೊಂದಿರುವ ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ದೇಶ ಎನ್ನಲು ಹೆಮ್ಮೆಯೆನಿಸುತ್ತದೆ.
ನದಿಗಳೆಂದರೆ ಜೀವವಾಹಿನಿಯರು. ತಮ್ಮ ಹರಿವಿನುದ್ದಕ್ಕೂ ಹಾಲ್ದೆನೆಯ ಸಿರಿ ಪೈರಿಗೆ ಅಮೃತವುಣಿಸುತ್ತ ಸಾಗುವ ನದಿಗಳು ಭಾರತಾಂಬೆಯ ವರಪುತ್ರಿಯರು. ಸಿಂಧೂ ನದಿ ನಾಗರಿಕತೆಯು ಭಾರತದ ಚರಿತ್ರೆಯ ಪುಟಗಳಲ್ಲಿ ಅಚ್ಚಳಿಯದ ಕುರುಹಾಗಿ ಉಳಿದಿದೆ. ಗಂಗಾ, ಯಮುನಾ, ಬ್ರಹ್ಮಪುತ್ರಾ, ಕಾವೇರಿ, ತುಂಗಭದ್ರಾ………….ಹೀಗೆ ಅಮಲ ಸಲಿಲ ವಾರುಣಿಯರು ಭಾರತದ ಸಿಂಧು ಸದೃಶ ಗರಿಮೆಗೆ ಕೋಟಿ ಬಿಂದುಗಳನ್ನು ಅರ್ಪಿಸಿವೆ. ನದಿಗಳ ಇಕ್ಕೆಲಗಳಲ್ಲಿ ಅಸಂಖ್ಯ ಜೀವರಾಶಿಗಳು ತಮ್ಮ ಬದುಕನ್ನು ರೂಪಿಸಿಕೊಂಡಿವೆ. ನದಿಗಳಿಂದ ಜಲ ವಿದ್ಯುದಾಗಾರಗಳನ್ನು ನಿರ್ಮಿಸಿ ದೇಶಕ್ಕೇ ಪ್ರಖರ ಬೆಳಕಿನ ಹೊನಲನ್ನು ಪ್ರಸರಿಸಲಾಗಿದೆ. ಮೀನುಗಾರಿಕೆಯೂ ನದಿಯೊಡಲ ಸಂಪತ್ತಿನಲ್ಲಿ ಒಂದಾಗಿದೆ. ಜಗದ ಜೀವಕೆ ಚೈತನ್ಯ ನೀಡುವ ನದಿಗಳು ಜೀವನದಿಗಳು, ಜೀವದಾಯಿನಿಯರು, ತಾಯಿ ಭಾರತಿಯ ಮಾನಸ ಪುತ್ರಿಯರು.
• ಶ್ರೀಮಂತ ಸನಾತನ ಧರ್ಮದ ನೆಲೆವೀಡು ಭಾರತ
ಭಾರತೀಯ ಇತಿಹಾಸದ ಪುಟಗಳನ್ನು ತಿರುವಿದಾಗ ಒಂದಷ್ಟು ಅಂಶಗಳು ನಮಗೆ ಗೋಚರಿಸುತ್ತವೆ. ಶತಶತಮಾನಗಳುದ್ದಕ್ಕೂ ಪರಕೀಯರ ದಬ್ಬಾಳಿಕೆ, ಆಂತರಿಕ ಒಳಜಗಳ, ಆಧುನಿಕತೆಯ ಭರಾಟೆ, ರಾಜಕೀಯ ಅಸ್ತವ್ಯಸ್ತತೆಗಳ ನಡುವೆಯೂ ಭಾರತ ಇಂದಿಗೂ ಒಂದಷ್ಟು ಮೌಲ್ಯಗಳನ್ನು ಉಳಿಸಿಕೊಂಡು ಬಂದಿದೆ ಎಂದರೆ ತಪ್ಪಾಗಲಾರದು. ಇವುಗಳ ಹಿಂದಿನ ಚಾಲಕ ಶಕ್ತಿಗಳೆಂದರೆ ಗ್ರಾಮಗಳು. ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕುರಿತು ಪ್ರತಿಪಾದಿಸಿದ್ದರು. ಬಾರತೀಯರ ಮೂಲ ಬೇರುಗಳು ಉದ್ಭವಿಸಿರುವುದು ಹಳ್ಳಿಗಳಲ್ಲಿ.
ಸರಳ ಜೀವನ, ಸಾತ್ವಿಕ ಆಹಾರ, ಸ್ವಾವಲಂಬನೆ, ಶಾಂತಚಿತ್ತತೆ, ಸಹಕಾರ ಮನೋಭಾವ, ಶ್ರಮ ಸಂಸ್ಕೃತಿ, ಸಾಮಾಜಿಕ ಮೌಲ್ಯಗಳು ಹಳ್ಳಿಗಳ ತಾಯಿ ಬೇರಿನ ತಂತುಗಳು. ದಿನವಿಡೀ ಹೊಲ, ಗದ್ದೆ, ತೋಟಗಳಲ್ಲಿ ಬಿಸಿಲು-ಮಳೆ-ಚಳಿಯೆನ್ನದೆ ಬೆವರು ಬಸಿದು ದುಡಿಯುವ ದೇಹ ಮತ್ತು ಮನಸ್ಸುಗಳು ಸಂಜೆಯ ಸಮಯದಲ್ಲಿ ಕಥಾ ಕಾಲಕ್ಷೇಪ, ಭಜನೆಗಳ ಮೂಲಕ ಚೇತೋಹಾರಿಯಾಗುತ್ತಿದ್ದವು.
ಕೊಳ್ಳುಬಾಕ ಸಂಸ್ಕೃತಿ ಆಗಿನ್ನೂ ಜನರನ್ನು ಆಕರ್ಷಿಸಿರಲಿಲ್ಲ. “ಹಾಸಿಗೆಯಿದ್ದಷ್ಟೇ ಕಾಲುಚಾಚು” ಎಂಬAತೆ ಇದ್ದುದರಲ್ಲಿಯೇ ತೃಪ್ತಿ ಪಡುತ್ತಿದ್ದ ಜನರು ಸುಖ-ನೆಮ್ಮದಿಯ ಜೀವನ ನಡೆಸುತ್ತಿದ್ದರು. ಅವಿಭಕ್ತ ಕುಟುಂಬಗಳ ಕೌಟುಂಬಿಕ ಸಾಮರಸ್ಯ ಅಂದಿನ ಸಮಾಜ ವ್ಯವಸ್ಥೆಯ ಅಡಿಪಾಯವಾಗಿತ್ತೆಂದರೆ ತಪ್ಪಾಗಲಾರದು.
ಸನಾತನ ಧರ್ಮದ ಶಾಸ್ತç ಸಂಪ್ರದಾಯ, ತಾತ್ವಿಕ ಮತ್ತು ದಾರ್ಶನಿಕ ಅಧಿಷ್ಠಾನದ ಅನಂತ ಶಕ್ತಿಯು ಭಾರತೀಯರನ್ನು ಇಂದಿಗೂ ಕೈಹಿಡಿದು ಮುನ್ನಡೆಸುತ್ತಿದೆ. ವರ್ಣಾಶ್ರಮ ಪದ್ಧತಿಯು ಜಾತಿ ವ್ಯವಸ್ಥೆಯಾಗಿರಲಿಲ್ಲ. ಬದಲಿಗೆ ವಿವಿಧ ವೃತ್ತಿ ಕೌಶಲಗಳನ್ನು ವೃದ್ಧಿಸಿ ಸದೃಢ ಸಮಾಜವನ್ನು ನಿರ್ಮಿಸಲು, ದೇಶದ ಸುಭದ್ರತೆಗಾಗಿ ಕಂಕಣಬದ್ಧವಾಗಲು ರಹದಾರಿಯನ್ನೊದಗಿಸಿತ್ತು.
ಕರ್ನಲ್ ಥಾಮಸ್ ಮನ್ರೋರವರು ಹೀಗೆ ಉಲ್ಲೇಖಿಸಿದ್ದಾರೆ. “ಉತ್ತಮ ಬೇಸಾಯ ಪದ್ಧತಿ, ನಿತ್ಯ ಜೀವನಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ತಯಾರಿಸಿಕೊಳ್ಳುವ ಸಾಮರ್ಥ್ಯ, ಸ್ವಾವಲಂಬಿತ್ವ, ಹಳ್ಳಿ ಹಳ್ಳಿಗಳಲ್ಲಿ ಶಾಲೆ, ಅತಿಥಿ ಸತ್ಕಾರ, ಸಜ್ಜನಿಕೆ, ಉದಾರ ಮನೋಭಾವ, ಸ್ತಿçà ಗೌರವ ಇವುಗಳನ್ನು ನಾಗರಿಕತೆಯ ಲಕ್ಷಣಗಳೆಂದು ಒಪ್ಪುವುದಾದರೆ ಭಾರತೀಯರು ಯುರೋಪಿನ ದೇಶಗಳಿಗಿಂತ ಕಡಿಮೆ ದರ್ಜೆಯವರಲ್ಲ. ಇಂಗ್ಲೆAಡ್ – ಭಾರತಗಳ ನಡುವೆ ನಾಗರಿಕತೆಗಳ ವಿನಿಮಯ ಆದಲ್ಲಿ ಹೆಚ್ಚಿನ ಲಾಭವಾಗುವುದು ಇಂಗ್ಲೆAಡಿಗೇ ಎಂಬುದು ನನ್ನ ನಿಶ್ಚಿತ ಅಭಿಪ್ರಾಯ”. ಒಂದೊAದು ನಾಗರಿಕತೆಗೆ ಒಂದೊAದು ಗಡಿ ಇರುತ್ತದೆ. ಭಾರತೀಯರು ತಮ್ಮ ನಾಗರಿಕತೆಗೆ, ಜೀವನಕ್ಕೆ ಇರಿಸಿರುವ ಗಡಿಯೆಂದರೆ ಅದುವೇ ಧರ್ಮ- ಜೀವನಧರ್ಮ- ಮಾನವ ಧರ್ಮ.
“ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್”
ಲೋಕದಲ್ಲಿ ಅಧರ್ಮ ಹೆಚ್ಚಿದಾಗೆಲ್ಲ ಭಗವಂತನ ಆವಿರ್ಭಾವವಾಗುತ್ತದೆ. ಮಾನವ ಧರ್ಮವನ್ನು ಸಂರಕ್ಷಿಸಲು ನಮ್ಮನ್ನು ನಾವೇ ನಿಗ್ರಹಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಮನೋನಿಗ್ರಹ, ಸದಾಚಾರದ ಕರ್ತವ್ಯ, ಪ್ರಾಮಾಣಿಕತೆ ಇವು ಧರ್ಮದ ಅಭ್ಯುದಯದೊಂದಿಗೆ ದೇಶದ ಉನ್ನತಿಗೆ ತಳಹದಿಯಾಗಿವೆ. “ದಯವೇ ಧರ್ಮದ ಮೂಲ” ಹಾಗೂ “ದಯವಿಲ್ಲದ ಧರ್ಮವದಾವುದಯ್ಯ” ಎಂಬAತೆ ಮಾನವತೆಯೇ ಧರ್ಮದ ಮೂಲ ಸ್ರೋತವಾಗಿದೆ.
ನಮ್ಮ ಪೂರ್ವಿಕರು ಧರ್ಮಕ್ಕೆ ಉಚ್ಛ ಸ್ಥಾನವನ್ನು ನೀಡಿದ್ದರಿಂದ ಋಷಿ ಮುನಿಗಳು ಆಧ್ಯಾತ್ಮ ಸಾಕ್ಷಾತ್ಕಾರದಲ್ಲಿ ಅತ್ಯುನ್ನತ ಹಂತವನ್ನು ತಲುಪಲು ಸಾಧ್ಯವಾಯಿತು. ಆಧ್ಯಾತ್ಮಿಕತೆಯೊಂದಿಗೆ ಲೌಕಿಕತೆಗೂ ಮಹತ್ವ ನೀಡುತ್ತ ಸಮಾಜದ ಒಳಿತಿಗಾಗಿಯೂ ಶಮಿಸುತ್ತಿದ್ದರು. ಲೋಕೋದ್ಧಾರಕ್ಕೂ ಕೈ ಜೋಡಿಸುತ್ತಿದ್ದರು. ಲೌಕಿಕ ವೃಂದಾವನದಲ್ಲಿ ಜ್ಞಾನ –ಧ್ಯಾನ ಸಾಧನೆಯಿಂದ ಆಧ್ಯಾತ್ಮಿಕತೆಯ ಪುಷ್ಪಗಳನ್ನರಳಿಸಿ ಪಾರಮಾರ್ಥಿಕತೆಯ ಸುಗಂಧವನ್ನು ಪಸರಿಸುತ್ತಿದ್ದರು. ಈ ಸಮನ್ವಯವೇ ಹಿಂದೂ ಧರ್ಮದ ಸಾರ.
ಜ್ಯೋತಿಷ್ಯ ಶಾಸ್ತç, ಅಶ್ವಶಾಸ್ತç, ಶಿಲ್ಪ ಶಾಸ್ತç, ಕೃಷಿ, ಧನುರ್ವೇದ, ಆಯುರ್ವೇದ, ಲೋಹ ಶಾಸ್ತç, ರಸ ವಿಜ್ಞಾನ, ಗಣಿತ ಶಾಸ್ತç, ಭೌತ ಶಾಸ್ತç, ಲಲಿತ ಕಲೆ………….ಹೀಗೆ ಹಲವಾರು ಶಾಸ್ತçಗಳಲ್ಲಿ ಅತ್ಯುತ್ತಮ ಪರಿಣಿತಿಯನ್ನು ಭಾರತೀಯರು ಪಡೆದಿದ್ದರು.ಆದರೆ ಬೌತ ವ್ಯವಹಾರಗಳಿಗೆ ಮಿತಿಯನ್ನು ಹಾಕಿಕೊಂಡು ಅಷ್ಟಕ್ಕೆ ಮಾತ್ರ ಬಳಸುತ್ತಿದ್ದರು. ದುರಾಸೆಯೆಂಬ ಭೂತದ ಬೆನ್ನಟ್ಟುತ್ತಿರಲಿಲ್ಲ. ಇದು ನಾಗರಿಕತೆಯ ಉಳಿವಿಗೆ ಸಹಕಾರಿಯಾಯಿತು.
ಋಗ್ವೇದ. ಯಜುರ್ವೇದ, ಅಥರ್ವಣ ವೇದಗಳಲ್ಲಿ ಬದುಕಿನ ಸಾರ ಅಂತರ್ಗತವಾಗಿದೆ. ಇಂದು ಪ್ರಚಲಿತದಲ್ಲಿರುವ ಕೌಶಲ್ಯಾಭಿವೃದ್ಧಿ ಯೋಜನೆಯು ಪ್ರಾಚೀನ ಕಾಲದಲ್ಲಿಯೇ ಸಹಜವಾಗಿ ಅಸ್ತಿತ್ವದಲ್ಲಿತ್ತು. ಮರಗೆಲಸ, ಚಮ್ಮಾರಿಕೆ, ಚರ್ಮೋದ್ಯಮ, ಕಮ್ಮಾರಿಕೆ, ಲೋಹ ಕಲೆ, ಕುಂಬಾರಿಕೆ, ವೈದ್ಯಕೀಯ, ಕರಕುಶಲ ಕಲೆ ಮುಂತಾದವುಗಳು ಋಗ್ವೇದದಲ್ಲಿ ಉಲ್ಲೇಖವಾಗಿವೆ. ಕೃಷಿಯ ಬೇರೆ ಬೇರೆ ವಿಭಾಗಗಳ ವಿವರವಾದ ಪ್ರಸ್ತಾಪಗಳು ಯಜುರ್ವೇದದಲ್ಲಿವೆ.
ಪ್ರಕೃತಿಯ ಮೂಲಘಟಕಗಳಾದ ಪಂಚಭೂತಗಳನ್ನು ಏಕೀಕರಿಸಿ, ಅವುಗಳಲ್ಲಿ ಸಂಚಯನಗೊAಡಿರುವ ಶಕ್ತಿಯನ್ನು ನಮ್ಮೊಳಗೆ ಆವಾಹಿಸಿಕೊಳ್ಳುವ ಪ್ರಕ್ರಿಯೆಯೇ ಪೂಜೆ ಪುನಸ್ಕಾರಗಳು. ಪ್ರಕೃತಿಯಲ್ಲಿರುವ ಋಣಾತ್ಮಕ ಅಂಶಗಳನ್ನು ನಿಗ್ರಹಿಸಿ, ನಿವಾರಿಸಿ ಧನಾತ್ಮಕ ಶಕ್ತಿಯನ್ನು ಪುನರುಜ್ಜೀವನಗೊಳಿಸುವುದೇ ಯಜ್ಞ ಯಾಗಾದಿಗಳ ಆಶಯ. ಈ ಹಿನ್ನೆಲೆಯಲ್ಲಿ ಪ್ರಾಚೀನ ಕಾಲದಲ್ಲಿ ಯಜ್ಞ – ಯಾಗ, ಹೋಮ-ಹವನಗಳು ಪ್ರಚಲಿತದಲ್ಲಿದ್ದವು. ಇವುಗಳು ಬರಿಯ ಆಚರಣೆಗಳಷ್ಟೇ ಅಲ್ಲದೆ, ವೈಜ್ಞಾನಿಕ ಮಹತ್ವವನ್ನೂ ಹೊಂದಿವೆ.
• ವೀರ, ಧೀರ, ಶೂರರ ತಾಯ್ನಾಡು ಭಾರತ
ತಾಯಿ ಭಾರತಿಯನ್ನು ದಾಸ್ಯದ ಸಂಕೋಲೆಯಿAದ ಬಂಧಿಸಿ, ತಾಯಿಯ ಸಂಪದ್ಭರಿತ ಮಡಿಲನ್ನು ಬರಿದಾಗಿಸಿದ ದುರುಳರನ್ನು ಹೆಡೆಮುರಿ ಕಟ್ಟಿದ ವೀರ ಪುತ್ರರ, ವೀರ ಪುತ್ರಿಯರ ವೀರಗಾಥೆ ಇಲ್ಲಿದೆ. ಯುರೋಪಿಯನ್ನರ ದುರಾಚಾರಗಳನ್ನು ಹರಣ ಮಾಡಿ ತಾಯಿಯ ಚರಣಕಮಲಗಳಲ್ಲಿ ಸ್ವಾತಂತ್ರö್ಯದ ಅರವಿಂದವನ್ನು ಅರ್ಪಿಸಿದ ಅದೆಷ್ಟೋ ವೀರ ಸೇನಾನಿಗಳ ಸಾವಿರ ಸಾವಿರ ಕಥೆಗಳಿವೆ. ಲೋಕಮಾನ್ಯ ಬಾಲಗಂಗಾಧರ ತಿಲಕರು, ವೀರ ಸಾವರ್ಕರ್, ಲಾಲ ಬಹಾದ್ದೂರ ಶಸ್ತಿç, ವಲ್ಲಭ ಭಾಯಿ ಪಟೇಲ, ಕಾಳು ಮೆಣಸಿನ ಒಡತಿ ರಾಣಿ ಚೆನ್ನಭೈರಾದೇವಿ, ಭಗತ್ ಸಿಂಗ್, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ……………….ಹೀಗೆ ಅಸಂಖ್ಯ ಮಹನೀಯರ ರಕ್ತ ತರ್ಪಣದ ಪ್ರತಿಫಲವೇ ನಮ್ಮ ಸ್ವಾತಂತ್ರö್ಯ.
ಅಹಿಂಸೆ, ಸತ್ಯಾಗ್ರಹ, ಚಳುವಳಿಗಳ ಮೂಲಕ ಸ್ವದೇಶದ ಭಾವೈಕ್ಯ ಭಾವನೆಯನ್ನು ಬಿತ್ತಿ ಸ್ವಾತಂತ್ರö್ಯ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಿ, ಸ್ವದೇಶೀ ಭಾವನೆಯ ಮಹಾನ್ ವೃಕ್ಷವನ್ನು ಬೆಳೆಸಿದ ಮಹಾತ್ಮಾ ಗಾಂಧೀಜಿಯವರ ತತ್ವ ಮತ್ತು ಆದರ್ಶಗಳು ಸದಾ ಅನುಸರಣೀಯ.
ದಾಸ್ಯದ ಕಾರ್ಮುಗಿಲ ಕರಿ ಪರದೆ ಸರಿದು
ಸ್ವಾತಂತ್ರö್ಯದ ಹೊಂಗಿರಣ ಮಾಲೆ ಸುರಿದ ದಿನ
ಪರಕೀಯರ ದಬ್ಬಾಳಿಕೆಯ ಶೃಂಖಲೆ ಹರಿದ ದಿನ
ಸ್ವರಾಜ್ಯದ ಉದ್ಘೋಷ ಮೊಳಗಿದ ದಿನ
ನೆಲ ಜಲ ಮುಗಿಲಿನ ಅಣು ಅಣುವಲಿ
ಸುರಾಜ್ಯ ದೀವಿಗೆಗಳು ಮೆರವಣಿಗೆ ಹೊರಟ ದಿನ
ಸಹ್ಯಾದ್ರಿಯ ಸಿರಿಮುಡಿಯಲಿ ಹಿಮಗಿರಿ ಶಿಖರದುತ್ತುಂಗದಲಿ
ತ್ರಿವರ್ಣ ಧ್ವಜ ರಾರಾಜಿಸಿದ ದಿನ
ಭರತ ಭೂಮಿಯ ಖುಷಿಯ ದಿಬ್ಬಣದ ಹಬ್ಬದ ದಿನ
ಅಖಂಡ ಭರತಖಂಡದ ಸೀಮಾತೀತ ತೇಜೋ ಹಿಂದುತ್ವ
ಕೋಟಿ ಜೀವಕೋಶಗಳಲಿ ಮಿಡಿವ ಪ್ರಾಣ ಚೈತನ್ಯ ಸಿಂಧುತ್ವ
ಭಾರತೀಯರ ಎದೆ ಎದೆಯಲಿ
ದೇಶಭಕ್ತಿ ಪಣತೆಗಳ ಪ್ರದೀಪ್ತ ಕಾಂತಿಯಿದೆ
ಅಪ್ಪಟ ದೇಶಾಭಿಮಾನದ ಸೊಡರಿನ ಆತ್ಮದೀವಿಗೆಯ
ಅನುದೀಪ್ತಿಯಿದೆ
ಪ್ರಜಾತಂತ್ರ, ಪ್ರಜಾಪ್ರಭುತ್ವಗಳ ವಿಶಿಷ್ಟ ವೈಖರಿಯ ಆಡಳಿತ ವ್ಯವಸ್ಥೆಯ ಭದ್ರಕೋಟೆಯೇ ಭಾರತ. ಸ್ವಾತಂತ್ರö್ಯದ ಹಣತೆಯ ಪ್ರಖರ ದೀಪ್ತಿಯ ಹಿಂದೆ ಅಸಂಖ್ಯ ದೇಶಭಕ್ತರ ತ್ಯಾಗದ ತೈಲವಿದೆ. ಬತ್ತಿಯ ತೆರದಿ ತಮ್ಮನ್ನು ತಾವೇ ಉರಿಸಿಕೊಂಡು ಸಮರ್ಪಿಸಿದ ದೇಶಪ್ರೇಮದ ಹಣತೆಗಳಿವೆ. ಧೀರ, ವೀರ, ಕೇಸರಿ ಕಲಿಗಳ ಸಿಂಹನಾದದ ಫಲಶ್ರುತಿಯೇ ಈ ಸ್ವಾತಂತ್ರö್ಯ. ಭಾರತ ದೇಶದ ಕಣಕಣದಲ್ಲೂ ಸ್ವಾತಂತ್ರö್ಯ ಹೋರಾಟಗಾರರ ಪ್ರಾಣ ಚೈತನ್ಯವಿದೆ. ಈ ಚೈತನ್ಯವೇ ಭಾರತೀಯ ಸಂಸ್ಕೃತಿಯ ಉಸಿರು. ಬಂಕಿಮಚAದ್ರರ “ವಂದೇ ಮಾತರಂ” ಎಂಬುದು ಭಾರತೀಯರಲ್ಲಿ ಏಕತ್ರ ಭಾವವನ್ನು ಉದ್ದೀಪನಗೊಳಿಸುವ ನಿತ್ಯ ಸತ್ಯ ಚೇತನದ ಗೀತೆಯಾಗಿದೆ. ರಾಷ್ಟçಧ್ವಜ, ರಾಷ್ಟçಗೀತೆ ಹಾಗೂ ರಾಷ್ಟçಲಾಂಛನಗಳು ಸರ್ವರಲ್ಲಿ ಭ್ರಾತೃ ಭಾವನೆಯನ್ನು ಬೆಳೆಸಿ ಭಾವೈಕ್ಯತೆಯ ಯಾನಕ್ಕೆ ರಹದಾರಿಯನ್ನೊದಗಿಸುವ ಅಂಶಗಳು.
• ಸಾಹಿತ್ಯ, ಕಲೆ, ಶಿಲ್ಪಕಲೆ, ಸಾಸ್ಕೃತಿಕ ವೈಭವ- ಸಂಸ್ಕೃತಿಯ ಉನ್ನತಿಗೆ ನವ ಪಲ್ಲವ
ಚಾಲುಕ್ಯ, ಹೊಯ್ಸಳ, ಗಂಗ, ಕದಂಬ, ರಾಷ್ಟçಕೂಟ, ಚಾಲುಕ್ಯ, ಮೌರ್ಯರಂತಹ ಶೂರ- ವೀರ ರಾಜಮನೆತನಗಳು ಆಳಿದ ವೀರಭೂಮಿ ಭಾರತ. ಶಿಲೆಯೆದೆಯಲ್ಲಿ ಶಿಲ್ಪವನ್ನು ಅರಳಿಸುವ ಶ್ರೇಷ್ಟ ಶಿಲ್ಪಿಗಳು ಜನಿಸಿದ ಕಲಾಭೂಮಿ ಭಾರತ. ರಾಜಮನೆತನಗಳು ರಾಜ್ಯಾಡಳಿತಕ್ಕಷ್ಟೇ ಸೀಮಿತವಾಗಿರಲಿಲ್ಲ. ಸಾಹಿತ್ಯ, ಕಲೆ, ಶಿಲ್ಪಕಲೆಗಳಿಗೆ ಪ್ರೋತ್ಸಾಹ ನೀಡಿದ ರಾಜಮನೆತನಗಳ ಕಾರ್ಯ ಶ್ಲಾಘನೀಯವಾದದ್ದು. ಸಿಂಧೂ ನದಿ ನಾಗರಿಕತೆಯ ಕಾಲದಿಂದಲೇ ಶಿಲ್ಪಕಲೆ ಪ್ರವರ್ಧಮಾನಕ್ಕೆ ಬಂದಿತು.
ಗುಹಾಂತರ ದೇವಾಲಯಗಳು ಗುಪ್ತರ ಶಿಲ್ಪಕಲಾ ವೈಭವವನ್ನು ಬಿಂಬಿಸಿದರೆ, ಬಾದಾಮಿ ಚಾಲುಕ್ಯರ ಶಿಲ್ಪದ ವೈಶಿಷ್ಟö್ಯಗಳು ಕರ್ಣಾಟ ದ್ರಾವಿಡ ಶೈಲಿಯಲ್ಲಿ ಅನನ್ಯವಾಗಿ ರೂಪುಗೊಂಡು ಹೊಸ ಅಭಿವ್ಯಕ್ತಿಯನ್ನು ಅಭಿವೃದ್ಧಿಪಡಿಸಿದವು. ಲಯಬದ್ಧ ರಚನೆಗಳನ್ನು ಹೊಂದಿದ ಕಂಚಿನ ಶಿಲ್ಪಗಳು ಚೋಳರ ಆಳ್ವಿಕೆಯ ವಿಶಿಷ್ಟ ರಚನೆಗಳನ್ನು ಬಿಂಬಿಸುತ್ತವೆ.
ಐಹೊಳೆ, ಪಟ್ಟದಕಲ್ಲು, ಬಾದಾಮಿ, ಹಂಪಿ ಮುಂತಾದ ಐತಿಹಾಸಿಕ ನಗರಗಳ ಶಿಲ್ಪಕಲಾ ವೈಭವದ ಮೆರವಣಿಗೆಯು ಕಣ್ಮನಗಳನ್ನು ತಣಿಸುವುದರೊಂದಿಗೆ ಭಾರತೀಯ ಕಲೆಗಾರರ ಪರಿಣಿತಿಯನ್ನು ಬಿಂಬಿಸುತ್ತದೆ.
ಭಾರತೀಯ ವಾಸ್ತುಶಿಲ್ಪವು ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಧರ್ಮಗಳ ಪ್ರತಿರೂಪ. ಹಲವಾರು ವಾಸ್ತುಶಿಲ್ಪ ಶೈಲಿಗಳು ಮತ್ತು ಸಂಪ್ರದಾಯಗಳಲ್ಲಿ ಹಿಂದೂ ದೇವಾಲಯದ ವಾಸ್ತುಶಿಲ್ಪ ಮತ್ತು ಇಂಡೋ ಇಸ್ಲಾಮಿಕ್ ವಾಸ್ತುಶಿಲ್ಪ, ರಜಪೂತ ವಾಸ್ತುಶಿಲ್ಪ, ದಕ್ಷಿಣ ಭಾರತೀಯ ವಾಸ್ತುಶಿಲ್ಪ, ಇಂಡೋ ಸಾರ್ಸೆನಿಕ್ ವಾಸ್ತುಶಿಲ್ಪಗಳು ಪ್ರಸಿದ್ಧಿಯನ್ನು ಹೊಂದಿವೆ.
ಕೈಲಾಶ್ ದೇವಾಲಯ, ಅಜಂತಾ-ಎಲ್ಲೋರಗಳ ಗುಹಾಂತರ ದೇವಾಲಯಗಳು, ಭಾರತೀಯ ರಾಕ್‌ಕಟ್ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದೆ. ಮಧುರೆಯ ಮೀನಾಕ್ಷಿ ದೇವಾಲಯವು ತಮಿಳು ವಾಸ್ತು ಶೈಲಿಯಲ್ಲಿದೆ.
ದೇವಾಲಯಗಳೆಂದರೆ ಶಾಂತಿ ಸೌಹಾರ್ದತೆಯ ಭಾವಗಳ ಮೂಲ ಮಂದಿರಗಳು. ಶಕ್ತಿ ಕೇಂದ್ರಗಳು, ಶ್ರದ್ಧಾ ಭಕ್ತಿ ಆಧ್ಯಾತ್ಮಿಕತೆಯ ಸಾತ್ವಿಕ ತೇಜೋ ಆಲಯಗಳು. ದೇವಾಲಯಗಳ ಕಲ್ಲು ಕಲ್ಲಿನಲಿ, ಕಂಭಗಳ ಕಲಾ ಕುಸುರಿಯಲಿ ಬಾರತಾಂಬೆಯ ಭವ್ಯ ಮೂರ್ತಿಯಿದೆ. ಅವಳ ಧೀಶಕ್ತಿಯ ಕಂಪನದ ಅಲೆ ದೇವಮಂದಿರಗಳಲ್ಲಿ ಅನವರತ ಹೊಮ್ಮುತ್ತಿರುತ್ತದೆ. ತಾಯಿ ಭಾರತಿಯ ಜಯಘೋಷದ ಪ್ರಣವನಾದದ ತರಂಗಗಳು ಶಿಲ್ಪ ಶಿಲ್ಪಗಳ ವೀಣೆಗಳಲ್ಲಿ ಮಿಡಿಯುತ್ತಿರುತ್ತವೆ.
• ಹಲವು ಭಾಷೆ ಏಕ ಭಾವದ ಸಮನ್ವಯ ನಾಡು ಭಾರತ
ಸಂಯುಕ್ತ ರಾಜ್ಯಗಳ ಒಕ್ಕೂಟವಿದು ಭಾರತ. ಇಪ್ಪತ್ತೆಂಟು ರಾಜ್ಯಗಳು, ಎಂಟು ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಭಾಷಾ ವಿಶಿಷ್ಟತೆಯೊಂದಿಗೆ ತÀನ್ನದೇ ಆದಂತಹ ಅನನ್ಯತೆಯನ್ನು ಹೊಂದಿದೆ.
ಹಲವು ಭಾಷೆಗಳ ಹಲವು ಮತಗಳ
ಹಲವು ಪಂಥಗಳ ಸುಂದರ ಸುಮಗಳ
ಮಧುರ ಹೂಬನ ಭಾರತ
ಹೂಬನದ ಅಂಗಳದಿ ಹೊಮ್ಮುತಿಹ
ಸುಗಂಧವದುವೇ ಮಾನವ ಧರ್ಮ
ವೈವಿಧ್ಯತೆಯಲ್ಲಿ ಏಕತೆಯ ಚಂದನವನ್ನು ಸೂಸುವ ಸರ್ವ ಜನಾಂಗದ ಶಾಂತಿಯ ತೋಟ ಭಾರತ. ಹಿಂದೂ ಕ್ರೆöÊಸ್ತ, ಮುಸಲ್ಮಾನ, ಪಾರಸಿಕ, ಜೈನ, ಬೌದ್ಧ ಹೀಗೆ ನಾಮಗಳು ಹತ್ತು ಹಲವಾದರೂ ಅಂತರಾಳದಲ್ಲಿ ಪ್ರವಹಿಸುತ್ತಿರುವ ಸ್ರೋತವದುವೇ ಮಾನವಧರ್ಮ.
ಸಾಧು ಸಂತರು, ಪ್ರವಾದಿಗಳು, ಯತಿವರೇಣ್ಯರು, ಮಹರ್ಷಿಗಳು, ರಾಜರ್ಷಿಗಳು, ಧೀರ ವೀರ ಸನ್ಯಾಸಿಗಳು, ಯತಿವರೇಣ್ಯರು, ದಾಸ ಶ್ರೇಷ್ಟರು, ಯುಗ ಪ್ರವರ್ತಕರು…….ಇವರೆಲ್ಲ ಆಯಾ ಕಾಲಘಟ್ಟದಲ್ಲಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತ, ಮನುಕುಲವನ್ನು ಬೆಳಕಿನ ಹಾದಿಯಲ್ಲಿ ಮುನ್ನಡೆಸುತ್ತ ಮಾನವನ ಬಾಳಿಗೆ ಅಂದದ ಚೌಕಟ್ಟನ್ನು ನಿರ್ಮಿಸಿಕೊಟ್ಟಿದ್ದಾರೆ.
“ದೇವನೊಬ್ಬ ನಾಮ ಹಲವು” ಎಂಬAತೆ ಜಗವನ್ನು ಜಗವನ್ನು ಅನವರತ ಕಾಯುತಿಹ ದಿವ್ಯ ಶಕ್ತಿ ಸ್ವರೂಪ ಭಗವಂತನೊಬ್ಬನೇ ಸತ್ಯ. ಸರ್ವರಂತರಾತ್ಮಗಳಲಿ ನೆಲೆಸಿಹ ದೇವನೇ ಸಂಸ್ಕಾರ-ಸAಸ್ಕೃತಿಯ ರೂವಾರಿ.
ಎಲ್ಲ ವೈವಿಧ್ಯತೆಗಳ ಆಗರವಾಗಿರುವ ಭಾರತದಲ್ಲಿ ಸರ್ವಧರ್ಮ ಸಮನ್ವಯತೆಯೆಂಬುದು ಸುಲಭವಾದ ಕಾರ್ಯವಲ್ಲ. ಆದಾಗ್ಯೂ ಕಾಲ ಕಾಲಕ್ಕೆ ಪುಣ್ಯಭೂಮಿ ಭಾರತದಲ್ಲಿ ಯುಗ ಪ್ರವರ್ತಕರು, ಧರ್ಮ ಸಂಸ್ಥಾಪನಾಚಾರ್ಯರು ಸಾಮರಸ್ಯದ ಅಗ್ರಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ.
• ಚಿತ್ರಕಲೆ- ಸಂಸ್ಕೃತಿಯ ಪ್ರತಿಬಿಂಬ
ರಾಜಾ ರವಿವರ್ಮರಂತಹ ಅದಭುತ ಕಲಾವಿದರು ಜನಿಸಿದ ಕಲಾವನ ನಮ್ಮ ಭಾರತ. ತತ್ವಜ್ಞಾನದ ಶಾಖೆಯಾದ ಸೌಂದರ್ಯ ಮೀಮಾಂಸೆಯ ಪ್ರತಿರೂಪವೇ ಕಲೆ. ಕಲ್ಪನಾ ಸೃಷ್ಟಿ ಮತ್ತು ಭಾವನೆಗಳನ್ನು ಅಭಿವ್ಯಕ್ತಿಸುವ ದೃಶ್ಯ ಮಾಧ್ಯಮವಿದು. ರಿಚರ್ಡ ವೊಲೆಹಿಮ್ ಅವರು “ ಮನುಷ್ಯ ಸಂಸ್ಕೃತಿಯ ಅತ್ಯಂತ ಹಳೆಯ ಮತ್ತು ಭೇದಿಸಲಾಗದ ರಹಸ್ಯವೇ ಕಲೆ” ಎಂದು ಬಣ್ಣಿಸಿದ್ದಾರೆ.
ಭಾವಗಳ ವಾಹಕ, ಯೋಜನೆಗಳನ್ನು ಸಂವಹಿಸುವ ಮಾಧ್ಯಮವಿದು ಲಲಿತ ಕಲೆ. ಭಾರತದ ಸಂಸ್ಕೃತಿಯ ಅದರ ಆಧ್ಯಾತ್ಮಿಕ, ವೈಜ್ಞಾನಿಕ, ಕಲಾತ್ಮಕ ಸಾಧನೆಗಳ ಸಂಕೇತವಾಗಿದೆ. ವಿಜ್ಞಾನ ಮತ್ತು ಕಲೆ ಪರಸ್ಪರ ಒಂದಕ್ಕೊAದು ಪೂರಕ ಕ್ಷೇತ್ರಗಳು. ವೈಜ್ಞಾನಿಕ ಜ್ಞಾನ ಮತ್ತು ದೃಷ್ಟಿಕೋನವಿಲ್ಲದೆ ಕಲೆ ಉದ್ಭವಿಸಲು ಸಾಧ್ಯವಿಲ್ಲ. ಆಧ್ಯಾತ್ಮಿಕ ಭಾವವು ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಕಲೆಯಲ್ಲಿ ಹಾಸುಹೊಕ್ಕಾಗಿರುತ್ತದೆ.
ಕಲೆಯ ಕನ್ನಡಿಯಲ್ಲಿ ದೇಶದ ಭವ್ಯ ಚಿತ್ರಣ ಪ್ರತಿಬಿಂಬಿಸಲ್ಪಡುತ್ತದೆ. ಸಾಮಾಜಿಕ ತತ್ವಶಾಸ್ತç ಮತ್ತು ವಿಜ್ಞಾನಗಳು ಪ್ರತಿಫಲಿಸಲ್ಪಡುತ್ತವೆ. “ತತ್ವಜ್ಞಾನವು ಮನಸ್ಸಿನ ಕ್ರಿಯೆಯಾಗಿದ್ದರೆ ವಿಜ್ಞಾನವು ದೇಹ ಕ್ರಿಯೆಯಾಗಿದೆ. ಕಲೆಯು ಮಾನವನ ಆತ್ಮದ ಕ್ರಿಯೆಯಾಗಿದೆ. ಕಲೆಯು ದೇಹ ಮತ್ತು ಮನಸ್ಸಿನ ಅನುಭವ ಸಾರವಾಗಿದೆ. ಕಲೆಯೇ ಮಾನವ ಸಂಸ್ಕೃತಿಯ ಜೀವಾಳ.
ಭಾರತೀಯ ಕಲೆಯು ಧಾರ್ಮಿಕತೆ, ಯೋಗಾರಾಧನೆ, ನೈಸರ್ಗಿಕತೆ, ಆದರ್ಶವಾದ ಬಿಂದು-ರೇಖೆ-ಬಣ್ಣಗಳು, ಕ್ರಮಬದ್ಧತೆಯ ಪ್ರತೀಕವಾಗಿದ್ದು ಆನಂದ ಸಾಧನೆಯ ಸಾಧನವಾಗಿದೆ. ಧ್ಯಾನ, ಉಪದೇಶ, ಕ್ಷಮೆ, ದಾನ, ತ್ಯಾಗ, ತಪಸ್ಸು, ಶೌರ್ಯ, ಕೋಪ, ವಿರಹ, ಕಾಯುವಿಕೆ, ಒಂಟಿತನ, ಮುಂತಾದವುಗಳು ಮುದ್ರಾ ಅಭಿವ್ಯಕ್ತಿಯಲ್ಲಿ ಮೂಡಿ ಬಂದಿವೆ. ಧರ್ಮ, ಅರ್ಥ, ಕಾಮ, ಮೋಕ್ಷ ಈ ನಾಲ್ಕು ಷತುರ್ವಿಧ ಪುರುಷಾರ್ಥಗಳು ಕಲೆಯಿಂದ ಪ್ರಾಪ್ತಿಯಾಗುತ್ತವೆ.
ಕಲಾ ಮಾಂತ್ರಿಕ ಡಾ. ಎಸ್ ಎಂ. ಪಂಡಿತ, ರಾಜಾ ರವಿವರ್ಮ, ರವೀಂದ್ರನಾಥ ಟ್ಯಾಗೋರ್, ಬಿ. ಕೆ. ಎಸ್. ವರ್ಮಾ ಮುಂತಾದವರು ಚಿತ್ರಕಲಾ ಇತಿಹಾಸದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.
• ಭಾರತೀಯ ಉಜ್ವಲ ಸಾಹಿತ್ಯ ಪರಂಪರೆ ಸಂಸ್ಕೃತಿಯ ಮಹಾನದಿ
ಭಾರತದ ಆದಿ ಕಾವ್ಯಗಳು ಮಹಾಭಾರತ, ರಾಮಾಯಣ, ಭಾಗವತ, ಭಗವದ್ಗೀತೆಗಳು ಭಾರತೀಯ ಸಾಹಿತ್ಯ ಪರಂಪರೆಯ ಮೂಲ ಭಾವಕೋಶಗಳು. ರನ್ನ, ಪಂಪ, ಹರಿಹರ, ರಾಘವಾಂಕ, ಕಾಳಿದಾಸ, ಭಾರವಿ, ದಂಡಿ…ಹೀಗೆ ಪ್ರಾಚೀನ ಕವಿಗಳು ತಮ್ಮ ದೇದೀಪ್ಯಮಾನವಾದ ಅತ್ಯದ್ಭುತವಾದ ಸಾಹಿತ್ಯ ದೀಪಿಕೆಗಳ ಮೂಲಕ ಜಗದ್ವಿಖ್ಯಾತರಾಗಿದ್ದಾರೆ, ಜಗದ್ವಂದ್ಯರಾಗಿದ್ದಾರೆ.
ಕುವೆಂಪು, ದ. ರಾ. ಬೇಂದ್ರೆ, ಓಶೋ ರಜನೀಶ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪು. ತಿ. ನರಸಿಂಹಾಚಾರ್, ಶಿವರಾಮ ಕಾರಂತ, ಕೆ. ಎಸ್. ನರಸಿಂಹಸ್ವಾಮಿ, ವಿ. ಕೃ. ಗೋಕಾಕ, ಎಸ್. ಎಲ್. ಭೈರಪ್ಪ,…………..ಹೀಗೆ ಕವಿಗಳ, ಸಾಹಿತಿಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ತಮ್ಮ ಕಾವ್ಯಧಾರೆಯ ಮೂಲಕ ಪ್ರಖರ ಜ್ಯೋತಿರ್ಮಯ ಅಕ್ಷರ ದೀಪಗಳನ್ನು ಬೆಳಗಿಸಿ ಜನಜನಿತರಾಗಿದ್ದಾರೆ. ಕನ್ನಡ ನಾಡು ನುಡಿಯ ರಥವನ್ನೆಳೆದಿದ್ದಾರೆ.
ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳ ಮೇರು ಸಾಧಕರಿಗೆ ಮೀಸಲಾಗಿದೆ. ಅತ್ಯುತ್ತಮ ಸಾಹಿತ್ಯ ಕೃತಿ ಅಥವಾ ಸಮಗ್ರ ಸಾಹಿತ್ಯದ ಕೊಡುಗೆ ನೀಡಿದ ಭಾರತೀಯರ ಸಿರಿಮುಡಿಯನ್ನು ಈ ಪ್ರಶಸ್ತಿ ಅಲಂಕರಿಸುತ್ತದೆ. ಇದುವರೆಗೆ ನಮ್ಮ ಹೆಮ್ಮೆಯ ಕರುನಾಡ ವರಪುತ್ರರಿಗೆೆಂಟು ಮಂದಿ ಕನ್ನಡ ಕವಿರತ್ನರಿಗೆ ಜ್ಞಾನಪೀಠ ಪ್ರಶಸ್ತಿಯ ಗರಿ ದೊರೆತಿದೆ.
ನಮ್ಮ ಕರುನಾಡು ತಾಯಿ ಭಾರತಿಯ ಚೈತನ್ಯ ಸಿರಿಯ ನೆಲೆವೀಡು. ಭುವನೇಶ್ವರಿಯ ತಾಯ ಮಡಿಲು ಇದು. ಮತ್ತೊಂದು ಅತ್ಯುನ್ನತ ಪ್ರಶಸ್ತಿ ಸರಸ್ವತಿ ಸಮ್ಮಾನ್‌ಗೆ ಇಬ್ಬರು ಕನ್ನಡಿಗರು ಭಾಜನರಾಗಿರುವುದು ಈ ನೆಲದ ಹಮ್ಮೆ. ಡಾ. ಎಸ್. ಎಲ್. ಭೈರಪ್ಪ ಮತ್ತು ಮಾಜಿ ಸಂಸದರಾದ ಎಂ. ವೀರಪ್ಪ ಮೊಯ್ಲಿ ಅವರ ಕೃತಿಗಳಿಗೆ ಸಂದಿರುವ ಈ ಗೌರವ ಕನ್ನಡಾಂಬೆಯ ಕಿರೀಟದ ಮಾಣಿಕ್ಯ.
ಸಾಹಿತ್ಯವೆಂಬುದು ಅನುದಿನ, ಅನುಕ್ಷಣ, ಅವಿಶ್ರಾಂತವಾಗಿ, ಅವಿರತವಾಗಿ ಪ್ರವಹಿಸುವ ಮಹಾನದಿ. ಈ ನದಿಯು ಸಂಸ್ಕೃತಿಯ ಅಭ್ಯುದಯಕ್ಕೆ ಮೂಲ ಪ್ರವಾಹವಾಗಿದೆ. ಭಾಷೆಯ ಚೌಕಟ್ಟನ್ನು ಮೀರಿ ಭಾವಲಹರಿ ಓತಪ್ರೋತವಾಗಿ ಭೋರ್ಗರೆದಾಗ ಭಾವೈಕ್ಯತೆಯ ಶರಧಿ ಪೂರ್ಣವಾಗುತ್ತದೆ. ಭಾರತವೆಂಬುದು ವಿವಿಧ ಭಾಷೆಗಳ, ಏಕಭಾವದ ಏಕೀಕರಣದ ಅಸ್ಮಿತೆ. ವೇಷ-ಭಾಷೆಗಳ ಬೇಲಿ ದಾಟಿ, ಎದೆ ಎದೆಯೊಳಗೆ ಮಾನವತೆಯ ಅಕ್ಷರ ಸುಮಗಳು ಅರಳಿದರೆ ಅದುವೇ ಸಾಹಿತ್ಯ ಕ್ಷೇತ್ರದ ಸಾಧನೆ. ಈ ನೆಲದ ಸಾಹಿತ್ಯಕ್ಕೆ ಅಂತಹ ದಿವ್ಯ ಶಕ್ತಿಯಿದೆ. ಎದೆನೆಲದ ತಾಯಿ ಬೇರಿನ ತಂತುಗಳು ಭಾರತೀಯರ ಅಭಿಮಾನದಕ್ಕರೆಯ ಸಾಹಿತ್ಯ ಪ್ರಣತಿಗಳು.
• ಪಾರಂಪರಿಕ ಕಲಾ ಪ್ರಕಾರಗಳು- ಸಂಸ್ಕೃತಿಯ ರೂವಾರಿಗಳು
“ಯಕ್ಷಗಾನಂ ವಿಶ್ವಗಾನಂ” ಎಂಬAತೆ ದೃಶ್ಯಕಲೆ ಯಕ್ಷಗಾನವು ಈ ನೆಲದ ಸಿರಿವಂತಿಕೆಯನ್ನು ಉತ್ತುಂಗಕ್ಕೇರಿಸುವ, ಸನಾತನ ಸಂಸ್ಕೃತಿಯನ್ನು ಸಾರುವ ಮಹೋನ್ನತ ಕಲೆ. ಅಂತರಾಳವನ್ನು ತೆರೆದಿಟ್ಟು, ಭವ್ಯ ಪರಂಪರೆಗೆ ಕಳಶವಿರಿಸಿ, ರಮ್ಯ ವೇಷ ಭೂಷಣಗಳೊಂದಿಗೆ ನೃತ್ಯದ ಸಮ್ಮಿಲನದೊಂದಿಗೆ ಮಾತುಗಾರಿಕೆಯ ಕೌಶಲವನ್ನು ಅನಾವರಣಗೊಳಿಸುವ ಗಂಡುಮೆಟ್ಟಿನ ಕಲೆ ಇದು. ಪುರುಷ- ಸ್ತಿçà ಎಂಬ ಭೇದವಿಲ್ಲದೆ, ಪೂಜಿಸುವವರಿಗೆ, ಆರಾಧಿಸುವವರಿಗೆ ಒಲಿಯುವ ಕಲೆ ಇದು. ಶಂಭು ಹೆಗಡೆ ಕೆರೆಮನೆ, ರಾಮಚಂದ್ರ ಚಿಟ್ಟಾಣಿ, ಮಂಜುನಾಥ ಭಗವತ ಹೊಸ್ತೋಟ, ರಾಘವೇಂದ್ರ ಆಚಾರ್ಯ ಜನ್ಸಾಲೆ…………..ಹೀಗೆ ಹೇಳುತ್ತ ಹೋದರೆ ಮುಗಿಯದ ಕಥೆ ಇದು. ಯಕ್ಷಗಾನದ ಅದ್ಭುತ ಲೋಕಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡು ಯಕ್ಷಲೋಕವನ್ನು ಭುವಿಗಿಳಿಸಿ ತಮ್ಮ ಪ್ರಾಣವನ್ನು ಮುಡಿಪಾಗಿಸಿದ ಕಲಾವಿದರ ಪ್ರತಿಭೆಗೆ, ಸೇವೆಗೆ ಬೆಲೆ ಕಟ್ಟಲಾಗದು.
ಇದು ಬರಿಯ ಮನೋರಂಜನೆಯ ಕಲೆ ಮಾತ್ರವಲ್ಲ, ರಾಮಾಯಣ, ಮಹಾಭಾರತ ಕಥಾನಕಗಳನ್ನು ಮನೋಹರವಾಗಿ ತೆರೆದಿಟ್ಟು ಪಾತ್ರ ಪರಿಚಯವನ್ನು ಮಾಡಿಸುತ್ತದೆ. ಈ ಮೂಲಕ ಭಾರತೀಯತೆಯ ಸಂಸ್ಕೃತಿಯ ಬೇರುಗಳನ್ನು ಪುನರುಜ್ಜೀವನಗೊಳಿಸಿ ಮುಂದಿನ ಪೀಳಿಗೆಗೆ ಚಿಂತನೆಯ ನವ ಪಲ್ಲವಗಳನ್ನು ಚಿಗುರಿಸುತ್ತದೆ.
ಗೀಗೀ ಪದ, ಸಂಪ್ರದಾಯದ ಹಾಡುಗಳು, ಕೋಲಾಟ, ಡೊಳ್ಳು ಕುಣಿತ, ಸುಗ್ಗಿ ಕುಣಿತ, ಕಾರ್ಯದ ಹಾಡುಗಳು, ಸೋಬಾನೆ ಪದಗಳು, ಲಾವಣಿಗಳು, ಬಿಂಗಿ ಕುಣಿತ………..ಹೀಗೆ ಜಾನಪದ ಸೊಗಡಿನ ಸಂಪ್ರದಾಯಗಳು ಜನರ ಬಾಯಿಂದ ಬಾಯಿಗೆ ಹರಿದು ಬಂದಿಹ ಸಂಸ್ಕಾರದ ನದಿಗಳು. ಇವು ಮತ್ತೆ ಪುನರ್ಜನ್ಮ ಪಡೆಯುತ್ತ ಜನಮಾನಸದಲ್ಲಿ ಹಸಿರಾಗಿರುವುದು ಇಂದಿನ ದಿನಮಾನದ ವಿಶೇಷವಾಗಿದೆ.
ಸಂಗೀತ, ನೃತ್ಯಗಳಿಲ್ಲದೆ ಬದುಕು ಪೂರ್ಣವಾಗುವುದಿಲ್ಲ. ಸಂಸ್ಕೃತಿಯೊAದು ಪ್ರಕಾಶಮಾನವಾಗಬೇಕಾದರೆ ಅಲ್ಲಿ ವಿಶ್ವಭಾಷೆ, ಆತ್ಮಭಾಷೆ, ಹೃದಯಗಳ ಭಾಷೆಯಾದ ಸಂಗೀತವಿರಲೇಬೇಕು. ಭಾರತದ ಕೋಣೆ ಕೋಣೆಗಳಲ್ಲಿ ರಾಗಗಳು ಜನ್ಮಿಸುತ್ತವೆ. ಮಣ್ಣ ಕಣ ಕಣದಲ್ಲಿ ಶ್ರುತಿ ಆವಿರ್ಭವಿಸುತ್ತದೆ. ಹಕ್ಕಿಗೊರಳಿನಲ್ಲಿ , ಹರಿವ ತರಂಗಿಣಿಯಲ್ಲಿ, ಸುಳಿವ ತಂಪೆಲರಿನಲ್ಲಿ, ಉಕ್ಕುವ ಕಡಲಿನಲ್ಲಿ ಲಯ-ತಾಳಗಳು ಝೇಂಕರಿಸುತ್ತವೆ.
ಪಂ. ಭೀಮಸೇನ ಜೋಷಿ, ವೆಂಕಟೇಶ ಕುಮಾರ, ಪ್ರವೀಣ ಗೋಡ್ಖಿಂಡಿ, ಲತಾ ಮಂಗೇಶ್ಕರ, ಎಮ್, ಎಸ್. ಸುಬ್ಬಲಕ್ಷಿö್ಮ, ..…………..ಸಂಗೀತ ಕ್ಷೇತ್ರದಲ್ಲಿ ಅಸಂಖ್ಯ ದಿಗ್ಗಜರು ತಮ್ಮ ಜೀವಮಾನವನ್ನೇ ತಾಯಿ ಸರಸ್ವತಿಯ ಸೇವೆಗೆ ಮೀಸಲಾಗಿರಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಭಾರತೀಯರ ಸಾಧನೆ ಅನಂತವಾದದ್ದು. ಜೊತೆ ಜೊತೆಗೆ ಶಾಸ್ತಿçÃಯ ನೃತ್ಯವೂ ಭಾರತೀಯತೆಯ ಅನನ್ಯತೆಯ ಪ್ರತೀಕ. ಯೋಗ, ಯಾಗಗಳ ತ್ಯಾಗಭೂಮಿ, ಕಲಾಭೂಮಿಯಗಿರುವ ಭಾರತದ ಭುವಿ-ಬಾನು-ಬೆಟ್ಟದೈಸಿರಿಯಲ್ಲಿ ನೂಪುರದ ಮಯೂರಗಳು ನಲಿಯುತ್ತವೆ. ಜತಿಸ್ವರ ಮೊಳಗುತ್ತದೆ.
• ಕರುನಾಡು ಸಗ್ಗ ಸೀಮೆಯ ಒಡತಿ, ತಾಯಿ ಭಾರತಿಯ ಪ್ರೇಮಸುಪುತ್ರಿ
ಭಾರತೀಯ ಸಂಸ್ಕೃತಿಯ ಸುವಿಶಾಲ ಬಾಂದಳದಲ್ಲಿ ಕರ್ನಾಟಕವು ಹೊಳೆ ಹೊಳೆವ ಧ್ರುವತಾರೆಯಾಗಿದೆ. ಕರುನಾಡಿನ ಕೊಡುಗೆ ಅಪಾರವಾದದ್ದು. ಕರ್ನಾಟಕದ ಇತಿಹಾಸ, ಪರಂಪರೆ, ಹಬ್ಬ-ಹರಿದಿನಗಳ ಆಚರಣೆ ಇವು ದೇಶದ ಮಣಿ ಮುಕುಟಕ್ಕೆ ಕಳಶಪ್ರಾಯವಾಗಿವೆ. ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲಿ ಅನುದಿನ ನಿತ್ಯೋತ್ಸವ ನಡೆಯುತ್ತದೆ. ಸಾಂಸ್ಕೃತಿಕ ನಗರಿ ಮೈಸೂರಿನ ಜಗದ್ವಿಖ್ಯಾತ ದಸರೆಯು ಭಾರತದ ಶ್ರೀಮಂತ ಇತಿಹಾಸದ ದೃಶ್ಯ ಕಲೋತ್ಸವವಾಗಿದೆ. ವರುಷಕ್ಕೊಮ್ಮೆ ಮೈಸೂರಿನ ಸೀಮೆ ದಸರೆಯ ಮಹಾ ವೈಭವಕ್ಕೆ ಸಜ್ಜಾಗುತ್ತದೆ, ಸಾಕ್ಷಿಯಾಗುತ್ತದೆ. ಇಡೀ ವಿಶ್ವದಲ್ಲಿ ಮೈಸೂರಿನ ದಸರೆಯು ವಿಖ್ಯಾತವಾಗಿದೆ. ಕನ್ನಡ ನಾಡಿನ ವೈಭವದ ಪಲಕುಗಳು ತಾಯಿ ಭಾರತಾಂಬೆಯ ಸಂಸ್ಕೃತಿಯ ಸುಗಂಧವನ್ನು ಜಗದಗಲ ಪಸರಿಸುವ ಶ್ರೀಗಂಧದ ವೃಕ್ಷಗಳು.
• ಜ್ಞಾನ-ವಿಜ್ಞಾನ-ತಂತ್ರಜ್ಞಾನಗಳ ಸ್ಪರ್ಶವಿರದೆ ಭಾರತದ ಗರಿಮೆಗೆ ಮೆರುಗು ಬಾರದು
ವಿಜ್ಞಾನ-ತಂತ್ರಜ್ಞಾನದ ಹಲವಾರು ಶಾಖೆಗಳಲ್ಲಿ ಮೇರು ಸಾಧನೆಯನ್ನು ಮಾಡಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ. ಜಗತ್ತಿನ ಮೊಟ್ಟ ಮೊದಲ ವೈದ್ಯಶಾಸ್ತçಜ್ಞರು ಅಶ್ವಿನೀಕುಮಾರರು. ಅಗ್ನಿವೇಶನು ವೈದ್ಯಶಾಸ್ತçದ ಮೊತ್ತ ಮೊದಲ ಶಾಸ್ತಿçÃಯ ಪ್ರತಿಪಾದನೆ ಮಾಡಿ ಚರಕ ಸಂಹಿತೆಯನ್ನು ರಚಿಸಿದ್ದಾನೆ. ಸುಶ್ರುತನು ಶಲ್ಯಚಿಕಿತ್ಸೆಯ ಮೊದಲ ಶಾಸ್ತç ಗ್ರಂಥವನ್ನು ರಚಿಸಿದ್ದಾನೆ. ಅಶ್ವಾಯುರ್ವೇದದ ಮೊದಲ ಪ್ರತಿಪಾದಕ ಸಾಲಿಹೋತ್ರ. ಪಾದರಸದಿಂದ ಬಂಗಾರವನ್ನು ಹೊರತೆಗೆಯುವ ರಸವಿದ್ಯೆ ಹಾಗೂ ಲೋಹಶಾಸ್ತçದ ಆವಿಷ್ಕರ್ತ ನಾಗಾರ್ಜುನ. ಗ್ರಹ, ನಕ್ಷತ್ರ ಸ್ಥಾನಗಳ ಕೋಷ್ಟಕವನ್ನು ಮೊದಲು ರಚಿಸಿದವರು ಭಾರತೀಯರು.
ಸೂರ್ಯ, ಚಂದ್ರ ಗ್ರಹಣಗಳನ್ನು ಶಾಸ್ತç ರೀತ್ಯಾ ಪ್ರತಿಪಾದಿಸಿದವನು ಆರ್ಯಭಟ. ಭೂಮಿಯ ಪರಿಭ್ರಮಣವನ್ನು ಶಾಸ್ತಿçÃಯವಾಗಿ ಪ್ರತಿಪಾದಿಸಿದ ಈತನು ಬೀಜಗಣಿತ ಶಾಸ್ತçದ ಪ್ರವರ್ತಕನಾಗಿದ್ದಾನೆ. ಬ್ರಹ್ಮಗುಪ್ತನು ಗುರುತ್ವಾಕರ್ಷಣ ನಿಯಮವನ್ನು ಹಾಗೂ ದಶಮಾನ ಪದ್ಧತಿಯನ್ನೂ ಪ್ರತಿಪಾದಿಸಿದನು. ಸೊನ್ನೆಯ ಪರಿಕಲ್ಪನೆಯನ್ನು ಗೃತ್ಸಮದನು ನಿರೂಪಿಸಿದನು. ಸೃಷ್ಟಿ ವಿಕಾಸ ತತ್ವವನ್ನು ವೈಜ್ಞಾನಿಕವಾಗಿ ಪ್ರತಿಪಾದಿಸಿದವನು ಸಾಂಖ್ಯದರ್ಶನಕಾರ ಕಪಿಲ.
ಬಾಸ್ಕರಾಚಾರ್ಯ, ವರಾಹಮಿಹಿರ, ಶ್ರೀಧರಾಚಾರ್ಯ, ಶ್ರೀನಿವಾಸ ರಾಮಾನುಜನ್, ಶಕುಂತಲಾ ದೇವಿ……………ಹೀಗೆ ಪಟ್ಟಿ ವಿಸ್ತರಿಸುತ್ತಾ ಹೋಗುತ್ತದೆ.
ವಿಶ್ವ ಪರಿಧಿಯದೆಲ್ಲೊ ಸೂರ್ಯ ಚಂದ್ರರಿನಾಚೆ
ವಿಶ್ವಕೇAದ್ರವು ನೀನೆ ನೀನೆಣಿಸಿದೆಡೆಯೆ
ನಿಃಶ್ವಸಿತ ಸಂಬAಧ ನಿನಗಂ ದಿಗಂತಕA
ಪುಷ್ಪವಾಗಿರು ನೀನು – ಮಂಕುತಿಮ್ಮ
ವಿಶ್ವ ಪರಿಧಿ, ಸೂರ್ಯ, ಚಂದ್ರ, ವಿಶ್ವಕೇಂದ್ರ ಎಲ್ಲವೂ ನಮ್ಮ ಅಂತಃಶಕ್ತಿಯಲ್ಲಿಯೇ ಇವೆ. ದಿಗಂತ ಮತ್ತು ನಮ್ಮ ನಡುವೆ ಉಸಿರಿನ ಏರಿಳಿತದ ಅವಿನಾಭಾವ ಸಂಬAಧವಿದೆ. ಆ ಸಂಬAಧವೇ ವಿಶ್ವದ ಅಂತರಾಳವನ್ನು ಅರಿಯುವ ಅಂತಃಶಕ್ತಿಯನ್ನು ಹಾಗೂ ಪ್ರಸ್ಫುಟಿತ ಚೇತನವನ್ನು ಭಾರತೀಯ ಸಾಧಕರ ಮಸ್ತಕದಲ್ಲಿ ಉದ್ದೀಪನಗೊಳಿಸುತ್ತದೆ.
ಇಸ್ರೋದ ಸಾಧನೆಗಳ ಮೈಲಿಗಲ್ಲುಗಳು ಭಾರತವನ್ನು ವಿಶ್ವದಲ್ಲೇ ಅಗ್ರಮಾನ್ಯವಾಗಿಸಿವೆ. ಮಾನವನು ಕಾಲದೊಡನೆ ಸ್ಪರ್ಧಿಸುತ್ತಾ ಅಂತರಿಕ್ಷವನ್ನು ಜಯಿಸಿದ್ದಾನೆ. ಮಾಜಿ ರಾಷ್ಟçಪತಿಗಳಾದ ಧೀಮಂತ ವಿಜ್ಞಾನಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಮ್ ರವರ ನೇತೃತ್ವದಲ್ಲಿ ಸಾವಿರದ ಸಾಧನೆಗಳು ಇತಿಹಾಸದ ಪುಟಗಳಲ್ಲಿ ಅಚ್ಚಾಗಿವೆ. ಪಿ. ಎಸ್. ಎಲ್. ವಿ. , ಜಿ. ಎಸ್. ಎಲ್. ವಿ., ಉಡ್ಡಯನ ವಾಹನಗಳ ಸಂರಚನೆ, ೧೯೭೫ ರಲ್ಲಿ ಆರ್ಯಭಟದ ಉಡ್ಡಯನ, ೧೯೮೦ ರಲ್ಲಿ ರೋಹಿಣಿ, ೨೦೦೮ ರಲ್ಲಿ ಚಂದ್ರಯಾನ, ೨೦೧೨ ರಲ್ಲಿ ರಿಸ್ಯಾಟ್ ಮತ್ತು ಸರಲ್, ೨೦೧೪ ರಲ್ಲಿ ಮಂಗಳಯಾನ, ಹೀಗೆ ಪಟ್ಟಿ ಮುಂದುವರೆಯುತ್ತದೆ. ಇದೀಗ ಚಂದ್ರಯಾನ -೩ ನ್ನು ಯಶಸ್ವಿಗೊಳಿಸಿ ಚಂದಿರನ ಅಂಗಳದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಕೀರ್ತಿ ಭಾರತೀಯ ವಿಜ್ಞಾನಿಗಳಿಗೆ ಸಲ್ಲುತ್ತದೆ. ಚಂದ್ರನ ಮೇಲ್ಮೆöÊಯಲ್ಲಿ ಭಾರತೀಯ ಸಾಧನೆಯ ಸುವರ್ಣಾಕ್ಷರಗಳನ್ನು ಬರೆದಿದೆ.
ಪರಮಾಣು ಶಕ್ತಿ, ಹಸಿರು ಇಂಧನ, ಗಡಿ ಭದ್ರತೆ, ಮಹಿಳಾ ಸಬಲೀಕರಣ, ಕೌಶಲ್ಯಾಭಿವೃದ್ಧಿ…………..ಹೀಗೆ ಹತ್ತು ಹಲವು ಕ್ಷೇತ್ರಗಳು ಭಾರತೀಯತೆಯ ಹಿರಿಮೆಯನ್ನು ಬಿಂಬಿಸುತ್ತವೆ.
ಭಾರತವೆಂದರೆ ಸಾತ್ವಿಕತೆಯ ನೆಲೆಗಟ್ಟಿನೊಂದಿಗೆ ಅಗಾಧ ಜ್ಞಾನ ಸಂಪತ್ತಿನಿAದ ಮೈದಳೆದು ಬಂದಿಹ ಅಖಂಡ ಜ್ಞಾನಭೂಮಿ. ಸರ್ವ ಕ್ಷೇತ್ರಗಳ ಪ್ರಗತಿಯು ಈ ನೆಲದ ಸಮಗ್ರತೆಯ ಪ್ರತಿಬಿಂಬ.
• ಸರ್ವ ಧರ್ಮ ಸಮನ್ವಯದ ಸಿರಿನಾಡು ಭಾರತ, ಅಭಿವೃದ್ಧಿ ಪಥದಿ ಸಾಗುತಿಹ ಭವ್ಯ ನಾಡು ಭಾರತ
ವಿವಿಧ ಜಾತಿ, ಮತ, ನಂಬಿಕೆಗಳ ಜನರು ಒಟ್ಟಿಗೆ ಬದುಕುವ ವೈವಿಧ್ಯಮಯ ನಾಡು ಇದು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಜಾಗತಿಕವಾಗಿ ಪ್ರಭಾವಶಾಲಿಯಾಗಿ ಮಾರ್ಪಟ್ಟಿರುವ ಭಾರತವು ಅಗಾಧ ಬೆಳವಣಿಗೆ ಹೊಂದುತ್ತಿದೆ. ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಆರ್ಥಿಕತೆ, ಸಾಮಾಜಿಕ ಸ್ಥಿತಿಗತಿ, ಸೇನಾ ಕ್ಷೇತ್ರ, ಗಡಿ ಭದ್ರತೆ……………..ಹೀಗೆ ವ್ಯಾಪಕ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ.
• ಉದಾರೀಕರಣ, ಖಾಸಗೀಕರಣ, ಆರ್ಥಿಕ ಸುಧಾರಣಾ ನೀತಿಗಳು, ಕೈಗಾರಿಕಾ ಪರವಾನಗಿ ನೀತಿ, ಸಡಿಲವಾದ ಎಫ್.ಡಿ.. ಐ. ನೀತಿಗಳು, ಹೆಚ್ಚಿದ ದೇಶೀ ಬಳಕೆ, ಇವು ಅಂತರ ರಾಷ್ಟಿçÃಯ ಹೂಡಿಕೆದಾರರ ಸಕಾರಾತ್ಮಕ ಪ್ರತಿಕ್ರಿಯೆಗಳಿಗೆ ದಾರಿಮಾಡಿಕೊಡುವುದರೊಂದಿಗೆ ಭಾರತದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗಿದೆ. ಭಾರತವು ೮.೨ ಶೇಕಡಾ ಯೋಜಿತ ಬೆಳವಣಿಗೆಯೊಂದಿಗೆ ವಿಶ್ವದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಇದಕ್ಕೆ ಭಾರತದ ಶ್ರೀಮಂತ ಸಂಸ್ಕೃತಿಯೇ ಅಡಿಪಾಯವಾಗಿದೆ.
• ವ್ಯವಸಾಯ ಕ್ಷೇತ್ರದಲ್ಲಿ ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ತಾಂತ್ರಿಕ ಸಂಯೋಜನೆಯಿAದ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಇಂದು ನಾವು ಸ್ವಾವಲಂಬಿಗಳೂ, ಸ್ವಪರಿಪೂರ್ಣರೂ ಆಗಿರುತ್ತೇವೆ ಎಂದರೆ ಅತಿಶಯೋಕ್ತಿ ಆಗಲಾರದು. ನೇಗಿಲ ಯೋಗಿಯನ್ನು ಪೂಜಿಸುವ ನೆಲವಿದು. ಜಗಕೆ ಅನ್ನವನೀವ ಅನ್ನದಾತನ ಬೇರುಗಳಿರುವುದು ಈ ನೆಲದ ಚಿನ್ನದ ಮಣ್ಣಿನಲ್ಲಿ. ಶ್ರಮ ಸಂಸ್ಕೃತಿಯ ನಾಡು ಇದು.
• ವಿಶ್ವಮಾನವ, ವಿಶ್ವ ವಿಜೇತ ಸ್ವಾಮಿ ವಿವೇಕಾನಂದರ ಧರ್ಮೋನ್ನತಿಯ ದಿವ್ಯ ಬೀಡು ಇದು.
ಅಖಂಡ ವಿಶ್ವಕ್ಕೇ ಭಾರತೀಯತೆಯ ಅನುಪಮ ಸಂಸ್ಕಾರ- ಸಂಸ್ಕೃತಿಗಳನ್ನು ಪರಿಚಯಿಸಿದ ವೀರ ಪುತ್ರ ವಿಕೇಕಾನಂದರಿಗೆ ಜನ್ಮವಿತ್ತ ಪಾವನ ನಾಡು ಇದು. ಇಡೀ ಜಗತ್ತೇ ಭಾರತವನ್ನು ತಲೆ ಎತ್ತಿ ನೋಡುವಂತೆ ಮಾಡಿದ ಅವರ ಧೀಶಕ್ತಿಗೆ ಶರಣು ಶರಣು. ಇಂತಹ ಅಸಂಖ್ಯ ಮಹನೀಯರು ಹಾಕಿಕೊಟ್ಟ ಅಗ್ರ ಪಂಕ್ತಿಯ ರಾಜಪಥ ಭರತಭೂಮಿಯಲ್ಲಿದೆ.
ಪಾರಮಾರ್ಥಿಕತೆಯ, ಅಧ್ಯಾತ್ಮಿಕತೆಯ ನೆಲೆಗಟ್ಟಿನೊಂದಿಗೆ ಲೌಕಿಕ ಜಗತ್ತಿನಲ್ಲಿ ದೈನಂದಿನ ವ್ಯವಹಾರಗಳಲ್ಲಿಯೂ ಸಂಸ್ಕಾರದ ಬೀಜವನ್ನು ಬಿತ್ತುವುದು ಈ ನೆಲದ ವಿಶಿಷ್ಟತೆ. ಇದೊಂದು ಆತ್ಮೋದ್ಧಾರದ ತಪೋಭೂಮಿ. ವಿಶ್ವ ಮಾನವ ಪ್ರಯೋಗಶಾಲೆ. ವಿವಿಧ ಸಂಸ್ಕೃತಿಗಳನ್ನು, ಆಚಾರ- ವಿಚಾರಗಳನ್ನು, ಮತ-ಪಂಥಗಳ ಅಂತಃಸತ್ವವನ್ನು ಅರಗಿಸಿಕೊಂಡು ಅಂತಃಪ್ರಜ್ಞೆಯನ್ನು ಅರಳಿಸಿರುವ ಸಮಷ್ಟಿಯ ಹೂಬನ ಇದು.
ದೀನ-ದಲಿತರಿಗೆ ಆಶ್ರಯ ನೀಡಿ ಅತಿಥಿ ಸತ್ಕಾರ ಮಾಡುವ ನೆಲವಿದು. ಬಾಬಾ ಆಮ್ಟೆಯವರು ಕುಷ್ಠ ರೋಗದ ನಿವಾರಣೆಗಾಗಿ ಹಗಲಿರುಳು ಶ್ರಮಿಸಿ ಸಮಾಜದ ಒಳಿತಿಗಾಗಿ, ಶ್ರೇಯಸ್ಸಿಗಾಗಿ ತಮ್ಮನ್ನೇ ಸಮರ್ಪಿಸಿಕೊಂಡ ನೆಲವಿದು. ರಮಣ ಮಹರ್ಷಿ, ಡಾ. ಬಿ. ಆರ್. ಅಂಬೇಡ್ಕರ್, ಆಚಾರ್ಯ ವಿನೋಭಾ ಭಾವೆ, ಮದರ್ ತೆರೆಸಾ, ಮಹರ್ಷಿ ಅರವಿಂದರು………ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸಮಾಜದ ಉದ್ಧಾರಕ್ಕಾಗಿ ದುಡಿದ ಮಹನೀಯರ ಸಂಖ್ಯೆ ಅಪರಿಮಿತ. ಮುನ್ನೂರು ವರ್ಷಗಳ ಕಾಲ ಭಾರತೀಯರ ಮೇಲೆ ದಬ್ಬಾಳಿಕೆ ನಡೆಸಿ, ಗುಲಾಮಗಿರಿಯ ಸಂಕೋಲೆ ಬಿಗಿದು ಅಟ್ಟಹಾಸಗೈದ ಯುರೋಪಿಯನ್ನರ ಕ್ರೌರ್ಯ ಕಡಿಮೆಯೇನಿಲ್ಲ. ಆದರೆ ಅದೇ ನೆಲ ಇಂಗ್ಲೆAಡಿನ ಪ್ರಧಾನಿ ಸ್ಥಾನಕ್ಕೆ ಭಾರತೀಯನೊಬ್ಬ ಆಯ್ಕೆಯಾಗಿ ದೇಶದ ಚುಕ್ಕಾಣಿ ಹಿಡಿದು ಮುನ್ನಡೆಸುತ್ತಾನೆಂದರೆ ಅದಕ್ಕಿಂತ ಹಿರಿದಾದ ಸಂಗತಿ ಮತ್ಯಾವುದಿದೆ?
ಮಹಾಮಾರಿ ಪ್ಲೇಗ್, ಕಾಲರಾ, ಸಿಡುಬುಗಳಿಂದ ಆರಂಭವಾಗಿ ಇಂದಿನ ಕೊರೋನಾದ ವರೆಗೂ ಕಾಡುವ ವೈರಸ್‌ಅನ್ನು ಮಣಿಸಿ, ಸಮರ್ಥವಾಗಿ ಪರಿಸ್ಥಿತಿಯನ್ನು ಎದುರಿಸಿದ ಪರಿ ವಿಶ್ವದಲ್ಲೇ ಮಾದರಿಯಾಗಿದೆ.
• ಹಬ್ಬ ಹರಿದಿನಗಳು, ಉತ್ಸವಗಳು- ಸಂಸ್ಕೃತಿಯ ಮಹಾನದಿಗಳು
ಭಾರತೀಯ ಹಬ್ಬಹರಿದಿನಗಳು ಮೈದಳೆದಿರುವುದು ಪ್ರಕೃತಿಯ ಆರಾಧನೆಗಾಗಿ ಹಾಗೂ ಪ್ರಕೃತಿಯ ಸಂರಕ್ಷಣೆಗಾಗಿ. ಹಬ್ಬಗಳು ನಮ್ಮ ಸಂಸ್ಕೃತಿಯನ್ನು ಅವಿರತವಾಗಿ ಪ್ರವಹಿಸುವಂತೆ ಮಾಡುವ ಹೊನಲುಗಳು. ನೆಲ., ಜಲ, ವಾಯು, ಕಾನನಗಳನ್ನು ಪೂಜಿಸುವ ಸಂಸ್ಕಾರ -ಸಂಪ್ರದಾಯಗಳು ಪರಿಸರ ಸಂರಕ್ಷಣೆಯ ಕೈಂಕರ್ಯಗಳಾಗಿವೆ. ಮಾನವ ಬಾಂಧವ್ಯಗಳ ಬೆಸುಗೆ ಹಾಗೂ ಕೌಟುಂಬಿಕ ಸಾಮರಸ್ಯದ ಮಹೋನ್ನತ ಉದ್ದೇಶವೂ ಈ ಹಬ್ಬಗಳ ಆಚರಣೆಯಲ್ಲಿ ಹುದುಗಿದೆ.
ಬದುಕಿನಲ್ಲಿ ಮಾನವನ ವ್ಯವಹಾರಗಳು ಸ್ವಂತದ ಭೋಗಕ್ಕಾಗಿ ಮಾತ್ರ ಅಲ್ಲ, ಬದಲಿಗೆ ಆತ್ಮವಿಕಾಸಕ್ಕಾಗಿ ಎಂಬುದು ಭಾರತೀಯರ ದೃಷ್ಟಿಕೋನ. ಪತಿ-ಪತ್ನಿ, ತಂದೆ-ಮಗ, ತಾಯಿ-ಮಗ, ಅತ್ತೆ-ಸೊಸೆ, ರಾಜ್ಯ-ರಾಷ್ಟç, ವ್ಯಕ್ತಿ-ಸಮಾಜ…………ಹೀಗೆ ಸಕಲ ಚರಾಚರ ಜೀವ ಜಾಲಗಳ ನಡುವಿನ ಅವಿನಾಭಾವ ಸಂಬAಧದ ಕೊಂಡಿ ಈ ನೆಲದಲ್ಲಿದೆ. ಇವು ಮಾನವನ ಆತ್ಮ ವಿಕಾಸದ ಸೋಪಾನಗಳು. ಭಾರತೀಯ ಸಾಂಸ್ಕೃತಿಕ-ಆಧ್ಯಾತ್ಮಿಕ ಸಚ್ಚರಿತೆ ಭುವನದಲ್ಲಿಯೇ ಅಗ್ರಸ್ಥಾನದಲ್ಲಿದೆ.
ಭಾರತೀಯರು ಜಗತ್ತಿಗೇ ಗುರುವಾಗಿ ನಿಲ್ಲಬಲ್ಲ ಆತ್ಮಶಕ್ತಿಯ ವಾರಸುದಾರರು. ಸಂಕಟಗಳ ಕಾರ್ಗತ್ತಲು ಕವಿದಾಗ ಪರಿಹಾರದ ಹೊಂಬೆಳಕನ್ನು ಉಜ್ಜುಗಿಸಿದ ಭಾರತೀಯ ಸಂತರು, ಮಹರ್ಷಿಗಳು, ಋಷಿ ಮುನಿಗಳ ಜೀವನ ದರ್ಶನವೇ ನಮಗೆ ದಾರಿ ದೀವಿಗೆ.
ಅಸೀಮ ಭಾರತದ ಅನಂತ ಶರಧಿ ವಿಸ್ತಾರದ ಸಂಸ್ಕೃತಿಯ ಆಳ, ಅಗಲ, ವಿಸ್ತಾರಗಳನ್ನು, ಗರಿಮೆಯನ್ನು ಪದಗಳಿಂದ ಬಣ್ಣಿಸಲಾಗದು. ಬಣ್ಣಿಸುವ ಹಾದಿಯಲ್ಲಿ ಲೇಖನಿ ಸೋಲುತ್ತದೆ. ನಾಡು, ನುಡಿ, ಸಾಹಿತ್ಯ, ಕಾವ್ಯ, ಸಂಸ್ಕೃತಿ, ಇತಿಹಾಸ ಆಚರಣೆಗಳು ನಮ್ಮೆದೆಯಾಳದ ಅಭಿಮಾನದಕ್ಕರೆಯ ಸಿರಿವಂತಿಕೆಯ ಪ್ರಜ್ವಲ ಪ್ರಣತಿಗಳು.
ಸುಶಾಂತ ಸುವೃಷ್ಟಿ ಸಂಪದ ಸದ್ಧರ್ಮ ಪೂರಿತ ರಾಮರಾಜ್ಯ
ಸರ್ವಜನ ಹಿತ ಸಮನ್ವಯಕಾರಕ ಸುರಾಜ್ಯ
ಆತ್ಮ ಸಂಯಮ ಆತ್ಮ ರಕ್ಷಣೆ ಆತ್ಮೋದ್ಧಾರದ ಕರ್ಮಭೂಮಿಯಿದು
ಪೂರ್ಣತೆಯ ಸಂಕಲನ ಭಾವೈಕ್ಯತೆಯ ಏಕೀಕರಣದ ದೇವಭೂಮಿಯಿದು
ಪಂಚಭೂತಗಳನ್ನೊಳಗೊAಡ ಪ್ರಕೃತಿಯ ಆರಾಧನೆ, ಹಾಡು-ಹಸೆ-ಚಿತ್ತಾರ, ಭಜನೆಗಳ ಸಂಕೀರ್ತನೆ, ಭಗವನ್ನಾಮ ಸ್ಮರಣೆಗಳ ಸದ್ಧರ್ಮ ಸಂಪದ್ಭರಿತ ಭಾರತ ರಾಮರಾಜ್ಯದ ತೆರದಿ ಬೆಳಗಲಿ, ಬೆಳಗುತ್ತಿರಲಿ. ಸರ್ವ ಹೃದಯಗಳ ಬಾಂಧವ್ಯ ಬೆಸೆದು ಎದೆ ಬಡಿತದಿ, ನಾಡಿ ಮಿಡಿತದಿ ತಾಯಿ ಭಾರತಾಂಬೆಯ ಜಯಕಾರದ ಉದ್ಘೋಷÀ ಮೊಳಗುತ್ತಿರಲಿ. ದೇಶಭಕ್ತಿ, ರಾಷ್ಟçಪ್ರೇಮ, ರಾಷ್ಟç ರಕ್ಷಣೆಯ ದೇದೀಪ್ಯಮಾನ ಪಣತೆ ಪ್ರಜ್ವಲಿಸಲಿ. ಜಗದ ರಂಗಸ್ಥಳದಿ ದಿವ್ಯ ತಪೋಭೂಮಿ ಭಾರತದ ಹಿರಿಮೆ ಜನಜನಿತವಾಗಲಿ. ಯೋಗ ಯಾಗಗಳ ಪುಣ್ಯ ಭೂಮಿ ಭರತಭೂಮಿಯು ಸಮೃದ್ಧಿಯ ಐಸಿರಿಯಿಂದ ಕಂಗೊಳಿಸಲಿ.
ಭಾರತೀಯತೆಯ ಅನನ್ಯತೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ತರ ಕರ್ತವ್ಯವನ್ನು ನಾವೆಲ್ಲ ಸಮರ್ಥವಾಗಿ ನಿಭಾಯಿಸೋಣ. ಸಂಸ್ಕೃತಿಯ ಮಹಾನದಿ ಅವಿರತವಾಗಿ ಪ್ರವಹಿಸುತ್ತಿರಲಿ. ತಾಯಿ ಭಾರತಿಯ ಚರಣಾರವಿಂದಗಳಿಗೆ ಪೊಡಮಡುತ್ತ, ಅಭಿವಂದಿಸುತ್ತ, ನಮ್ಮ ಪೂರ್ವಿಕರು ನಮಗೆ ಬಳುವಳಿಯಾಗಿ ನೀಡಿದ ಸಂಸ್ಕಾರದ ನಿಧಿಯನ್ನು ಚಿರಂತನವಾಗಿಸೋಣ. ಸಂಸ್ಕೃತಿಯ ಉಳಿವಿನ ಮಹಾಕೈಂಕರ್ಯಕ್ಕೆ ಕಂಕಣಬದ್ಧರಾಗೋಣ ಎಂದು ಆಶಿಸುತ್ತ ಹಿಮಕಿರೀಟಿನಿ ಭಾರತಮಾತೆಗೆ ಪ್ರಣಾಮಗಳನ್ನು ಸಲ್ಲಿಸುತ್ತ ಈ ಪ್ರಬಂಧಕ್ಕೆ ಪೂರ್ಣವಿರಾಮವನ್ನು ನೀಡುತ್ತಿದ್ದೇನೆ.

By- ಶ್ರೀಮತಿ ಯಶಸ್ವಿನಿ ಶ್ರೀಧರ ಮೂರ್ತಿ

Leave a Reply

Your email address will not be published. Required fields are marked *