ಮಕ್ಕಳಿಗೆ ರಾಷ್ಟ್ರ ಪ್ರೇಮದ ಅಗತ್ಯ
‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸೆ’ ಎಂಬ ಸಂಸ್ಕೃತ ಉಕ್ತಿಯಂತೆ ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕೆ ಸಮಾನವಾದದ್ದು. ಹೆತ್ತ ತಾಯಿಯನ್ನು ಸಂರಕ್ಷಿಸುವುದು ಹೇಗೆ ಪ್ರತಿಯೊಬ್ಬನ ಕರ್ತವ್ಯವೊ ಹಾಗೆಯೇ ಹೊತ್ತ ನಾಡನ್ನು ರಕ್ಷಿಸುವುದು ಕೂಡ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ.ಇದನ್ನು ಮಕ್ಕಳಿರುವಾಗಲೇ ಅರಿತುಕೊಂಡರೆ ನಮ್ಮ ರಾಷ್ಟ್ರದ ರಕ್ಷಣೆ, ಅಭಿವೃದ್ಧಿ ಸಾಧ್ಯವಾಗುತ್ತದೆ.
ಸ್ವಾತಂತ್ರ್ಯಾ ನಂತರದ ಬೆಳವಣಿಗೆ ಗಮನಿಸಿದಾಗ ರಾಷ್ಟ್ರೀಯ ಭಾವೈಕ್ಯತೆ ಎನ್ನುವುದು ದೂರವಾಗುತ್ತಿರುವಂತೆ ಗೋಚರಿಸುತ್ತದೆ. ಇತ್ತೀಚಿನ ಕೆಲವು ವರುಷಗಳ ಸಂಗತಿಗಳನ್ನು ಗಮನಿಸಿದಾಗ ನಿಜವಾಗಿಯೂ ಭಾರತದ ಭವಿಷ್ಯದ ಬಗೆಗೆ ನಿರಾಶೆಯ ಛಾಯೆ ಮೂಡುತ್ತದೆ. ಪ್ರತಿನಿತ್ಯ ವೃತ್ತ ಪತ್ರಿಕೆಗಳನ್ನು ಅವಲೊಕಿಸಿದರೆ ಆಘಾತಕಾರಿ ಸುದ್ದಿಗಳೇ ಇರುವ ಪರಿಸ್ಥಿತಿ ಪ್ರಾರಂಭವಾಗಿದೆ. ಪ್ರಾಂತೀಯತೆ, ಕೋಮುವಾದ, ಜಾತಿಯತೆ, ಭಾಷಾವಾದ, ಭಯೊತ್ಪಾದನೆ ಇಂತಹ ಹಲವು ಘಟನೆಗಳು ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ಉಂಟುಮಾಡುತ್ತಿದೆ ಮತ್ತು ದೇಶದ ಕೆಲವೇ ಜನರಿಗೆ ತೀವ್ರ ಆಘಾತ ಉಂಟುಮಾಡುತ್ತಿದೆ. ಇತ್ತೀಚಿಗಷ್ಟೆ ನಡೆದ ‘ಅಮ್ನೆಸ್ಟಿ’ ಸಂಸ್ಥೆಯ ದೇಶದ್ರೋಹಿ ಕೂಗುಗಳು ಇಂತಹ ಸಂಗತಿಗಳನ್ನೆಲ್ಲ ಗಮನಿಸಿದಾಗ ತುಂಬಾ ವಿಷಾದವೆನಿಸುತ್ತದೆ.
‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂಬ ಮಾತಿನಂತೆ ಇಂದಿನ ಮಕ್ಕಳಿಗೆ ರಾಷ್ಟ್ರ ಪ್ರೇಮದ ಅರಿವು ಅಗತ್ಯವಾಗಿದೆ. ಏಕೆಂದರೆ ಮೇಲೆ ಹೇಳಿದಂತೆ ನಡೆಯುತ್ತಿರುವ ರಾಷ್ಟ್ರ ವಿರೋಧಿ ಚಟುವಟಿಕೆಗಳು ಮಕ್ಕಳ ಮನಸ್ಸಿನ ಮೇಲೆ ಕೂಡ ರಾಷ್ಟ್ರ ವಿರೋಧಿ ಭಾವನೆ ಉಂಟಾಗಲು ಪ್ರೇರೆಪಿಸುತ್ತದೆ. ಇದರಿಂದ ಸ್ವಾರ್ಥ ಮನೋಭಾವನೆ ಉಂಟಾಗುತ್ತದೆ. ಇಂತಹ ಕಾರಣದಿಂದ ಭಯೊತ್ಪಾದನಾ ಸಂಘಟನೆಗಳನ್ನು ಆರಂಭಿಸಿ ಅಥವಾ ಸಂಘಟನೆಗಳೊಂದಿಗೆ ಸೇರಿ ತಮ್ಮ ಉದ್ದೇಶವೊಂದನ್ನು ಸಾಧಿಸಿಕೊಳ್ಳಲು ಅಹಿಂಸಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಕ್ರಮಗಳಿಗೆ ವಿರುದ್ಧವಾಗಿ ಹಾನಿಕಾರಕ ವಿಧಾನಗಳನ್ನು ಬಳಸಿ ಜನರ ಮನಸ್ಸಿನಲ್ಲಿ ಭಯವನ್ನು ಹುಟ್ಟಿಸುವುದರ ಮೂಲಕ ದೇಶವಿರೋಧಿ ಚಟುವಟಿಕೆಗಳನ್ನು ಆರಂಭಿಸುತ್ತಾರೆ.
ವಿಶಾಲವಾದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ಸತ್ಯ, ಅಹಿಂಸೆ, ತ್ಯಾಗ, ತಾಳ್ಮೆ, ಪರಧರ್ಮ ಸಹಿಷ್ಣುತೆ ಮುಂತಾದವು ನಮ್ಮ ಸಂಸ್ಕೃತಿಯ ಪರಮ ತತ್ವಗಳಾಗಿವೆ. ಹಲವಾರು ಕವಿಗಳು, ಪಂಡಿತರು, ವಿಧ್ವಾಂಸರು, ಸಮಾಜ ಸುಧಾರಕರ ಬೀಡು ಭಾರತ. ಇಂತಹ ರಾಷ್ಟ್ರದ ಸಮಗ್ರತೆ ಕಾಪಾಡಬೇಕಾದರೆ ಪ್ರತಿ ಮಕ್ಕಳು ಕೂಡ ನಿಸ್ವಾರ್ಥತೆಯಿಂದ ದೇಶ ಪ್ರೇಮವನ್ನು ಬೆಳೆಸಿಕೊಂಡು ದೇಶವನ್ನು ರಕ್ಷಿಸಬೇಕು.
ಉಕ್ಕಿನ ಮನುಷ್ಯರೆಂದೇ ಹೆಸರಾದ ಸರದಾರ ವಲ್ಲಭಭಾಯಿ ಪಟೇಲರು ದೇಶದ ಐಕ್ಯತೆಗೆ ನೀಡಿದ ಕಾಣಿಕೆ ಅಮೂಲ್ಯವಾದುದು. ಸ್ವಾತಂತ್ರ್ಯಾನಂತರ ಭಾರತದ ನೂರಾರು ಸಂಸ್ಥೆಗಳನ್ನು ಒಂದುಗೂಡಿಸಿ ಸಮಗ್ರ ಭಾರತಕ್ಕೆ ಅವಕಾಶ ಮಾಡಿಕೊಟ್ಟರು. ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸಲು ಇರುವ ಹಲವಾರು ಸಂಗತಿಗಳು ನಮ್ಮ ದೇಶದಲ್ಲಿವೆ. ಮಕ್ಕಳು ಇದನ್ನು ಅರಿತು ರಾಷ್ಟ್ರ ಪ್ರೇಮ ಬೆಳೆಸಿಕೊಂಡು ಮುಂದಾದಾಗ ಮಾತ್ರ ಆರ್ಥಿಕ, ಸಾಂಸ್ಕ್ರತಿಕ, ಸಾಮಾಜಿಕ ಮತ್ತು ಶೈಕ್ಷಣಿಕ ರಂಗಗಳಲ್ಲಿ ಏಕತೆಯೊಂದಿಗೆ ಅಭಿವೃದ್ಧಿ ಸಾಧಿಸಲು ಸಾದ್ಯ.ರಾಷ್ಟ್ರಿಯ ಭಾವೈಕ್ಯತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯರ ಪ್ರಥಮ ಕರ್ತವ್ಯವಾಗಬೇಕು. ದೇಶಾಭಿಮಾನ ಸರ್ವರ ಹೃದಯದಲ್ಲಿ ಮೂಡಿಬರಬೇಕು. ದೇಶಕ್ಕಾಗಿ ಅದೆಷ್ಟೋ ಜನರು ತಮ್ಮ ಜೀವವನ್ನೇ ಕೊಟ್ಟವರಿದ್ದಾರೆ, ಎಷ್ಟೋ ಜನರು ದೇಶಕ್ಕಾಗಿ ತಮ್ಮ ಜೀವವನ್ನು ಮುಡಿಪಾಗಿಟ್ಟಿದ್ದಾರೆ, ನಿಸ್ವಾರ್ಥ ಮನೋಭಾವದಿಂದ ದೇಶಕ್ಕಾಗಿ ಹೋರಾಡುತ್ತಿದ್ದಾರೆ, ಅವರಂತೆ ಎಲ್ಲ ಮಕ್ಕಳು ಹಾಗೂ ಉಳಿದವರು ಆಗಬೇಕು. ಭಾರತದ ನಿವಾಸಿಗಳೆಲ್ಲರೂ ದೇಶವನ್ನು ತಾಯ್ನಾಡು ಎಂದು ನೆನಪಿಟ್ಟು ದೇಶದ ಶಾಂತಿಗಾಗಿ ಮತ್ತು ಏಳ್ಗೆಗಾಗಿ ಪರಿಶ್ರಮ ಪಡಬೇಕು.
One Comment
Jagan
Awesome and Patriotic Post