Article

ರಂಗಕಲೆಯ ರಥವಿದು ನಾಟ್ಯಕಲಾ ಸಂಘ

“ಕಲೆಯೆಂಬ ಕುಂಚವದು ಮನಗಳಲಿ ರಂಗ ಚೆಲ್ಲುತಿಹುದು
ರಂಗಗೀತೆಯ ಸೊಬಗದು ತನ್ಮನವನು ರಂಜಿಸುತಿಹುದು
ಸಹಬಾಳ್ವೆಯ ಸಂಯಮವದು ಸಾಧನೆಗೊಂದು ಹಾದಿಯಾಗಿಹುದು
ಓಂಕಾರ ಸ್ವರೂಪನ ಕೃಪೆಯದು ಬಾಳ ಹಸನಾಗಿಸುತಿಹುದು”

ಮನೆ, ಊರು, ತನ್ನವರು ಎಂಬ ಜನ, ಪ್ರಕೃತಿ, ಅಲ್ಲಿಯ ಪರಿಸರ ಎಂದೊಡನೆ ಮನಮಿಡಿಯದ ಹೃದಯಗಳೇ ಕಡಿಮೆ. ಹುಟ್ಟೂರಿನ ಹುಟ್ಟು ಗುಣವದು ತನ್ನ ಮಕ್ಕಳನು ಬಿಗಿದಪ್ಪಿ ಸೆಳೆಯುವುದು. ಅದರಲ್ಲಿಯೂ ಕಲೆಯೆಂಬ ಹಂದರದಡಿ ಬೆಳೆದ ಲತೆಗಳೆಂದರೆ, ಬಿಡಿಸಲಾಗದು ಆ ಬಂಧವನು.

ದೃಶ್ಯ,ಶ್ರವ್ಯ, ಕಾವ್ಯಗಳ ಸಮ್ಮಿಲನವದು ನಾಟಕ. ನವರಸವನ್ನು ನವರೀತಿಯಲ್ಲಿ ನವಿರಾದ ನೂಲಿನಲ್ಲಿ ನೇಯುವುದು ನಾಟಕ. ಭಾವಸಾಗರದಲ್ಲಿ ಮಿಂದೇಳಿಸುವುದು, ನವನಾವಿನ್ಯತೆಯಲೂ ಪ್ರಾಚಿನ್ಯತೆಯನ್ನು ಬಿಂಬಿಸುತಿರುವುದು ನಾಟಕ. ಪದಗಳಲಿ ವರ್ಣಿಸಲಾಗದು ಈ ನಾಟಕದ ಸೊಬಗನು.

ನಾಟ್ಯ ಕಲಾ ಸಂಘವೊಂದಕ್ಕೆ ೬೪ ವರ್ಷಗಳೆಂದರೆ ಕಡಿಮೆಯಲ್ಲವದು, ಹೊಸ ಮುಖಗಳಾದರೂ ಹಿರಿಯರ ಮಾರ್ಗದರ್ಶನದೊಂದಿಗೆ ಇಂದಿಗೂ ಚೈತನ್ಯತೆಯ ಚಿಲುಮೆಯಂತೆ ಚಿಮ್ಮುತಿಹುದು ಈ ಸಂಘಟನೆಯು. ವೇದಿಕೆಯಲಿ ಪಾತ್ರ ನಿರ್ವಹಿಸದ ಊರಿನ ಪ್ರಜೆಯೋರ್ವರೂ ಇಲ್ಲ. ಮಹಾಗಣಪತಿಯ ವರಪ್ರಸಾದವೋ ಎಂಬಂತೆ ಕಲೆಯೆಂಬುದು ಅಂತರ್ಗತವಾಗಿ ಅಚ್ಛಾದಿಸಿದಂತಿದೆ ಈ ಮನಗಳಲಿ. ಪೌರಾಣಿಕತೆಯ ಅಂಬರದಲಿ ಅದೆಷ್ಟೋ ನಾಟಕಗಳ ಕಥಾವಸ್ತುವು ನಕ್ಷತ್ರಗಳಂತೆ ಮಿನುಗುವವು. ಆ ಕಥೆಯನ್ನು ಚಂದದ ಸಂಭಾಷಣೆಯಾಗಿ, ಕರ್ಣಗಳಿಗೆ ಇಂಪೆನಿಸುವ ಸಂಗೀತವಾಗಿ, ಭಾವನೆಯೂ ನಾಚಿ ನೀರಾಗುವಂತೆ ಮಾಡುವ ನವರಸ ತುಂಬಿದ ಭಾವಭರಿತ ಸಂಯೋಜನೆಯಾಗಿಸುವಲ್ಲಿ ದುಡಿದ ಕಾಯಗಳೆಷ್ಟೋ, ಸಂತಸದಿಂದಲೇ ಶ್ರಮಿಸಿದ ಹಿರಿಯ ತಲೆಮಾರುಗಳೆಷ್ಟೋ, ಅವರ ಕಾರ್ಯವು ಇಂದಿಗೂ ಚಿರಂಜೀವಿ, ಚಿರನೂತನ. ಆ ಸಹೃದಯಗಳಿಗೆ ಅನಂತಾನಂತ ಪ್ರಣಾಮಗಳ ಕುರುಹೆಂಬಂತೆ ಅಂದಿನಿಂದ ಇಂದಿನವರೆಗೂ ಸಂವತ್ಸರವೊಂದನೂ ಬಿಡದೇ, ಬಿಡುವಿಲ್ಲದ ಬದುಕ ಬವಣೆಯಲೂ ಬೆನಕನ ಬೆಂಬಲದ ಬುನಾದಿಯಲಿ ಮಾಘ ಶುದ್ಧ ಚೌತಿಯಂದು ಭಾವಸಾಗರ ಬಣ್ಣದೋಕುಳಿಯು ರಂಗೇರುತಿಹುದು ರಂಗಗೀತೆಯ ರಂಗಾವಲಿಯಲಿ. ಅದೆಷ್ಟೋ ದಶಕಗಳ ಹಿಂದೆ ರಚಿಸಿದ ಕರಡು ಪ್ರತಿಗಳನು ಇಂದಿಗೂ ಜೋಪಾನವಾಗಿಸಿರುವರು ಎಂದಾಗ ತಿಳಿಯುವುದು ಒಂದು ರಂಗಕಲೆಯ ಮೇಲಿರುವ ಅಭಿಮಾನವೆಷ್ಟು, ಪ್ರೀತಿಯೆಷ್ಟು, ಗೌರವವೆಷ್ಟೆಂಬುದು.

ಆಡಂಬರವಿಲ್ಲ, ಪ್ರಚಾರದ ಆಸೆಯೊಂದೆನಿತೂ ಇಲ್ಲ. ಹಿರಿಯ ತಲೆಮಾರುಗಳಿಗೆ ಕೊಡುತಿರುವ ಗೌರವದ ಕಾಣಿಕೆಯಿದು. ಊರಬಾಂಧವರು ಸೇರಿ ಜೊತೆಗೂಡಿ ನಡೆಸುವ ಈ ಕಾರ್ಯಕ್ಕೆ ಮಹಾಗಣಪತಿಯೇ ಸಾಕ್ಷಿ. ಆತನೇ ಶ್ರೀರಕ್ಷೆ. ಸಂಕ್ರಾಂತಿಯ ನಂತರದ ದಿನಗಳಲಿ ಪುಟಾಣಿಯಿಂದ ಹಿರಿಯರವೆರಗೂ ಎಲ್ಲರೂ ಉಲ್ಲಾಸದಿಂದ ಕೇಳುವ ಪ್ರಶ್ನೆಯದು “ಈ ಸಲ ಯಾವ ನಾಟ್ಕನಡ? ಯಾರ್ಯಾರ್ ಇದ್ದ?”.ಪೂರ್ವತಯಾರಿಯ ಹಿನ್ನೆಲೆಯಲ್ಲಿ ನೆನಪುಗಳ ಮಹಾಪೂರವನ್ನೇ ಹೊತ್ತೊಯ್ಯುವರು ಕಲೆಗಳಲ್ಲಿ ಕಲೆತಿರುವ ಮನಗಳು. ಪೌರಾಣಿಕ ಪಾತ್ರಕ್ಕೊಂದು ಅಂದದ ಶ್ರುತಿ ಸಂಯೋಜನೆ, ಆ ಪಾತ್ರಕ್ಕೆ ಜೀವ ತುಂಬುವ ಕಲಾವಿದರು! ಮತ್ತೇನು ತಾನೇ ಬೇಕು ನಾಟಕದ ನಟನೆಯು ಮನದಲಿ ಹಚ್ಚಹಸಿರಾಗಲು? ವೇದಿಕೆಯಲ್ಲಿ ಹಿನ್ನೆಲೆ ಗಾಯಕರಿಲ್ಲದೇ ಕಲಾವಿದರೇ ರಂಗಗೀತೆಯನ್ನು ಸ್ವತಃ ಪ್ರಸ್ತಾಪಿಸುವುದು ರೂಢಿ, ಅದನಿನ್ನೂ ಪಾಲಿಸುತಿರುವುದು ಪರಂಪರೆಯ ಮೇಲಿನ ಅಭಿಮಾನ. ಕೊರೆವ ಚಳಿಯಲ್ಲೂ ರಂಗವೇದಿಕೆಯ ಸೊಬಗನ್ನು ಆನಂದಿಸುವರೆಂದರೆ, ನಾಟಕದ ಸೊಗಸದು ಎಂದರೆ ಅತಿಶಯೋಕ್ತಿಯಾಗದು.

ವರ್ಣಿಸಿದಷ್ಟೂ ಮುಗಿಯಲಾಗದ ಅನಂತ ಸಾಗರವಿದು. ಪಾತ್ರ ನಿರ್ವಹಣೆಯೊಂದಿಗೆ ಬದುಕ ಬಣ್ಣಗಳನು ಮನದಲಿ ಬಿಂಬಿಸಿದ, ಭಾವಸಾಗರದಲಿ ಮಿಂದೇಳಿಸಿದ ಹಿರಿಯರಾದಿಯಾಗಿ ಎಲ್ಲಾ ಸಹೃದಯಗಳಿಗೂ ಅನಂತಾನಂತ ಕೃತಜ್ಞತೆಯೊಂದಿಗೆ ಪೂರ್ಣವಿರಾಮವಿಡುತಿಹೆನು.

ಅವರ್ಣನೀಯ ಭಾವನೆಗಳ ಬುತ್ತಿಯದು,
ಅತ್ಯದ್ಭುತ ನೆನಪುಗಳ ಕಡಲದು ಮಹಾಗಣಪತಿ ನಾಟ್ಯಕಲಾ ಸಂಘ, ಮಘೇಗಾರು

By- ಕು.ಸಿಂಧೂರಾ ಹೆಗಡೆ

Leave a Reply

Your email address will not be published. Required fields are marked *