ಮಳೆಗಾಲದ ಮಲೆನಾಡು
ಮಳೆ ಬರುವ ಹಾಗಿದೆ…. ಮನವೀಗ ಕಾದಿದೆ….ಹೌದು ಮಳೆಗಾಲ ಬಂತೆಂದರೆ ಸಾಕು, ಮಲೆನಾಡಿನ ಅದರಲ್ಲೂ ಹಳ್ಳಿಗರ ಮನದಲ್ಲಿ ಇಂಥ ಹಾಡುಗಳು ಸದಾ ಗುನುಗುತ್ತವೆ.ಮಲೆನಾಡಿನ ಮಳೆ, ಸೌಂದರ್ಯದ ಕಳೆ ಎಂಬಂತೆ ಮಳೆಹನಿಗಳು ಭುವಿಗಿಳಿಯುತ್ತವೆ. ಅದು ರೋಮಾಂಚನ ಅನುಭವ ನೀಡುತ್ತದೆ.ಕಪ್ಪಾದ ಮೋಡಗಳು,ತಣ್ಣನೆಯ ಗಾಳಿಯ ಜೊತೆ ಪ್ರಾರಂಭದಲ್ಲಿ ಜಿಟಿ-ಜಿಟಿ ಎಂದು ಆರಂಭವಾದ ಮಳೆ ಧೋ ಎಂದು ಸುರಿಯ ತೊಡಗುತ್ತದೆ.ಈ ಮುಂಗಾರು ಮಳೆಗೆ ನಿಸರ್ಗದ ನಡುವಿನ ಜಲಪಾತಗಳು ಭೋರ್ಗರೆಯುತ್ತವೆ. ಹಳ್ಳಿಕಡೆಯಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತವೆ. ನಗರದ ಜನರೆಲ್ಲಾ ವಿಶ್ವವಿಖ್ಯಾತಿ “ಜೋಗ ಜಲಪಾತ” ನೋಡಲು ಬಂದರೆ ನಮ್ಮ ಹಳ್ಳಿಗರು ಮಳೆಯಲಿ…ಜೊತೆಯಲಿ… ಎಂದು ಉಕ್ಕಿಹರಿಯುವ ಹೊಳೆಗಳನ್ನು ನೋಡಲು ಹೋಗುತ್ತಾರೆ.ಗುಡು ಗುಡಿಸೋ ಗುಡುಗು, ಬೆಳಕು ಚೆಲ್ಲುವ ಮಿಂಚು, ಕೈಗೆ ಸಿಕ್ಕಿದ್ದನ್ನು ಸುಟ್ಟು ಹಾಕುವ ಸಿಡಿಲು, ಪುಸಕ್ಕನೆ ಜಾರೋ ಅಂಗಳ, ಮನೆಯ ತುಂಬಾ ಮಳೆ ಹುಳುಗಳು, ಎಲ್ಲಿ ನೋಡಿದರೂ ಕತ್ತಲು ಕರೆಂಟನ್ನು ನೋಡದೆ ತಿಂಗಳುಗಳ ಕಳೆಯೋ ದಿನಗಳು. ಕತ್ಲು ಆಗೋ ಒಳಗೆ ಊಟ. ಕಡೆಗೆ ಒಂದೇ ದೀಪದ ಹತ್ತಿರ ಕುತ್ಕೊಂಡು ಹಳೆ ಕಥೆ ಮಾತಾಡೋದು. ಇದು ಮಲೆನಾಡಿನ ಮಳೆಗಾಲದ ದಿನಗಳಾಗಿರುತ್ತದೆ.
ಬಿಸಿಲಿನ ಝಳಕ್ಕೆ ಬರಡಾಗಿದ್ದ ಕಾಡುಗಳು, ಮಲೆನಾಡಿನ ಮರ-ಗಿಡಗಳು, ಹೂ-ಬಳ್ಳಿಗಳು ಹಾಗೂ ಸಹ್ಯಾದ್ರಿ ಪಶ್ಚಿಮ ಘಟ್ಟಗಳ ಸಾಲುಗಳು ಮಳೆಯ ಹನಿಗಳು ಇಳೆಗೆ ಇಳೆಯಲಾರಂಭಿಸಿದ ಕೂಡಲೇ ತಮ್ಮ ಸೌಂದರ್ಯವನ್ನು ತೋರ್ಪಡಿಸಿ ಜನರನ್ನು ಆಕರ್ಷಿಸುತ್ತದೆ. ಸೋನೆಮಳೆಯ ಮಣ್ಣಿನ ಘಮವು ಯಾವ ಜೀವಿಯನ್ನು ಬಿಟ್ಟುಕೊಡುವುದಿಲ್ಲ.ಹತ್ತಾರು ಕ್ರಿಮಿಕೀಟಗಳು, ಜೀವ ಜಂತುಗಳು ಜೀವ ತಳೆಯುತ್ತವೆ. ಮತ್ತೆ ವಾತಾವರಣವನ್ನು ಆನಂದಿಸದೆ ಇರುವ ಜೀವಿಯೂ ಇಲ್ಲ.ಕೆರೆಗಳ ಸಮೀಪ ವಟಗುಟ್ಟುವ ಕಪ್ಪೆಗಳು,ಜಿರ್ ಎಂದು ಸಂಜೆ ಸಮಯವನ್ನು ಸೂಚಿಸುವ ಮಳೆ ಜಿರಲೆಗಳ ಸಪ್ಪಳ ಆರಂಭವಾಗುತ್ತದೆ. ಹಾಗೆ ಉಂಬಳಗಳು ಕಾಲೇರತೊಡಗಿ ರಕ್ತ ಹೀರಲು ಪ್ರಾರಂಭಿಸಿ ಬಿಡುತ್ತದೆ.ಪರಿಸರ ತಂಪಾಗಿ ಮೈಯೆಲ್ಲಾ ಬೆಚ್ಚಗೆ ಹಂಬಲಿಸುವ ಸಂದರ್ಭ ಇದಾಗಿದೆ. ಕಂಬಳಿ ಹೊದ್ದು ಮಲಗಿ ಬಿಡಬೇಕು ಎಂಬಂತಹ ವಾತಾವರಣ ಇದಾಗಿರುತ್ತದೆ. ಹಳ್ಳಿ ಮನೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಬೆಂಕಿ ಹಾಕಿ-ಬೆಂಕಿ ಕಾಯಿಸುತ್ತಾ ಅಲ್ಲೇ ಹಲಸಿನ ಬೆಳೆ ಮತ್ತು ಗೇರ್ ಪಿಟಿಗಳನ್ನು ಸುಟ್ಟುಕೊಂಡು ತಿನ್ನುವ ಅಭ್ಯಾಸ ಮಲೆನಾಡಿನ ಮಳೆಗಾಲದಲ್ಲಿ. ಮಳೆಗಾಲಕ್ಕೆ ಎಂದೆ ಒಂದಿಷ್ಟು ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿಟ್ಟುಕೊಂಡಿರುತ್ತಾರೆ. ಒಂದೆಡೆ ಜಡಿ ಮಳೆ ಬೀಳುತ್ತಿರುತ್ತದೆ ಹಾಗೆ ಕುರುಕಲು ತಿಂಡಿಯ ಆಸೆ ಆಗುತ್ತಿರುತ್ತದೆ.ಡಬ್ಬಗಳಲ್ಲಿ ತುಂಬಿಟ್ಟಿದ್ದ ಹಲಸಿನ ಹಪ್ಪಳ ಎಣ್ಣೆಯಲ್ಲಿ ಕರಿದು ತಿಂದರೆ ಅದರ ರುಚಿಯೇ ಬೇರೆ. ಕರಂ ಕುರುಂ ಸದ್ದು ಮಾಡುವ ಹಲಸಿನ ಚಿಪ್ಸ್, ಆರಿದ್ರಾ ಮಳೆ ಹಬ್ಬ ಅದರ ಜೊತೆ ಹಲಸಿನ ಹಣ್ಣಿನ ಕಡುಬು ಆಹಾ ಎಂಥಾ ರುಚಿ. ಹಾಗೆ ಮಳೆಗಾಲಕ್ಕೆಂದೆ ಸಿದ್ಧಪಡಿಸಲಾಗಿದ್ದ ಉಪ್ಪಿನಕಾಯಿ ಒಟ್ಟಾರೆ ಬೆಚ್ಚನೆಯ ಆಹಾರ ಪದಾರ್ಥಗಳು ಮಲೆನಾಡಿನ ಮಳೆಗಾಲದಲ್ಲಿ ಕಾಣಬಹುದು.
ಶಾಲಾ ಮಕ್ಕಳಿಗಂತೂ ಮಳೆಗಾಲ ಬಂತೆಂದರೆ ಎಲ್ಲಿಲ್ಲದ ಖುಷಿ. ಮಳೆ ಹೆಚ್ಚಾದರೆ ಶಾಲೆಗೆ ರಜೆ ಕೊಡುತ್ತಾರೆ ಎಂದು ಮಳೆ ಹೆಚ್ಚಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುವ ಮಕ್ಕಳೆಷ್ಟೋ ಹಾಗೆ ಶಾಲೆಯಿಂದ ಬರುವಾಗ ಕಾಗದ ದೋಣಿಯನ್ನು ಮಾಡಿ ನೀರಿನಲ್ಲಿ ಬಿಡುವುದು ಮಕ್ಕಳಿಗಂತೂ ಬಲು ಸಂತೋಷ ಮತ್ತು ಆ ನೆನಪುಗಳು ಶಾಶ್ವತ. ದಾರಿಯಲ್ಲಿ ನೀರನ್ನು ಆಡುತ್ತಾ, ಜೋರಾದ ಗಾಳಿಗೆ ಕೊಡೆಗಳನ್ನು ಕೊಟ್ಟು ಡಿಶ್ ಮಾಡಿಕೊಂಡು ಅದರ ಕಡ್ಡಿಗಳನ್ನು ಮುರಿದುಕೊಂಡು ಬರುವುದು ಹೀಗೆ ಮಳೆಯ ಜೊತೆ ಕಾಲ ಕಳೆಯುತ್ತಾ ಸಂಜೆ ಆಗುವುದರೊಳಗೆ ಮನೆ ಸೇರುವ ಮಕ್ಕಳು ಒದ್ದೆಯಾಗಿಕೊಂಡು ಬರುತ್ತಾರೆ. ಅಪ್ಪನ ಬೈಗುಳದ ಜೊತೆ ಅಮ್ಮ ಮೈ ಒರೆಸಲು ಟವಲ್ ಹಿಡಿದುಕೊಂಡು ನಿಂತಿರುತ್ತಾಳೆ ಮಲೆನಾಡಿನ ಮಳೆಗಾಲ ಮಕ್ಕಳಿಗಂತೂ ಅದ್ಭುತ ನೆನಪುಗಳನ್ನು ನೀಡುತ್ತದೆ.
ಮಳೆಗಾಲದ ಮಲೆನಾಡಿನಲ್ಲಿ ಕೃಷಿ ಪದ್ಧತಿ:-
ಮಲೆನಾಡಿನ ಕೃಷಿ ಎಂದರೆ ಸಾಕು ತಟ್ಟನೆ ನೆನಪಿಗೆ ಬರುವುದು ಅಡಿಕೆ ಮತ್ತು ಭತ್ತ. ಕಂಬಳಿ ಕೊಪ್ಪೆ ಹೊದ್ದು, ಅಡಿಕೆ ಹಾಳೆ ಟೋಪಿಯನ್ನು ತಲೆಗೇರಿಸಿಕೊಂಡು ಕೃಷಿ ಕಾರ್ಯದಲ್ಲಿ ನಿರತರಾಗುವ ಜನರನ್ನು ಅಪಾರ ಪ್ರಮಾಣದಲ್ಲಿ ಕಾಣುತ್ತೇವೆ. ಮೃಗಶಿರ ನಕ್ಷತ್ರದ ಕಾಲವಾದ್ದರಿಂದ ಗಿಡಮುರಿದು ನೆಟ್ಟರೆ ಬದುಕುತ್ತದೆ ಎಂಬ ಭಾವನೆ ಹಳ್ಳಿಗರಿಗೆ.
ಮಹಿಳೆಯರಂತೂ ಮನೆಯ ಹಿಂದೆ-ಮುಂದಿನ ತೋಟದಲ್ಲಿ ಹೂ- ಗಿಡಗಳನ್ನು ನೆಡುವ ಕೆಲಸದಲ್ಲಿ ನಿರತರಾಗಿಬಿಡುತ್ತಾರೆ. ಹದ ಮಳೆ ಮುಂಗಾರು ಮಳೆ ವಾತಾವರಣ ಸಮಯಕ್ಕೆ ಸರಿಯಾಗಿ ಸೃಷ್ಟಿಯಾಗಿದೆ. ಹದವಾಗಿ ಮಳೆ ಸುರಿದು ಸಾಕಷ್ಟು ಸಮಯ ಬಿಡುವು ತಣ್ಣಗಾಗುತ್ತಿದೆ. ಇದು ರೈತರಿಗೆ ಕೃಷಿ ಕಾರ್ಯ ಕೈಗೊಳ್ಳಲು ಅನುಕೂಲಕರವಾಗಿದೆ. ಆದರೆ ಅತಿಯಾದ ಮಳೆ ಆದರೆ ಅಡಿಕೆಗಳಿಗೆ ಕೊಳೆ ರೋಗ ಬರುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಹದ ಮಳೆ ಸಂದರ್ಭದಲ್ಲಿ ಅಡಿಕೆ ತೋಟಗಳಿಗೆ ಬಯೋಫೈಟ್, ಬೋರ್ಡ ದ್ರಾವಣವನ್ನು ಸಿಂಪಡಿಸಿಕೊಳ್ಳುತ್ತಾರೆ. ಅಡಿಕೆ ಕೊನೆಗೆ ಕೊಟ್ಟೆ ಕಟ್ಟುವ ತರಾ ತುರಿಯಲ್ಲಿ ಬೆಳೆಗಾರರು ಕೆಲಸ ನಡೆಸುತ್ತಾರೆ.ಈಗಾಗಲೇ ತೋಟಕ್ಕೆ ತಂದು ಹಾಕಿದ್ದ ತರಗೆಲೆ, ಕರಡವನ್ನು ಕಾಲುವೆ ಹಂಚು ಸೇರಿದಂತೆ ಮಣ್ಣು ಸವಕಳಿ ಬರದಂತೆ ಎಲ್ಲೆಡೆ ಮುಚ್ಚಲಾಗುತ್ತದೆ. ಅಡಿಕೆ ಸಸಿಗಳಿಗೆ ಗೊಬ್ಬರವನ್ನು ಹಾಕಲಾಗುತ್ತದೆ. ತೋಟಗಳ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಕಾಲುವೆ ಅಂಚಿನ ಹುಲ್ಲುಗಳನ್ನು ತೆಗೆದು ಸ್ವಚ್ಛಗೊಳಿಸಲಾಗುತ್ತದೆ. ಹಾಗೆ ಗದ್ದೆ ಕೆಲಸ ಕೂಡ ಆರಂಭವಾಗುತ್ತದೆ. ಅರೆ ಮಲೆನಾಡು ಭಾಗದಲ್ಲಿ ಭತ್ತ ಬಿತ್ತನೆಯ ಕಾರ್ಯ ಗರಿಗೆದರುತ್ತದೆ. ಭತ್ತದ ಸಸಿಗಳನ್ನು (ಅಗೆ) ನೆಡುತ್ತಾರೆ. ನೆಟ್ಟಿ ಮಾಡಿರುವ ಗದ್ದೆಗಳನ್ನು ನೋಡುವುದೇ ಚೆಂದ. ಇವೆಲ್ಲ ಮಲೆನಾಡಿನ ಮಳೆಗಾಲದಲ್ಲಿ ಕಾಣಸಿಗುತ್ತದೆ. ಒಟ್ಟಾರೆ ಮುಂಗಾರು ಮಳೆ ಮಲೆನಾಡಿನ ಕೃಷಿ ಚಟುವಟಿಕೆಯಲ್ಲಿ ಉಲ್ಲಾಸದ ವಾತಾವರಣ ಸೃಷ್ಟಿಸುತ್ತದೆ. ಆದರೆ ಮಳೆ ಹೆಚ್ಚಾದರೆ ಕೃಷಿಗೆ ಮತ್ತು ಕೃಷಿಕರಿಗೆ ತುಂಬಾ ತೊಂದರೆಯಾಗುತ್ತದೆ. ಪ್ರವಾಹಗಳು ಉಂಟಾಗುತ್ತವೆ. ಮಲೆನಾಡಿನ ಮಳೆಗಾಲ ಎಷ್ಟು ಸಂತೋಷ ನೀಡುವುದೋ ಅಷ್ಟೇ ತೊಂದರೆಗಳಿರುತ್ತವೆ.
ಯಾವುದೇ ತೊಂದರೆಗಳಾಗದೆ ಒಳ್ಳೆಯ ಬೆಳೆ ಬರಲಿ ಎಲ್ಲ ಜನರು ಸುಖ ಸಂತೋಷದಿಂದಿರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ಇಷ್ಟೆಲ್ಲಾ ಸವಿ ನೆನಪುಗಳನ್ನು ಹೊತ್ತು ತಂದ ಈ ಮಳೆಗಾಲಕ್ಕೆ ನನ್ನ ನೂರೊಂದು ಥ್ಯಾಂಕ್ಸ್.
✍By- ಪೂರ್ಣಿಮಾ ಹೆಗಡೆ