Article

ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ಧತಿಯ ಅನಿವಾರ್ಯತೆ

ಕಲ್ಪನಾತೀತ
ಇವರ ಸಂಯೋಜನೆಯಲ್ಲಿ
“ಸಾಹಿತ್ಯ ರಚನೆಕಾರರಿಗೆ ಮನ್ನಣೆ 2024”
“ಭವಿಷ್ಯಕ್ಕೆ ಭಾರತೀಯ ಶಿಕ್ಷಣ ಪದ್ಧತಿಯ ಅನಿವಾರ್ಯತೆ”
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಂದ ಪ್ರಬಂಧ

ಪೀಠಿಕೆ:

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ
ಚಕ್ಷುರುನ್ಮೀಲಿತಮ್ ಯೇನ ತಸ್ಮೈ ಶ್ರೀ ಗುರವೇ ನಮಃ

ಭಾರತೀಯತೆಯ ಸನಾತನ ಸಂಪ್ರದಾಯದಲ್ಲಿ ಗುರುವಿಗೆ ಅಗ್ರ ಸ್ಥಾನವನ್ನು ಮೀಸಲಿಡಲಾಗಿದೆ. ಗುರುವೆಂದರೆ ಸನ್ಮಾರ್ಗದ ಹೊಂಬೆಳಕಿನಲ್ಲಿ ಮುನ್ನಡೆಸುವವನು. ಭವಸಾಗರದಿಂದ ಮೇಲೆತ್ತಿ ಮುಕ್ತಿಮಾರ್ಗವನ್ನು ತೋರುವವನು. ತಾಮಸ ಗುಣಗಳಿಂದ ನಮ್ಮನ್ನು ಮುಕ್ತಗೊಳಿಸಿ ಸಾತ್ವಿಕ ತೇಜಸ್ಸನ್ನು ಧಾರೆ ಎರೆವವನು. ಬದುಕಿನ ಹಾದಿಗೆ ದಿಕ್ಸೂಚಿಯನಿರಿಸಿ ಸುಪಥದಲ್ಲಿ ಕರೆದೊಯ್ಯುವವನು.

ಭರತಭೂಮಿಯಿದು ಯೋಗ ಯಾಗಗಳ ಪುಣ್ಯಭೂಮಿ
ಮುಕ್ತಿಮಾರ್ಗಕೆ ಪ್ರಖರೋಜ್ವಲ ಪ್ರಣತಿಯಿರಿಸುವ ದಿವ್ಯಭೂಮಿ
ಬದುಕಿನರ್ಥವ ಅರುಹಿ ಯುಗ ಯುಗಕು ನವ ಮನ್ವಂತರಕು
ನವ ಭಾಷ್ಯ ಬರೆದು ಬಾಳ ಸೂತ್ರವ ಕಲಿಸಿ
ಜೀವನ ಯಾನಕೆ ಸಂಸ್ಕಾರ ಸಂಪದದ ದಿಕ್ಸೂಚಿಯನಿರಿಸಿ
ಸುಖ ಸಮೃದ್ಧಿಗೆ ಹೊಂಗಿರಣಗಳ ಧಾರೆ ಎರೆದು
ಸತ್ವ ತೇಜದ ಭವ್ಯಪ್ರಭೆಯ ಹೊಮ್ಮಿಸಿ
ಮಾನವ ಧರ್ಮದ ಅಂತ:ಕರಣದ ಹೊಳಪನು ಬೀರಿ
ಮನುಜನನು ದೇವಮಾನವನಾಗಿಸುವ ಜ್ಞಾನದೇಗುಲ

ಭಾರತೀಯ ಶಿಕ್ಷಣ ಪದ್ಧತಿಯ ಮೂಲ ಆಶಯವೆಂದರೆ ಗುರುವಿನಂಘ್ರಿಗೆ ಶಿರಬಾಗಿ ಮಣಿದು, ಶರಣಾಗತಿಯೊಂದಿಗೆ ಸುಜ್ಞಾನದ ಸಂಪತ್ತನ್ನು ಸಂಪಾದಿಸುವುದು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬದುಕಿನ ಆದ್ಯತೆಗಳು ಸಹ ಬದಲಾಗುತ್ತಿವೆ. ಜಾಗತೀಕರಣ, ಆಧುನೀಕರಣಗಳ ಮಹಾ ಪ್ರವಾಹದಲ್ಲಿ ಭಾರತೀಯತೆಯ ಅಸ್ಮಿತೆಯನ್ನು ಕಾಪಿಟ್ಟುಕೊಂಡು ಸಜ್ಜನರಾಗಿ ಬಾಳ್ವೆ ಮಾಡುವುದು ಒಂದು ದೊಡ್ಡ ಸವಾಲಾಗಿದೆ. ಬದುಕಿನ ರೀತಿ ನೀತಿಗಳು, ಜೀವನ ಶೈಲಿ, ಆಹಾರ-ಆಚಾರ-ವಿಚಾರಗಳು ಬದಲಾಗುತ್ತಿರುವ ಪರ್ವಕಾಲದಲ್ಲಿ ನಮ್ಮತನವನ್ನು ಕಳೆದುಕೊಳ್ಳದೆ ಮೌಲ್ಯಯುತ ಜೀವನವನ್ನು ನಡೆಸುವ ಹಾದಿಯಲ್ಲಿ ಭಾರತೀಯ ಶಿಕ್ಷಣ ಪದ್ಧತಿ ಅತ್ಯವಶ್ಯವಾಗಿದೆ.
ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ, ಕ್ರೌರ್ಯಗಳು ಮನುಕುಲವನ್ನು ವಿನಾಶದ ಹಾದಿಯಲ್ಲಿ ಕೊಂಡೊಯ್ಯುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ. ಸಮಾಜವೊಂದು ಅಧಃಪತನದ ಹಾದಿಯಲ್ಲಿ ಸಾಗುವ ಮುನ್ನ ಸುಸಂಸ್ಕೃತ ಶಿಕ್ಷಣದ ಹೊಸ ಅಲೆ ಸೃಷ್ಟಿಯಾಗಬೇಕಾಗಿದೆ.
ಅರಿಷಡ್ವರ್ಗಗಳ ತೀವ್ರತರವಾದ ಪ್ರಲೋಭನೆಯಿಂದ ಸಮಾಜವೊಂದು ವಿನಾಶದ ಅಂಚಿಗೆ ಸರಿವ ಮುನ್ನ ಸನ್ಮತಿಯ ಶಿಕ್ಷಣ ಭಾರತೀಯರನ್ನು ಕ್ಷಾತ್ರ ತೇಜದೊಂದಿಗೆ ಪ್ರಕಾಶಿಸುವಂತೆ ಮಾಡಲಿ ಎಂಬ ಆಶಯದೊಂದಿಗೆ ನಾವೀಗ ಭಾರತೀಯ ಶಿಕ್ಷಣ ಪದ್ಧತಿಯ ಸ್ವರೂಪ ಮತ್ತು ಅದರ ಅವಶ್ಯಕತೆಯನ್ನು ಕುರಿತು ಅವಲೋಕಿಸೋಣ.

ವಿಷಯ ವಿಸ್ತಾರ:

ಜ್ಞಾನ ವಿಜ್ಞಾನ ತಂತ್ರಜ್ಞಾನದ ನಾಗಾಲೋಟದಲಿ
ಬದುಕಿಂದು ಶರವೇಗದಲಿ ದಾಂಗುಡಿಯಿಡುತಿದೆ
ಆಗಸಕೆ ಏಣಿಯಿರಿಸಿ ನಕ್ಷತ್ರ ಲೋಕದಿ
ಸಾಧನೆಯ ಪತಾಕೆಯ ಆರೋಹಿಸಿದೆ
ನಡುವೆಯೆಲ್ಲೋ ಸಂಸ್ಕಾರದ ಚುಕ್ಕಿ ತಪ್ಪಿದ ಎಳೆಯೊಂದು
ದಿಕ್ಕುಗಾಣದೆ ಪರಿತಪಿಸುತಿದೆ
ಸಾತ್ವಿಕ ಜೀವನದ ರಂಗೋಲಿ ಅಸ್ತವ್ಯಸ್ತವಾಗಿದೆ

ನಾವಿಂದು ಅಸೀಮ ಆಗಸಕ್ಕೆ ಲಗ್ಗೆಯಿಟ್ಟಿದ್ದೇವೆ. ಚಂದಿರನ ಅಂಗಳದಲ್ಲಿ ವಿಹರಿಸಿದ್ದೇವೆ. ವಿಶ್ವವನ್ನೇ ಗೆದ್ದೆವೆಂಬ ಸಣ್ಣ ಹಮ್ಮಿನೊಂದಿಗೆ ಬೀಗುತ್ತಿದ್ದೇವೆ. ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದಾಗಿ ಮಿತಿ ಮೀರಿದ ದುರಾಸೆಯ ಕೆನ್ನಾಲಿಗೆಯೂ ಬೃಹದಾಕಾರವಾಗಿ ಎದ್ದು ನಿಂತು ನಮ್ಮನ್ನು ಆಹುತಿ ತೆಗೆದುಕೊಳ್ಳಲು ಸಜ್ಜಾಗಿದೆ. ನಮಗರಿವಿಲ್ಲದೆಯೇ ನಾವಿಂದು ಪಾತಾಳಕ್ಕೆ ಕುಸಿಯುತ್ತಿದ್ದೇವೆ. ಆಧುನೀಕರಣದ ಹುಚ್ಚು ಸುಳಿಯೊಂದು ಯುವ ಪೀಳಿಗೆಯನ್ನು ತನ್ನೊಡಲಲ್ಲಿ ಮುಳುಗಿಸುತ್ತಿದೆ. ಜ್ಞಾನದ ಹಸಿವು ನಶಿಸುತ್ತಿದೆ. ಕಾಂಚನ ಮೃಗದ ಬೆನ್ನಟ್ಟಿದ ಜಗವು ನೈತಿಕ ಮೌಲ್ಯಗಳನ್ನು ಗಾಳಿಗೆ ತೂರುತ್ತಿದೆ. ವಿನಾಶದ ಚಂಡಮಾರುತ ಎಲ್ಲವನ್ನೂ ಆಹುತಿ ತೆಗೆದುಕೊಳ್ಳುವ ಮುನ್ನ ನವ ಸಮಾಜದ ನಿರ್ಮಾಣಕ್ಕಾಗಿ ಕಂಕಣ ತೊಡುವ ಸಮಯ ಸನ್ನಿಹಿತವಾಗಿದೆ.
ಇಂದು ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳು ಹತ್ತು ಹಲವಾರು. ಈ ಸಮಸ್ಯೆಗಳತ್ತ ಒಮ್ಮೆ ದೃಷ್ಟಿ ಹಾಯಿಸಿದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ವಿದೇಶೀ ಸಂಸ್ಕೃತಿಯ ಅನುಕರಣೆ, ಶಿಥಿಲವಾಗುತ್ತಿರುವ ಬಾಂಧವ್ಯದ ಎಳೆಗಳು, ಬರಿದಾಗುತ್ತಿರುವ ಹಳ್ಳಿಗಳು, ಒಡೆದು ಚೂರಾಗುತ್ತಿರುವ ಕುಟುಂಬಗಳು, ಹೆಚ್ಚುತ್ತಿರುವ ಕೊಲೆ, ಸುಲಿಗೆ, ಅತ್ಯಾಚಾರ ಅನಾಚಾರಗಳು, ಮಿತಿ ಮೀರಿದ ದುರಾಸೆ, ಸ್ವಾರ್ಥ ಮನೋಭಾವ, ದ್ವೇಷ-ಅಸೂಯೆಗಳ ದಾವಾಗ್ನಿ, ಕಳೆಗುಂದುತ್ತಿರುವ ಕೃಷಿ, ಗೋ ಹತ್ಯೆ, ಮಾದಕ ವ್ಯಸನಗಳು, ವಿವಾಹ ವಿಚ್ಛೇದನ……………ಹೀಗೆ ಮುಂದುವರೆಯುತ್ತದೆ. ಇವುಗಳೆಲ್ಲ ಇದೇ ರೀತಿ ಮುಂದುವರೆದರೆ ಸಮಾಜದ ಅವನತಿ ನಿಶ್ಚಿತ. ಈ ಸಮಸ್ಯೆಗಳಿಗೆ ಉತ್ತರಗಳನ್ನು ಹುಡುಕಿಕೊಂಡು ಬಹು ದೂರ ಹೋಗಬೇಕಾಗಿಲ್ಲ!
ಮಜ್ಜಿಗೆಯೊಳಗಣ ನವನೀತದಂತೆ ನಮ್ಮನ್ನು ಕಾಡುತಿಹ ಸಮಸ್ಯೆಗೆ ನಮ್ಮಂತರಾಳದಲ್ಲಿಯೇ ಉತ್ತರವಿದೆ. ನಮ್ಮೊಳಗೆ ಉದ್ಭವವಾದ ಪ್ರಶ್ನೆಗಳಿಗೆ ನಮ್ಮೊಳಗೇ ಉತ್ತರವಿದೆ. ಸಮಾಜವನ್ನು ಉದ್ಧರಿಸುವ ಕೀಲಿಕೈ ನಮ್ಮ ಮಸ್ತಕದ ಜೇಬಿನೊಳಗೇ ಇದೆ. ಸರ್ವ ಸಮಸ್ಯೆಗಳಿಗೆ ಪರಿಹಾರವೆಂದರೆ ಅದು ಭಾರತೀಯ ಶಿಕ್ಷಣ ಪದ್ಧತಿ. ಜೀವನ ರಂಗೋಲಿ ಅಸ್ತವ್ಯಸ್ತಗೊಂಡು ಅರ್ಥಹೀನವಾಗುವ ಮುನ್ನ ಎಚ್ಚೆತ್ತುಕೊಂಡು ನಮ್ಮೊಳಗಣ ದನಿಗೆ ಕಿವಿಯಾಗಬೇಕಿದೆ.
ಭಾರತೀಯ ಶಿಕ್ಷಣ ಪದ್ಧತಿಯೆಂದರೆ ಅದು ಬರಿಯ ಭೌತಿಕ ಶಿಕ್ಷಣವಲ್ಲ. ಹಣ ಗಳಿಕೆಯ ಮಾರ್ಗವೂ ಅಲ್ಲ. ಸನಾತನ ಸಂಸ್ಕೃತಿಯ ತಾಯಿ ಬೇರಿನ ಸೂಕ್ಷ್ಮ ತಂತುಗಳಿಂದ ಹರಳುಗಟ್ಟಿದ ರಸಪಾಕವದು. ಋಷಿ ಮುನಿಗಳ ತಪೋನಿಧಿಯಿಂದ ಸೃಷ್ಟಿಸಲ್ಪಟ್ಟ ಶ್ರೇಷ್ಟತಮ ಜೀವನ ವಿಧಾನದ ಚೌಕಟ್ಟು ಅದು. ಭಾರತೀಯ ಶಿಕ್ಷಣ ಪದ್ಧತಿಯೆಂದರೆ ಏನೆಂದು ತಿಳಿಯುವ ಮುನ್ನ ಸನಾತನತೆಯ ಕುರಿತು ಅರಿಯುವುದು ಬಹುಮುಖ್ಯವಾಗಿದೆ.
• ಶ್ರೀಮಂತ ಸನಾತನ ಧರ್ಮದ ನೆಲೆವೀಡು ಭಾರತ
ಭಾರತೀಯ ಇತಿಹಾಸದ ಪುಟಗಳನ್ನು ತಿರುವಿದಾಗ ಒಂದಷ್ಟು ಅಂಶಗಳು ನಮಗೆ ಗೋಚರಿಸುತ್ತವೆ. ಶತಶತಮಾನಗಳುದ್ದಕ್ಕೂ ಪರಕೀಯರ ದಬ್ಬಾಳಿಕೆ, ಆಂತರಿಕ ಒಳಜಗಳ, ಆಧುನಿಕತೆಯ ಭರಾಟೆ, ರಾಜಕೀಯ ಅಸ್ತವ್ಯಸ್ತತೆಗಳ ನಡುವೆಯೂ ಭಾರತ ಇಂದಿಗೂ ಒಂದಷ್ಟು ಮೌಲ್ಯಗಳನ್ನು ಉಳಿಸಿಕೊಂಡು ಬಂದಿದೆ ಎಂದರೆ ತಪ್ಪಾಗಲಾರದು. ಇವುಗಳ ಹಿಂದಿನ ಚಾಲಕ ಶಕ್ತಿಗಳೆಂದರೆ ಗ್ರಾಮಗಳು. ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕುರಿತು ಪ್ರತಿಪಾದಿಸಿದ್ದರು. ಬಾರತೀಯರ ಮೂಲ ಬೇರುಗಳು ಉದ್ಭವಿಸಿರುವುದು ಹಳ್ಳಿಗಳಲ್ಲಿ.
ಸರಳ ಜೀವನ, ಸಾತ್ವಿಕ ಆಹಾರ, ಸ್ವಾವಲಂಬನೆ, ಶಾಂತಚಿತ್ತತೆ, ಸಹಕಾರ ಮನೋಭಾವ, ಶ್ರಮ ಸಂಸ್ಕೃತಿ, ಸಾಮಾಜಿಕ ಮೌಲ್ಯಗಳು ಹಳ್ಳಿಗಳ ತಾಯಿ ಬೇರಿನ ತಂತುಗಳು. ದಿನವಿಡೀ ಹೊಲ, ಗದ್ದೆ, ತೋಟಗಳಲ್ಲಿ ಬಿಸಿಲು-ಮಳೆ-ಚಳಿಯೆನ್ನದೆ ಬೆವರು ಬಸಿದು ದುಡಿಯುವ ದೇಹ ಮತ್ತು ಮನಸ್ಸುಗಳು ಸಂಜೆಯ ಸಮಯದಲ್ಲಿ ಕಥಾ ಕಾಲಕ್ಷೇಪ, ಭಜನೆಗಳ ಮೂಲಕ ಚೇತೋಹಾರಿಯಾಗುತ್ತಿದ್ದವು.
ಕೊಳ್ಳುಬಾಕ ಸಂಸ್ಕೃತಿ ಆಗಿನ್ನೂ ಜನರನ್ನು ಆಕರ್ಷಿಸಿರಲಿಲ್ಲ. “ಹಾಸಿಗೆಯಿದ್ದಷ್ಟೇ ಕಾಲುಚಾಚು” ಎಂಬಂತೆ ಇದ್ದುದರಲ್ಲಿಯೇ ತೃಪ್ತಿ ಪಡುತ್ತಿದ್ದ ಜನರು ಸುಖ-ನೆಮ್ಮದಿಯ ಜೀವನ ನಡೆಸುತ್ತಿದ್ದರು. ಅವಿಭಕ್ತ ಕುಟುಂಬಗಳ ಕೌಟುಂಬಿಕ ಸಾಮರಸ್ಯ ಅಂದಿನ ಸಮಾಜ ವ್ಯವಸ್ಥೆಯ ಅಡಿಪಾಯವಾಗಿತ್ತೆಂದರೆ ತಪ್ಪಾಗಲಾರದು.
ಸನಾತನ ಧರ್ಮದ ಶಾಸ್ತ್ರ ಸಂಪ್ರದಾಯ, ತಾತ್ವಿಕ ಮತ್ತು ದಾರ್ಶನಿಕ ಅಧಿಷ್ಠಾನದ ಅನಂತ ಶಕ್ತಿಯು ಭಾರತೀಯರನ್ನು ಇಂದಿಗೂ ಕೈಹಿಡಿದು ಮುನ್ನಡೆಸುತ್ತಿದೆ. ವರ್ಣಾಶ್ರಮ ಪದ್ಧತಿಯು ಜಾತಿ ವ್ಯವಸ್ಥೆಯಾಗಿರಲಿಲ್ಲ. ಬದಲಿಗೆ ವಿವಿಧ ವೃತ್ತಿ ಕೌಶಲಗಳನ್ನು ವೃದ್ಧಿಸಿ ಸದೃಢ ಸಮಾಜವನ್ನು ನಿರ್ಮಿಸಲು, ದೇಶದ ಸುಭದ್ರತೆಗಾಗಿ ಕಂಕಣಬದ್ಧವಾಗಲು ರಹದಾರಿಯನ್ನೊದಗಿಸಿತ್ತು.
ಕರ್ನಲ್ ಥಾಮಸ್ ಮನ್ರೋರವರು ಹೀಗೆ ಉಲ್ಲೇಖಿಸಿದ್ದಾರೆ. “ಉತ್ತಮ ಬೇಸಾಯ ಪದ್ಧತಿ, ನಿತ್ಯ ಜೀವನಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ತಯಾರಿಸಿಕೊಳ್ಳುವ ಸಾಮರ್ಥ್ಯ, ಸ್ವಾವಲಂಬಿತ್ವ, ಹಳ್ಳಿ ಹಳ್ಳಿಗಳಲ್ಲಿ ಶಾಲೆ, ಅತಿಥಿ ಸತ್ಕಾರ, ಸಜ್ಜನಿಕೆ, ಉದಾರ ಮನೋಭಾವ, ಸ್ತ್ರೀ ಗೌರವ ಇವುಗಳನ್ನು ನಾಗರಿಕತೆಯ ಲಕ್ಷಣಗಳೆಂದು ಒಪ್ಪುವುದಾದರೆ ಭಾರತೀಯರು ಯುರೋಪಿನ ದೇಶಗಳಿಗಿಂತ ಕಡಿಮೆ ದರ್ಜೆಯವರಲ್ಲ. ಇಂಗ್ಲೆಂಡ್ – ಭಾರತಗಳ ನಡುವೆ ನಾಗರಿಕತೆಗಳ ವಿನಿಮಯ ಆದಲ್ಲಿ ಹೆಚ್ಚಿನ ಲಾಭವಾಗುವುದು ಇಂಗ್ಲೆಂಡಿಗೇ ಎಂಬುದು ನನ್ನ ನಿಶ್ಚಿತ ಅಭಿಪ್ರಾಯ”. ಒಂದೊಂದು ನಾಗರಿಕತೆಗೆ ಒಂದೊಂದು ಗಡಿ ಇರುತ್ತದೆ. ಭಾರತೀಯರು ತಮ್ಮ ನಾಗರಿಕತೆಗೆ, ಜೀವನಕ್ಕೆ ಇರಿಸಿರುವ ಗಡಿಯೆಂದರೆ ಅದುವೇ ಧರ್ಮ- ಜೀವನಧರ್ಮ- ಮಾನವ ಧರ್ಮ.
“ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್”

ಲೋಕದಲ್ಲಿ ಅಧರ್ಮ ಹೆಚ್ಚಿದಾಗೆಲ್ಲ ಭಗವಂತನ ಆವಿರ್ಭಾವವಾಗುತ್ತದೆ. ಮಾನವ ಧರ್ಮವನ್ನು ಸಂರಕ್ಷಿಸಲು ನಮ್ಮನ್ನು ನಾವೇ ನಿಗ್ರಹಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಮನೋನಿಗ್ರಹ, ಸದಾಚಾರದ ಕರ್ತವ್ಯ, ಪ್ರಾಮಾಣಿಕತೆ ಇವು ಧರ್ಮದ ಅಭ್ಯುದಯದೊಂದಿಗೆ ದೇಶದ ಉನ್ನತಿಗೆ ತಳಹದಿಯಾಗಿವೆ. “ದಯವೇ ಧರ್ಮದ ಮೂಲ” ಹಾಗೂ “ದಯವಿಲ್ಲದ ಧರ್ಮವದಾವುದಯ್ಯ” ಎಂಬಂತೆ ಮಾನವತೆಯೇ ಧರ್ಮದ ಮೂಲ ಸ್ರೋತವಾಗಿದೆ.
ನಮ್ಮ ಪೂರ್ವಿಕರು ಧರ್ಮಕ್ಕೆ ಉಚ್ಛ ಸ್ಥಾನವನ್ನು ನೀಡಿದ್ದರಿಂದ ಋಷಿ ಮುನಿಗಳು ಆಧ್ಯಾತ್ಮ ಸಾಕ್ಷಾತ್ಕಾರದಲ್ಲಿ ಅತ್ಯುನ್ನತ ಹಂತವನ್ನು ತಲುಪಲು ಸಾಧ್ಯವಾಯಿತು. ಆಧ್ಯಾತ್ಮಿಕತೆಯೊಂದಿಗೆ ಲೌಕಿಕತೆಗೂ ಮಹತ್ವ ನೀಡುತ್ತ ಸಮಾಜದ ಒಳಿತಿಗಾಗಿಯೂ ಶಮಿಸುತ್ತಿದ್ದರು. ಲೋಕೋದ್ಧಾರಕ್ಕೂ ಕೈ ಜೋಡಿಸುತ್ತಿದ್ದರು. ಲೌಕಿಕ ವೃಂದಾವನದಲ್ಲಿ ಜ್ಞಾನ -ಧ್ಯಾನ ಸಾಧನೆಯಿಂದ ಆಧ್ಯಾತ್ಮಿಕತೆಯ ಪುಷ್ಪಗಳನ್ನರಳಿಸಿ ಪಾರಮಾರ್ಥಿಕತೆಯ ಸುಗಂಧವನ್ನು ಪಸರಿಸುತ್ತಿದ್ದರು. ಈ ಸಮನ್ವಯವೇ ಹಿಂದೂ ಧರ್ಮದ ಸಾರ.
ಋಗ್ವೇದ. ಯಜುರ್ವೇದ, ಸಾಮ, ಅಥರ್ವಣ ವೇದಗಳಲ್ಲಿ ಬದುಕಿನ ಸಾರ ಅಂತರ್ಗತವಾಗಿದೆ. ಇಂದು ಪ್ರಚಲಿತದಲ್ಲಿರುವ ಕೌಶಲ್ಯಾಭಿವೃದ್ಧಿ ಯೋಜನೆಯು ಪ್ರಾಚೀನ ಕಾಲದಲ್ಲಿಯೇ ಸಹಜವಾಗಿ ಅಸ್ತಿತ್ವದಲ್ಲಿತ್ತು. ಮರಗೆಲಸ, ಚಮ್ಮಾರಿಕೆ, ಚರ್ಮೋದ್ಯಮ, ಕಮ್ಮಾರಿಕೆ, ಲೋಹ ಕಲೆ, ಕುಂಬಾರಿಕೆ, ವೈದ್ಯಕೀಯ, ಕರಕುಶಲ ಕಲೆ ಮುಂತಾದವುಗಳು ಋಗ್ವೇದದಲ್ಲಿ ಉಲ್ಲೇಖವಾಗಿವೆ. ಕೃಷಿಯ ಬೇರೆ ಬೇರೆ ವಿಭಾಗಗಳ ವಿವರವಾದ ಪ್ರಸ್ತಾಪಗಳು ಯಜುರ್ವೇದದಲ್ಲಿವೆ.
ಪ್ರಕೃತಿಯ ಮೂಲಘಟಕಗಳಾದ ಪಂಚಭೂತಗಳನ್ನು ಏಕೀಕರಿಸಿ, ಅವುಗಳಲ್ಲಿ ಸಂಚಯನಗೊಂಡಿರುವ ಶಕ್ತಿಯನ್ನು ನಮ್ಮೊಳಗೆ ಆವಾಹಿಸಿಕೊಳ್ಳುವ ಪ್ರಕ್ರಿಯೆಯೇ ಪೂಜೆ ಪುನಸ್ಕಾರಗಳು. ಪ್ರಕೃತಿಯಲ್ಲಿರುವ ಋಣಾತ್ಮಕ ಅಂಶಗಳನ್ನು ನಿಗ್ರಹಿಸಿ, ನಿವಾರಿಸಿ ಧನಾತ್ಮಕ ಶಕ್ತಿಯನ್ನು ಪುನರುಜ್ಜೀವನಗೊಳಿಸುವುದೇ ಯಜ್ಞ ಯಾಗಾದಿಗಳ ಆಶಯ. ಈ ಹಿನ್ನೆಲೆಯಲ್ಲಿ ಪ್ರಾಚೀನ ಕಾಲದಲ್ಲಿ ಯಜ್ಞ – ಯಾಗ, ಹೋಮ-ಹವನಗಳು ಪ್ರಚಲಿತದಲ್ಲಿದ್ದವು. ಇವುಗಳು ಬರಿಯ ಆಚರಣೆಗಳಷ್ಟೇ ಅಲ್ಲದೆ, ವೈಜ್ಞಾನಿಕ ಮಹತ್ವವನ್ನೂ ಹೊಂದಿದೆ.

ಗುರುಕುಲ ಶಿಕ್ಷಣಪದ್ಧತಿಯೆಂಬ ಭಾರತೀಯತೆಯ ಮೂಲಸೆಲೆ
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬುದೊಂದು ಮಾತಿದೆ. ಗುರುವಿನ ಚರಣಕಮಲಗಳಲ್ಲಿ ನಮ್ಮ ಸರ್ವಸ್ವವನ್ನೂ ಸಮರ್ಪಣೆ ಮಾಡಿದಾಗ ಮಾತ್ರ ಜ್ಞಾನ ಭಿಕ್ಷೆಯ ಭಾಗ್ಯ ಒಲಿಯಲು ಸಾಧ್ಯ.
ಭಾರತದಲ್ಲಿ ಗುರು-ಶಿಷ್ಯರ ನಡುವಣ ಅವಿನಾಭಾವ ಸಂಬಂಧವು ಶಿಕ್ಷಣ ಪದ್ಧತಿಯ ಮೂಲಾಧಾರವಾಗಿತ್ತು. ಗುರುಗಳು ಮಾರ್ಗದರ್ಶಕರಾಗಿ, ಅಧ್ಯಾತ್ಮಿಕ ಜ್ಞಾನದ ಹರಿಕಾರರಾಗಿ ಬಹುಮುಖಿ ಪಾತ್ರವನ್ನು ವಹಿಸುತ್ತಿದ್ದರು. ವೇದ-ವೇದಾಂತಗಳು ಜೀವನ ತತ್ವದ ಹೊನ್ನ ಹಾದಿಯ ಬಾಗಿಲನ್ನು ತೆರೆಯುತ್ತಿದ್ದವು. ಅನುಭವಾತ್ಮಕ ಕಲಿಕೆ, ಸ್ವಾಧ್ಯಾಯ, ಮನನ, ಕಂಠಪಾಠ, ವೀಕ್ಷಣೆ, ಚಿಂತನೆ, ಸಮಯ ಪಾಲನೆ, ಅವಿರತ ಅಧ್ಯಯನ, ಜೀವನ ನಿರ್ವಹಣಾ ಕೌಶಲ್ಯಗಳು, ಒತ್ತಡ ನಿರ್ವಹಣಾ ತಂತ್ರಗಳು, ಆತ್ಮಾಭಿಮಾನ, ಆತ್ಮ ಸಂಯಮ, ಆತ್ಮಗೌರವಗಳನ್ನು ರೂಢಿಸಿಕೊಂಡು ಯಶಸ್ವೀ ಜೀವನಕ್ಕೆ ಮುನ್ನುಡಿಯನ್ನು ಬರೆಯುವುದೇ ಭಾರತೀಯ ಶಿಕ್ಷಣ ಪದ್ಧತಿಯ ಮೂಲ ಧ್ಯೇಯವಾಗಿದೆ.
ಪುರಾತನ ಭಾರತದಲ್ಲಿ ಗುರುಕುಲ ಪದ್ಧತಿಯು ಒಂದು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಾಗಿದ್ದು ಅಲ್ಲಿ ಶಿಷ್ಯರು ಗುರುವಿನ ಆಶ್ರಮದಲ್ಲಿ ವಾಸಿಸುತ್ತ, ವಾಸ್ತವದ ಬದುಕಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತ, ಗುರುವಿನ ಪ್ರೇರಣೆಯೊಂದಿಗೆ ಬದುಕಿನ ನೂರು ಸಮಸ್ಯೆಗಳಿಗೆ ತಾವೇ ಉತ್ತರಗಳನ್ನು ಕಂಡುಕೊಳ್ಳುತ್ತ ಶೈಕ್ಷಣಿಕ ಕಲಿಕೆಯೊಂದಿಗೆ ಜೀವನ ಕೌಶಲ್ಯಗಳನ್ನು ತಮ್ಮೊಳಗೆ ಎರಕ ಹೊಯ್ಯುತ್ತ ಸಾಗುತ್ತಿದ್ದರು.
ಕಠಿಣ ಜೀವನ ಶೈಲಿಗೆ ಬದ್ಧರಾಗುತ್ತ, ಇಚ್ಛಾ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತ ಸದ್ಗೃಹಸ್ಥರಾಗಿ ಆತ್ಮಜ್ಞಾನವನ್ನು ಸಾಕ್ಷಾತ್ಕರಿಸಿಕೊಳ್ಳುತ್ತ ಭಗವಂತನ ಅನಂತ ಚೈತನ್ಯದಲ್ಲಿ ಲೀನವಾಗುವ ಸುಯೋಗವನ್ನು ಹೊಂದುತ್ತಿದ್ದರು. ವೃತ್ತಿಗಳಿಗನುಗುಣವಾಗಿ ರಚಿಸಲ್ಪಟ್ಟ ಚತುರ್ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವರ್ಗಗಳು ತಮ್ಮ ಜೀವನ ನಿರ್ವಹಣೆಯೊಂದಿಗೆ ಪಾರಮಾರ್ಥಿಕ ಸಾಧನೆಗೆ ಶ್ರದ್ಧೆಯ ಇಟ್ಟಿಗೆಗಳನ್ನು ಜೋಡಿಸುತ್ತ ಸಾಗುತ್ತಿದ್ದರು. ಯುದ್ಧಶಾಸ್ತ್ರ, ವೇದ ಗ್ರಂಥಗಳ ಅಧ್ಯಯನ, ಗಣಿತ ಶಾಸ್ತ್ರ, ಖಗೋಳ ಶಾಸ್ತ್ರ, ತತ್ವಶಾಸ್ತ್ರ, ನೀತಿಶಾಸ್ತ್ರ, ಪಾಕಶಾಸ್ತ್ರ, ಲಲಿತ ಕಲೆಗಳು…….ಹೀಗೆ ವೃತ್ತಿಪರ ಶಿಕ್ಷಣದೊಂದಿಗೆ ಆತ್ಮಜ್ಞಾನದ ಶಿಕ್ಷಣವೂ ಮಿಳಿತಗೊಂಡಿರುತ್ತಿತ್ತು.
ಗುರು ಪರಂಪರೆಯ ಮುಂದುವರೆದ ಭಾಗವಾಗಿ ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದ ಕೀರ್ತಿ ನಳಂದ ವಿಶ್ವವಿದ್ಯಾನಿಲಯಕ್ಕೆ ಸಲ್ಲುತ್ತದೆ. ಕುಮಾರ ಗುಪ್ತನ ಉದಾತ್ತತೆಯಿಂದ ನಳಂದದಲ್ಲಿ ಸ್ಥಾಪಿಸಲಾದ ಮೊದಲ ವಸತಿ ವಿಶ್ವವಿದ್ಯಾಲಯವು ಸುಮಾರು ೮೦೦ ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡಿ ಮಾದರಿ ವಿಶ್ವವಿದ್ಯಾಲಯವಾಗಿ ರೂಪುಗೊಂಡಿತ್ತು. ಸುಮಾರು ೨೦೦೦ ಶಿಕ್ಷಕರು ಹಾಗೂ ೧೦೦೦೦ ವಿದ್ಯಾರ್ಥಿಗಳನ್ನು ಏಕಕಾಲದಲ್ಲಿ ಹೊಂದಿರುತ್ತಿತ್ತು ಎಂಬ ಉಲ್ಲೇಖವಿದೆ. ಪ್ರಾಚೀನ ಭಾರತದ ಬಿಹಾರದ ರಾಜಧಾನಿಯಾದ ಪಾಟ್ನಾದ ಆಗ್ನೇಯ ಭಾಗದಲ್ಲಿ ಸ್ಥಾಪಿತವಾಗಿತ್ತು. ಕ್ರಿಸ್ತ ಶಕ ೪೨೭ ರಿಂದ ೧೧೯೭ ರ ವರೆಗೆ ಬುದ್ಧ ಪ್ರಣೀತ ತತ್ವಜ್ಞಾನದ ವ್ಯಾಸಂಗ ಕೇಂದ್ರವಾಗಿತ್ತು. ಇದು ಇತಿಹಾಸದಲ್ಲಿ ನಮೂದಿತವಾಗಿರುವ ಮೊದಲ ಶ್ರೇಷ್ಠ ವಿಶ್ವವಿದ್ಯಾಲಯ ಎಂದು ಕರೆಯಲ್ಪಟ್ಟಿದೆ.
ವಿಶ್ವವಿದ್ಯಾಲಯದ ಕೆಲವು ಕಟ್ಟಡಗಳನ್ನು ಮೌರ್ಯ ವಂಶದ ಚಕ್ರವರ್ತಿ ಸಾಮ್ರಾಟ ಅಶೋಕನು ನಿರ್ಮಿಸಿದ್ದಾನೆ. ಗುಪ್ತ ಸಾಮ್ರಾಜ್ಯವೂ ಸಾಕಷ್ಟು ಕೊಡುಗೆಗಳನ್ನು ನೀಡಿದೆ.
ನಳಂದ ವಿಶ್ವವಿದ್ಯಾಲಯವು ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಸಂಪೂರ್ಣ ಸಮನ್ವಯ ಶಿಕ್ಷಣವನ್ನೊಳಗೊಂಡ ಜ್ಞಾನ ಪ್ರಸಾರಕ ಕೇಂದ್ರವಾಗಿತ್ತು.
ವ್ಯಾಕರಣ, ತರ್ಕಶಾಸ್ತ್ರ, ಗಣಿತಶಾಸ್ತ್ರ, ಭೂಗರ್ಭಶಾಸ್ತ್ರ, ಭೂಗೋಳಶಾಸ್ತ್ರ, ಖಗೋಳಶಾಸ್ತ್ರ, ಶಿಲ್ಪಶಾಸ್ತ್ರ ಕಲೆ, ವಾಸ್ತು ಶಿಲ್ಪ ಶಾಸ್ತç, ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯಶಾಸ್ತ್ರ, ಲಲಿತ ಕಲೆ, ಯುದ್ಧ ವಿದ್ಯೆ, ಮನೋವಿಜ್ಞಾನ, ಶಸ್ತ್ರ ವಿದ್ಯೆ, ಕೃಷಿ, ಕ್ರೀಡೆ, ಆಧ್ಯಾತ್ಮ ಶಿಕ್ಷಣ, ಮಾನವಶಾಸ್ತ್ರ…………ಮುಂತಾದ ೬೦ ವಿದ್ಯೆಗಳನ್ನು ಅಲ್ಲಿ ಬೋಧಿಸಲಾಗುತ್ತಿತ್ತು. ನಳಂದಾ ವಿಶ್ವ ವಿದ್ಯಾಲಯವನ್ನು ಯುನೆಸ್ಕೋ ಪಾರಂಪರಿಕ ತಾಣವೆಂದು ಘೋಷಿಸಿದೆ.
ಭಾರತದ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕಿದಾಗ ಜಾಗತಿಕ ವಿದ್ವಾಂಸರನ್ನು ಆಕರ್ಷಿಸಿದ ಭಾರತೀಯ ವಿದ್ಯಾಲಯಗಳ ಪಟ್ಟಿ ನಮ್ಮ ಕಣ್ಮುಂದೆ ನಿಲ್ಲುತ್ತದೆ. ವಲ್ಲಭಿ ವಿಶ್ವ ವಿದ್ಯಾಲಯ, ತಕ್ಷಶಿಲಾ ವಿಶ್ವ ವಿದ್ಯಾಲಯ, ಮಿಥಿಲಾ ವಿಶ್ವವಿದ್ಯಾಲಯ, ನಾಗಾರ್ಜುನ ವಿಶ್ವ ವಿದ್ಯಾಲಯ, ನಳಂದಾ ವಿಶ್ವ ವಿದ್ಯಾಲಯಗಳು ಪ್ರಮುಖವಾಗಿವೆ. ಇವೆಲ್ಲವೂ ಪ್ರಪಂಚದ ಮೇಲೆ ಪ್ರಭಾವ ಬೀರಿದ ವಿಶ್ವವಿದ್ಯಾಲಯಗಳಾಗಿವೆ. ಇವುಗಳ ಕಾರ್ಯ ವೈಖರಿಗಳು ಏಕರೂಪವಾಗಿದ್ದವು.
ಚೀನೀ ಮಿಶನರಿ ಕ್ಸುವಾನ್ ಜಾಂಗ್ ರವರ ಪ್ರಕಾರ “ನಾ-ಅಲಂ-ಡಾ” ಎಂದರೆ ಯಾವುದೇ ಅಡೆತಡೆಗಳಿಲ್ಲದ ದಾನ ಎಂಬರ್ಥವಿದೆ. ಅಂದರೆ ವಿದ್ಯಾದಾನವನ್ನು ಮಹಾದಾನವೆಂದು ಪರಿಗಣಿಸಿದ ವಿದ್ಯಾಲಯ ನಳಂದಾ ಆಗಿತ್ತು ಎಂದರೆ ಉತ್ಪ್ರೇಕ್ಷೆಯಾಗಲಾರದು. ಭಾರತೀಯತೆಯ ವಿಶೇಷತೆಯೇ ಅದು. ಶಿಕ್ಷವೆಂದರೆ ಅದು ವ್ಯಾಪಾರವಲ್ಲ. ಅದು ಶ್ರೇಷ್ಠವಾದ ದಾನ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಷ್ಕಳಂಕ ಮನಸ್ಸಿನಿಂದ ಉದಾತ್ತವಾಗಿ ನೀಡಲ್ಪಡುವ ದಾನ ಅದು. ಶಿಕ್ಷಣವೆಂಬುದು ವ್ಯಾಪಾರವಾದಾಗ ಅದು ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ.
ಶಿಕ್ಷಣವು ಪ್ರಾಚೀನ ಹಾಗೂ ಆಧುನಿಕ ಭಾರತದ ಅಂತಃಸತ್ವದ ಪ್ರಮುಖ ಅಂಶವಾಗಿದೆ.
ಭಾರತವೆಂಬುದು ಯೋಗಭೂಮಿ, ಯಾಗಭೂಮಿ, ಪುಣ್ಯಭೂಮಿ, ಕರ್ಮಭೂಮಿ, ತಪೋಭೂಮಿ, ತ್ಯಾಗಭೂಮಿ. ಸನಾತನ ಧರ್ಮದ ತೊಟ್ಟಿಲಾದ ಭಾರತವು ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಪರಂಪರೆ, ತತ್ವಜ್ಞಾನ, ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ತವರೂರು. ಭವ್ಯ ಪರಂಪರೆಯು ಶತ ಶತಮಾನಗಳಿಂದ ಭಾರತದ ಪ್ರಜೆಗಳ ಜೀವನಕ್ಕೆ ಪುಷ್ಠಿ ನೀಡುತ್ತ, ಅಕ್ಕರೆಯ ಜೋಗುಳ ಹಾಡುತ್ತ ಪೊರೆಯುತ್ತ ಬಂದಿದೆ. ಸಮಗ್ರ ವಿಶ್ವಕ್ಕೆ ದಿವ್ಯತೆಯ ಅಮೃತಪಾನ ಮಾಡಿಸುವ ಅದ್ಭುತ ಶಕ್ತಿ ಭಾರತಕ್ಕಿದೆ. ಅತಿ ಕ್ಲಿಷ್ಟ ಹಾಗೂ ಸಂದಿಗ್ಧ ಪರಿಸ್ಥಿತಿಗಳಲ್ಲಿ ಸೂಕ್ಷ್ಮವಾಗಿ ಅವಲೋಕನಗೈದು, ದೃಢ ನಿರ್ಧಾರ ಕೈಗೊಂಡು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಕಂಡುಕೊಳ್ಳುವ ಧೀಶಕ್ತಿ ಭಾರತಕ್ಕಿದೆ. ಭಾರತದ ಸಮಚಿತ್ತತೆ, ಅಂತಃಸತ್ವ, ಸಮಗ್ರ ದೃಷ್ಟಿಕೋನ, ಉನ್ನತ ವಿಚಾರಧಾರೆ ಇವು ಜಗತ್ತಿಗೆ ಮಾದರಿಯಾಗಬಲ್ಲವು. ಸಮಷ್ಟಿಯ ಸಂದೇಶವನ್ನು ವಿಶ್ವಕ್ಕೇ ಸಾರಬಲ್ಲವು.
“ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ”
ಭಾರತದ ಶ್ರೇಷ್ಟ ಗ್ರಂಥ ರಾಮಾಯಣದಲ್ಲಿ ಹೀಗೊಂದು ಮಾತಿದೆ. ಸ್ವರ್ಣಲಂಕೆಯ ಸಕಲ ವೈಭವಗಳನ್ನು ತಿರಸ್ಕರಿಸಿದ ಶ್ರೀರಾಮಚಂದ್ರನು ತಾಯಿ ಮತ್ತು ತಾಯ್ನಾಡಿನ ಮಹತ್ವವನ್ನು ಅನಾದಿ ಕಾಲದಲ್ಲಿಯೇ ಬಣ್ಣಿಸಿದ್ದಾನೆ. ಭಾರತ ದೇಶದ ಹಿರಿಮೆ ಗರಿಮೆಗಳು ಅಸೀಮ ಕಡಲಿನ ಅನಂತ ನೀಲಿಮೆಯ ಪ್ರತಿರೂಪ.
ನಮ್ಮ ನಾಡು, ನುಡಿ, ಸಂಸ್ಕೃತಿ, ಕಾವ್ಯ – ಸಾಹಿತ್ಯ ಪರಂಪರೆ ಇವು ತಮ್ಮದೇ ಆದ ಅನನ್ಯತೆ, ವಿಶಿಷ್ಟತೆಯನ್ನು ಇಂದಿಗೂ ಉಳಿಸಿಕೊಂಡಿವೆ.
• ಜ್ಞಾನ-ವಿಜ್ಞಾನ-ತಂತ್ರಜ್ಞಾನಗಳ ಸ್ಪರ್ಶವಿರದೆ ಭಾರತದ ಗರಿಮೆಗೆ ಮೆರುಗು ಬಾರದು
ವಿಜ್ಞಾನ-ತಂತ್ರಜ್ಞಾನದ ಹಲವಾರು ಶಾಖೆಗಳಲ್ಲಿ ಮೇರು ಸಾಧನೆಯನ್ನು ಮಾಡಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ. ಜಗತ್ತಿನ ಮೊಟ್ಟ ಮೊದಲ ವೈದ್ಯಶಾಸ್ತçಜ್ಞರು ಅಶ್ವಿನೀಕುಮಾರರು. ಅಗ್ನಿವೇಶನು ವೈದ್ಯಶಾಸ್ತ್ರದ ಮೊತ್ತ ಮೊದಲ ಶಾಸ್ತ್ರೀಯ ಪ್ರತಿಪಾದನೆ ಮಾಡಿ ಚರಕ ಸಂಹಿತೆಯನ್ನು ರಚಿಸಿದ್ದಾನೆ. ಸುಶ್ರುತನು ಶಲ್ಯಚಿಕಿತ್ಸೆಯ ಮೊದಲ ಶಾಸ್ತç ಗ್ರಂಥವನ್ನು ರಚಿಸಿದ್ದಾನೆ. ಅಶ್ವಾಯುರ್ವೇದದ ಮೊದಲ ಪ್ರತಿಪಾದಕ ಸಾಲಿಹೋತ್ರ. ಪಾದರಸದಿಂದ ಬಂಗಾರವನ್ನು ಹೊರತೆಗೆಯುವ ರಸವಿದ್ಯೆ ಹಾಗೂ ಲೋಹಶಾಸ್ತçದ ಆವಿಷ್ಕರ್ತ ನಾಗಾರ್ಜುನ. ಗ್ರಹ, ನಕ್ಷತ್ರ ಸ್ಥಾನಗಳ ಕೋಷ್ಟಕವನ್ನು ಮೊದಲು ರಚಿಸಿದವರು ಭಾರತೀಯರು.

ಸೂರ್ಯ, ಚಂದ್ರ ಗ್ರಹಣಗಳನ್ನು ಶಾಸ್ತç ರೀತ್ಯಾ ಪ್ರತಿಪಾದಿಸಿದವನು ಆರ್ಯಭಟ. ಭೂಮಿಯ ಪರಿಭ್ರಮಣವನ್ನು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಈತನು ಬೀಜಗಣಿತ ಶಾಸ್ತçದ ಪ್ರವರ್ತಕನಾಗಿದ್ದಾನೆ. ಬ್ರಹ್ಮಗುಪ್ತನು ಗುರುತ್ವಾಕರ್ಷಣ ನಿಯಮವನ್ನು ಹಾಗೂ ದಶಮಾನ ಪದ್ಧತಿಯನ್ನೂ ಪ್ರತಿಪಾದಿಸಿದನು. ಸೊನ್ನೆಯ ಪರಿಕಲ್ಪನೆಯನ್ನು ಗೃತ್ಸಮದನು ನಿರೂಪಿಸಿದನು. ಸೃಷ್ಟಿ ವಿಕಾಸ ತತ್ವವನ್ನು ವೈಜ್ಞಾನಿಕವಾಗಿ ಪ್ರತಿಪಾದಿಸಿದವನು ಸಾಂಖ್ಯದರ್ಶನಕಾರ ಕಪಿಲ. ಬಾಸ್ಕರಾಚಾರ್ಯ, ವರಾಹಮಿಹಿರ, ಶ್ರೀಧರಾಚಾರ್ಯ, ಶ್ರೀನಿವಾಸ ರಾಮಾನುಜನ್, ಶಕುಂತಲಾ ದೇವಿ……………ಹೀಗೆ ಪಟ್ಟಿ ವಿಸ್ತರಿಸುತ್ತಾ ಹೋಗುತ್ತದೆ.
ವಿಶ್ವ ಪರಿಧಿಯದೆಲ್ಲೊ ಸೂರ್ಯ ಚಂದ್ರರಿನಾಚೆ
ವಿಶ್ವಕೇಂದ್ರವು ನೀನೆ ನೀನೆಣಿಸಿದೆಡೆಯೆ
ನಿಃಶ್ವಸಿತ ಸಂಬಂಧ ನಿನಗಂ ದಿಗಂತಕಂ
ಪುಷ್ಪವಾಗಿರು ನೀನು – ಮಂಕುತಿಮ್ಮ

ವಿಶ್ವ ಪರಿಧಿ, ಸೂರ್ಯ, ಚಂದ್ರ, ವಿಶ್ವಕೇಂದ್ರ ಎಲ್ಲವೂ ನಮ್ಮ ಅಂತಃಶಕ್ತಿಯಲ್ಲಿಯೇ ಇವೆ. ದಿಗಂತ ಮತ್ತು ನಮ್ಮ ನಡುವೆ ಉಸಿರಿನ ಏರಿಳಿತದ ಅವಿನಾಭಾವ ಸಂಬಂಧವಿದೆ. ಆ ಸಂಬಂಧವೇ ವಿಶ್ವದ ಅಂತರಾಳವನ್ನು ಅರಿಯುವ ಅಂತಃಶಕ್ತಿಯನ್ನು ಹಾಗೂ ಪ್ರಸ್ಫುಟಿತ ಚೇತನವನ್ನು ಭಾರತೀಯ ಸಾಧಕರ ಮಸ್ತಕದಲ್ಲಿ ಉದ್ದೀಪನಗೊಳಿಸುತ್ತದೆ.
ಇಸ್ರೋದ ಸಾಧನೆಗಳ ಮೈಲಿಗಲ್ಲುಗಳು ಭಾರತವನ್ನು ವಿಶ್ವದಲ್ಲೇ ಅಗ್ರಮಾನ್ಯವಾಗಿಸಿವೆ. ಮಾನವನು ಕಾಲದೊಡನೆ ಸ್ಪರ್ಧಿಸುತ್ತಾ ಅಂತರಿಕ್ಷವನ್ನು ಜಯಿಸಿದ್ದಾನೆ. ಮಾಜಿ ರಾಷ್ಟ್ರಪತಿಗಳಾದ ಧೀಮಂತ ವಿಜ್ಞಾನಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಮ್ ರವರ ನೇತೃತ್ವದಲ್ಲಿ ಸಾವಿರದ ಸಾಧನೆಗಳು ಇತಿಹಾಸದ ಪುಟಗಳಲ್ಲಿ ಅಚ್ಚಾಗಿವೆ. ಪಿ. ಎಸ್. ಎಲ್. ವಿ. , ಜಿ. ಎಸ್. ಎಲ್. ವಿ., ಉಡ್ಡಯನ ವಾಹನಗಳ ಸಂರಚನೆ, ೧೯೭೫ ರಲ್ಲಿ ಆರ್ಯಭಟದ ಉಡ್ಡಯನ, ೧೯೮೦ ರಲ್ಲಿ ರೋಹಿಣಿ, ೨೦೦೮ ರಲ್ಲಿ ಚಂದ್ರಯಾನ, ೨೦೧೨ ರಲ್ಲಿ ರಿಸ್ಯಾಟ್ ಮತ್ತು ಸರಲ್, ೨೦೧೪ ರಲ್ಲಿ ಮಂಗಳಯಾನ, ಹೀಗೆ ಪಟ್ಟಿ ಮುಂದುವರೆಯುತ್ತದೆ. ಇದೀಗ ಚಂದ್ರಯಾನ -೩ ನ್ನು ಯಶಸ್ವಿಗೊಳಿಸಿ ಚಂದಿರನ ಅಂಗಳದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಕೀರ್ತಿ ಭಾರತೀಯ ವಿಜ್ಞಾನಿಗಳಿಗೆ ಸಲ್ಲುತ್ತದೆ. ಚಂದ್ರನ ಮೇಲ್ಮೈಯಲ್ಲಿ ಭಾರತೀಯ ಸಾಧನೆಯ ಸುವರ್ಣಾಕ್ಷರಗಳನ್ನು ಬರೆದಿದೆ. ಪರಮಾಣು ಶಕ್ತಿ, ಹಸಿರು ಇಂಧನ, ಗಡಿ ಭದ್ರತೆ, ಮಹಿಳಾ ಸಬಲೀಕರಣ, ಕೌಶಲ್ಯಾಭಿವೃದ್ಧಿ…………..ಹೀಗೆ ಹತ್ತು ಹಲವು ಕ್ಷೇತ್ರಗಳು ಭಾರತೀಯತೆಯ ಹಿರಿಮೆಯನ್ನು ಬಿಂಬಿಸುತ್ತವೆ. ಭಾರತವೆಂದರೆ ಸಾತ್ವಿಕತೆಯ ನೆಲೆಗಟ್ಟಿನೊಂದಿಗೆ ಅಗಾಧ ಜ್ಞಾನ ಸಂಪತ್ತಿನಿಂದ ಮೈದಳೆದು ಬಂದಿಹ ಅಖಂಡ ಜ್ಞಾನಭೂಮಿ. ಸರ್ವ ಕ್ಷೇತ್ರಗಳ ಪ್ರಗತಿಯು ಈ ನೆಲದ ಸಮಗ್ರತೆಯ ಪ್ರತಿಬಿಂಬ.
ಇಷ್ಟೆಲ್ಲ ಸಾಧನೆಗಳ ಹಿಂದಿರುವ ಧೀಶಕ್ತಿ ಯಾವುದೆಂದರೆ ಅಂದು ಪ್ರಾಚೀನ ಭಾರತದ ಋಷಿ ಮುನಿಗಳು ಸಂರಚಿಸಿಕೊಟ್ಟ ಅಗ್ರ ಪಂಕ್ತಿಯ ಶಿಕ್ಷಣ ಪದ್ಧತಿ. ಅದೇ ಮಾರ್ಗದಲ್ಲಿ ಸಾಗಿ ಬಂದ ನಳಂದಾ ವಿಶ್ವವಿದ್ಯಾಲಯದ ಪಾತ್ರ ಸಹ ಶಿಕ್ಷಣ ಪ್ರಸಾರದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಈ ನಳಂದಾ ವಿಶ್ವವಿದ್ಯಾಲಯದ ಪುನರುಜ್ಜೀವನದ ಕಲ್ಪನೆಯು ೨೦೦೦ ರ ದಶಕದ ಆರಂಭದಲ್ಲಿ ಹೊರಹೊಮ್ಮಿತು. ಮಾಜಿ ರಾಷ್ಟçಪತಿ ಹಾಗೂ ವಿಜ್ಞಾನಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರು ಈ ಕುರಿತು ಸಾಕಷ್ಟು ಶ್ರಮ ವಹಿಸಿದರು. ಸಿಂಗಾಪುರ ಸರ್ಕಾರ ಹಾಗೂ ಪೂರ್ವ ಏಷ್ಯನ್ ಶ್ರಂಘ ಸಭೆಯ ದೇಶಗಳ ನಾಯಕರು ನಳಂದದ ವಾಪಸಾತಿಗೆ ಪ್ರತಿಪಾದಿಸಿದರು.

ಭಾರತೀಯ ಸಂಸತ್ತು ೨೦೧೦ ರಲ್ಲಿ ನಳಂದಾ ವಿಶ್ವವಿದ್ಯಾಲಯದ ಕಾಯಿದೆಯನ್ನು ಅಂಗೀಕರಿಸಿತು. ಹೊಸ ಸಂಸ್ಥೆಗೆ ಕಾನೂನು ಚೌಕಟ್ಟನ್ನು ರೂಪಿಸಿತು. ಇದು ಪ್ರಾದೇಶಿಕ ಜ್ಞಾನ ವಿನಿಮಯದ ಮೇಲೆ ನವೀಕೃತ ಗಮನವನ್ನು ಸಂಕೇತಿಸುತ್ತದೆ. ವಾಸ್ತುಶಿಲ್ಪಿ ಬಿ. ವಿ. ದೋಷಿಯವರು ಆಧುನಿಕ ಸೌಕರ್ಯಗಳನ್ನು ಅಳವಡಿಸಿಕೊಂಡು ಹಿಂದಿನ ಚೈತನ್ಯವನ್ನು ಬಿಂಬಿಸುವ ಪರಿಸರ ಸ್ನೇಹಿ ಕ್ಯಾಂಪಸ್ ಅನ್ನು ವಿನ್ಯಾಸಗೊಳಿಸಿದ್ದಾರೆ.
ವಿಶ್ವ ವಿದ್ಯಾಲಯವು ಬೌದ್ಧ ಅಧ್ಯಯನಗಳು, ಐತಿಹಾಸಿಕ ಅಧ್ಯಯನಗಳು, ಪರಿಸರ ವಿಜ್ಞಾನ, ಪರಿಸರ ಅಧ್ಯಯನ, ಅಂತರರಾಷ್ಟ್ರೀಯ ಸಂಬಂಧಗಳು, ಸೇರಿದಂತೆ ವಿವಿಧ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಕೇಂದ್ರೀಕರಿಸಿಕೊಂಡು ಶಿಕ್ಷಣವನ್ನು ನೀಡುತ್ತದೆ. ಇದೊಂದು “ನೆಟ್ ಝೀರೋ ಗ್ರೀನ್ ಕ್ಯಾಂಪಸ್” ಆಗಿದೆ. ಸೌರ ಸ್ತಾವರ, ದೇಶೀಯ ಕುಡಿಯುವ ನೀರಿನ ಸಂಸ್ಕರಣಾ ಘಟಕ, ತ್ಯಾಜ್ಯ ನೀರಿನ ಮರುಬಳಕೆ ಘಟಕ, ನೂರು ಎಕರೆ ಜಲಮೂಲಗಳು ಮತ್ತು ಇತರೆ ಪರಿಸರ ಸ್ನೇಹಿ ಸೌಲಭ್ಯಗಳೊಂದಿಗೆ ಸ್ವಯಂ-ಸಮರ್ಥನೀಯವಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತೀಯ ಶಿಕ್ಷಣದ ಅಗತ್ಯತೆ.

ಭಾರತೀಯ ಶಿಕ್ಷಣ ಪದ್ಧತಿಯ ಅಂತಃಸತ್ವ ಹಾಗೂ ಸ್ವರೂಪವನ್ನು ನಾವೀಗ ಅವಲೋಕಿಸಿದ್ದೇವೆ. ಇಂದಿನ ಕಾಲಘಟ್ಟದಲ್ಲಿ ಈ ಶಿಕ್ಷಣ ಪದ್ಧತಿಯ ಪ್ರಸ್ತುತತೆ ಏಕಿದೆ ಎಂಬುದರತ್ತ ಒಮ್ಮೆ ಗಮನ ಹರಿಸೋಣ.
ಇಂದು ವಿಶ್ವವೇ ನಮ್ಮ ಅಂಗೈಯಲ್ಲಿದೆ. ತಂತ್ರಜ್ಞಾನದ ಉತ್ಕೃಷ್ಟತೆಯಿಂದಾಗಿ ನಾವಿಂದು ಹಿಂದಿರುಗಿ ನೋಡಲಾರದಷ್ಟು ಮುಂದೆ ಸಾಗುತ್ತಿದ್ದೇವೆ. ಆದರೆ ಸಮಾಜ ಸಾಗುತ್ತಿರುವ ವೇಗವನ್ನೊಮ್ಮೆ ಗಮನಿಸಿದಾಗ ಬದುಕಿನ ಜೀವಾಳವಾದ ನೈತಿಕ ಮೌಲ್ಯಗಳ ಕೊರತೆ ದಟ್ಟವಾಗಿ ಎದ್ದು ಕಾಣುತ್ತದೆ. ಹಾಗಾದರೆ ನಾವೆಲ್ಲಿ ತಪ್ಪುತ್ತಿದ್ದೇವೆ? ನಮ್ಮ ಶಿಕ್ಷಣದಲ್ಲಿ ಬದಲಾವಣೆಯ ಅವಶ್ಯಕತೆಯಿದೆಯಾ? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡಾಗ ಒಂದಷ್ಟು ಉತ್ತರಗಳು ನಮ್ಮೊಳಗೆ ಅನಾವರಣಗೊಳ್ಳುತ್ತವೆ.
ಶಿಕ್ಷಣವೆಂಬುದು ಈಗ ದಾನವಾಗಿ ಉಳಿದಿಲ್ಲ. ವಿದ್ಯಾಕೇಂದ್ರಗಳು ಮಾರುಕಟ್ಟೆಗಳಾಗುತ್ತಿವೆ. ವಾಣಿಜ್ಯ ಉದ್ದೇಶಗಳಿಂದ ಮಾರು ಮಾರಿಗೆ ಸ್ಥಾಪಿತವಾಗುತ್ತಿರುವ ಶಾಲಾ ಕಾಲೇಜುಗಳು ಹಣ ಸುಲಿಗೆಯ ದೈತ್ಯ ಕೇಂದ್ರಗಳಾಗಿವೆ. ಭ್ರಷ್ಟಾಚಾರವೆಂಬುದು ಸದ್ದಿಲ್ಲದೆ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತಿದೆ.
ಮಾಧ್ಯಮಗಳ ಅತಿಯಾದ ಪ್ರಭಾವದಿಂದ ಮಕ್ಕಳಲ್ಲಿ ತಾಮಸ ಗುಣಗಳು ಅಧಿಕವಾಗುತ್ತಿವೆ. ೨೦೧೮ ರಲ್ಲಿ ಥಾಮಸ್ ರಾಯ್ವರ್ಸ್ ಪ್ರತಿಷ್ಠಾನ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತವು ಜಗತ್ತಿನಲ್ಲಿಯೇ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶವಾಗಿ ಮಾರ್ಪಡುತ್ತಿದೆ ಎಂಬ ಅಂಶವು ತಿಳಿದುಬಂದಿದೆ. ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ಕುರಿತು ಕಠಿಣ ಕಾನೂನುಗಳಿವೆ. ನಮ್ಮಲ್ಲಿಯೂ ಇಂತಹ ಕಾನೂನನ್ನು ಜಾರಿಗೊಳಿಸುವ ವಿಪರ್ಯಾಸ ಒದಗಿಬಂದರೆ ಅಚ್ಚರಿಯೇನಿಲ್ಲ.
ಆತ್ಮ ಸಂಯಮ, ಸ್ತ್ರೀ ಗೌರವ, ಸ್ತ್ರೀಯರನ್ನು ಮಾತೃದೇವತೆಯಂತೆ ಪೂಜಿಸುವ ಹಿರಿದಾದ ಸಂಸ್ಕೃತಿಯುಳ್ಳ ಭಾರತದಲ್ಲಿ ಇಂದು ಸ್ತ್ರೀಯರ ರಕ್ಷಣೆಯೇ ದೊಡ್ಡ ಸವಾಲಾಗಿ ಮಾರ್ಪಡುತ್ತಿದೆ. ಇಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದು ಉತ್ತರವಾಗುವುದಿಲ್ಲ. ಬದಲಿಗೆ ಮನೋನಿಗ್ರಹದ ಸಾಮರ್ಥ್ಯವನ್ನು ಎಳೆಯ ಮನಗಳಲ್ಲಿ ಬಿತ್ತಬೇಕಿದೆ.

ಮಕ್ಕಳ ಮನಸ್ಸು ಹಸಿ ಮಣ್ಣಿನ ಗೋಡೆಯಿದ್ದಂತೆ. ಅಲ್ಲಿ ಪಾಲಕರು ಹಾಗೂ ಶಿಕ್ಷಕರು ಯಾವ ಚಿತ್ರವನ್ನು ಬರೆಯುತ್ತಾರೋ ಆ ಚಿತ್ರ ಜೀವನದುದ್ದಕ್ಕೂ ಅಚ್ಚಳಿಯದಂತಿರುತ್ತದೆ. ಸಾತ್ವಿಕತೆಯ ನೆಲೆಗಟ್ಟಿನಲ್ಲಿ ಹರಳುಗಟ್ಟಿದ ಸದ್ಗುಣಗಳು, ನೀತಿ ಕಥೆಗಳ ಕಾಲಕ್ಷೇಪ, ಪಠ್ಯ ವಿಷಯಗಳೊಂದಿಗೆ ಜೀವನದ ಪಾಠವೂ ಜೊತೆ ಜೊತೆಯಾಗಿ ಸಾಗಬೇಕಿದೆ.
• ಸರ್ವ ಧರ್ಮ ಸಮನ್ವಯದ ಸಿರಿನಾಡು ಭಾರತ, ಅಭಿವೃದ್ಧಿ ಪಥದಿ ಸಾಗುತಿಹ ಭವ್ಯ ನಾಡು ಭಾರತ
ವಿವಿಧ ಜಾತಿ, ಮತ, ನಂಬಿಕೆಗಳ ಜನರು ಒಟ್ಟಿಗೆ ಬದುಕುವ ವೈವಿಧ್ಯಮಯ ನಾಡು ಇದು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಜಾಗತಿಕವಾಗಿ ಪ್ರಭಾವಶಾಲಿಯಾಗಿ ಮಾರ್ಪಟ್ಟಿರುವ ಭಾರತವು ಅಗಾಧ ಬೆಳವಣಿಗೆ ಹೊಂದುತ್ತಿದೆ. ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಆರ್ಥಿಕತೆ, ಸಾಮಾಜಿಕ ಸ್ಥಿತಿಗತಿ, ಸೇನಾ ಕ್ಷೇತ್ರ, ಗಡಿ ಭದ್ರತೆ……………..ಹೀಗೆ ವ್ಯಾಪಕ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ.
• ಉದಾರೀಕರಣ, ಖಾಸಗೀಕರಣ, ಆರ್ಥಿಕ ಸುಧಾರಣಾ ನೀತಿಗಳು, ಕೈಗಾರಿಕಾ ಪರವಾನಗಿ ನೀತಿ, ಸಡಿಲವಾದ ಎಫ್.ಡಿ.. ಐ. ನೀತಿಗಳು, ಹೆಚ್ಚಿದ ದೇಶೀ ಬಳಕೆ, ಇವು ಅಂತರ ರಾಷ್ಟ್ರೀಯ ಹೂಡಿಕೆದಾರರ ಸಕಾರಾತ್ಮಕ ಪ್ರತಿಕ್ರಿಯೆಗಳಿಗೆ ದಾರಿಮಾಡಿಕೊಡುವುದರೊಂದಿಗೆ ಭಾರತದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗಿದೆ. ಭಾರತವು ೮.೨ ಶೇಕಡಾ ಯೋಜಿತ ಬೆಳವಣಿಗೆಯೊಂದಿಗೆ ವಿಶ್ವದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಇದಕ್ಕೆ ಭಾರತದ ಶ್ರೀಮಂತ ಸಂಸ್ಕೃತಿಯೇ ಅಡಿಪಾಯವಾಗಿದೆ.
• ವ್ಯವಸಾಯ ಕ್ಷೇತ್ರದಲ್ಲಿ ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ತಾಂತ್ರಿಕ ಸಂಯೋಜನೆಯಿಂದ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಇಂದು ನಾವು ಸ್ವಾವಲಂಬಿಗಳೂ, ಸ್ವಪರಿಪೂರ್ಣರೂ ಆಗಿರುತ್ತೇವೆ ಎಂದರೆ ಅತಿಶಯೋಕ್ತಿ ಆಗಲಾರದು. ನೇಗಿಲ ಯೋಗಿಯನ್ನು ಪೂಜಿಸುವ ನೆಲವಿದು. ಜಗಕೆ ಅನ್ನವನೀವ ಅನ್ನದಾತನ ಬೇರುಗಳಿರುವುದು ಈ ನೆಲದ ಚಿನ್ನದ ಮಣ್ಣಿನಲ್ಲಿ. ಶ್ರಮ ಸಂಸ್ಕೃತಿಯ ನಾಡು ಇದು.
• ವಿಶ್ವಮಾನವ, ವಿಶ್ವ ವಿಜೇತ ಸ್ವಾಮಿ ವಿವೇಕಾನಂದರ ಧರ್ಮೋನ್ನತಿಯ ದಿವ್ಯ ಬೀಡು ಇದು.
ಅಖಂಡ ವಿಶ್ವಕ್ಕೇ ಭಾರತೀಯತೆಯ ಅನುಪಮ ಸಂಸ್ಕಾರ- ಸಂಸ್ಕೃತಿಗಳನ್ನು ಪರಿಚಯಿಸಿದ ವೀರ ಪುತ್ರ ವಿಕೇಕಾನಂದರಿಗೆ ಜನ್ಮವಿತ್ತ ಪಾವನ ನಾಡು ಇದು. ಇಡೀ ಜಗತ್ತೇ ಭಾರತವನ್ನು ತಲೆ ಎತ್ತಿ ನೋಡುವಂತೆ ಮಾಡಿದ ಅವರ ಧೀಶಕ್ತಿಗೆ ಶರಣು ಶರಣು. ಇಂತಹ ಅಸಂಖ್ಯ ಮಹನೀಯರು ಹಾಕಿಕೊಟ್ಟ ಅಗ್ರ ಪಂಕ್ತಿಯ ರಾಜಪಥ ಭರತಭೂಮಿಯಲ್ಲಿದೆ.
ಪಾರಮಾರ್ಥಿಕತೆಯ, ಅಧ್ಯಾತ್ಮಿಕತೆಯ ನೆಲೆಗಟ್ಟಿನೊಂದಿಗೆ ಲೌಕಿಕ ಜಗತ್ತಿನಲ್ಲಿ ದೈನಂದಿನ ವ್ಯವಹಾರಗಳಲ್ಲಿಯೂ ಸಂಸ್ಕಾರದ ಬೀಜವನ್ನು ಬಿತ್ತುವುದು ಈ ನೆಲದ ವಿಶಿಷ್ಟತೆ. ಇದೊಂದು ಆತ್ಮೋದ್ಧಾರದ ತಪೋಭೂಮಿ. ವಿಶ್ವ ಮಾನವ ಪ್ರಯೋಗಶಾಲೆ. ವಿವಿಧ ಸಂಸ್ಕೃತಿಗಳನ್ನು, ಆಚಾರ- ವಿಚಾರಗಳನ್ನು, ಮತ-ಪಂಥಗಳ ಅಂತಃಸತ್ವವನ್ನು ಅರಗಿಸಿಕೊಂಡು ಅಂತಃಪ್ರಜ್ಞೆಯನ್ನು ಅರಳಿಸಿರುವ ಸಮಷ್ಟಿಯ ಹೂಬನ ಇದು.
ದೀನ-ದಲಿತರಿಗೆ ಆಶ್ರಯ ನೀಡಿ ಅತಿಥಿ ಸತ್ಕಾರ ಮಾಡುವ ನೆಲವಿದು. ಬಾಬಾ ಆಮ್ಟೆಯವರು ಕುಷ್ಠ ರೋಗದ ನಿವಾರಣೆಗಾಗಿ ಹಗಲಿರುಳು ಶ್ರಮಿಸಿ ಸಮಾಜದ ಒಳಿತಿಗಾಗಿ, ಶ್ರೇಯಸ್ಸಿಗಾಗಿ ತಮ್ಮನ್ನೇ ಸಮರ್ಪಿಸಿಕೊಂಡ ನೆಲವಿದು. ರಮಣ ಮಹರ್ಷಿ, ಡಾ. ಬಿ. ಆರ್. ಅಂಬೇಡ್ಕರ್, ಆಚಾರ್ಯ ವಿನೋಭಾ ಭಾವೆ, ಮದರ್ ತೆರೆಸಾ, ಮಹರ್ಷಿ ಅರವಿಂದರು………ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸಮಾಜದ ಉದ್ಧಾರಕ್ಕಾಗಿ ದುಡಿದ ಮಹನೀಯರ ಸಂಖ್ಯೆ ಅಪರಿಮಿತ. ಮುನ್ನೂರು ವರ್ಷಗಳ ಕಾಲ ಭಾರತೀಯರ ಮೇಲೆ ದಬ್ಬಾಳಿಕೆ ನಡೆಸಿ, ಗುಲಾಮಗಿರಿಯ ಸಂಕೋಲೆ ಬಿಗಿದು ಅಟ್ಟಹಾಸಗೈದ ಯುರೋಪಿಯನ್ನರ ಕ್ರೌರ್ಯ ಕಡಿಮೆಯೇನಿಲ್ಲ. ಆದರೆ ಅದೇ ನೆಲ ಇಂಗ್ಲೆಂಡಿನ ಪ್ರಧಾನಿ ಸ್ಥಾನಕ್ಕೆ ಭಾರತೀಯನೊಬ್ಬ ಆಯ್ಕೆಯಾಗಿ ದೇಶದ ಚುಕ್ಕಾಣಿ ಹಿಡಿದು ಮುನ್ನಡೆಸುತ್ತಾನೆಂದರೆ ಅದಕ್ಕಿಂತ ಹಿರಿದಾದ ಸಂಗತಿ ಮತ್ಯಾವುದಿದೆ?
ಮಹಾಮಾರಿ ಪ್ಲೇಗ್, ಕಾಲರಾ, ಸಿಡುಬುಗಳಿಂದ ಆರಂಭವಾಗಿ ಇಂದಿನ ಕೊರೋನಾದ ವರೆಗೂ ಕಾಡುವ ವೈರಸ್‌ಅನ್ನು ಮಣಿಸಿ, ಸಮರ್ಥವಾಗಿ ಪರಿಸ್ಥಿತಿಯನ್ನು ಎದುರಿಸಿದ ಪರಿ ವಿಶ್ವದಲ್ಲೇ ಮಾದರಿಯಾಗಿದೆ.

• ಹಬ್ಬ ಹರಿದಿನಗಳು, ಉತ್ಸವಗಳು- ಸಂಸ್ಕೃತಿಯ ಮಹಾನದಿಗಳು
ಭಾರತೀಯ ಹಬ್ಬಹರಿದಿನಗಳು ಮೈದಳೆದಿರುವುದು ಪ್ರಕೃತಿಯ ಆರಾಧನೆಗಾಗಿ ಹಾಗೂ ಪ್ರಕೃತಿಯ ಸಂರಕ್ಷಣೆಗಾಗಿ. ಹಬ್ಬಗಳು ನಮ್ಮ ಸಂಸ್ಕೃತಿಯನ್ನು ಅವಿರತವಾಗಿ ಪ್ರವಹಿಸುವಂತೆ ಮಾಡುವ ಹೊನಲುಗಳು. ನೆಲ., ಜಲ, ವಾಯು, ಕಾನನಗಳನ್ನು ಪೂಜಿಸುವ ಸಂಸ್ಕಾರ -ಸಂಪ್ರದಾಯಗಳು ಪರಿಸರ ಸಂರಕ್ಷಣೆಯ ಕೈಂಕರ್ಯಗಳಾಗಿವೆ. ಮಾನವ ಬಾಂಧವ್ಯಗಳ ಬೆಸುಗೆ ಹಾಗೂ ಕೌಟುಂಬಿಕ ಸಾಮರಸ್ಯದ ಮಹೋನ್ನತ ಉದ್ದೇಶವೂ ಈ ಹಬ್ಬಗಳ ಆಚರಣೆಯಲ್ಲಿ ಹುದುಗಿದೆ.
ಬದುಕಿನಲ್ಲಿ ಮಾನವನ ವ್ಯವಹಾರಗಳು ಸ್ವಂತದ ಭೋಗಕ್ಕಾಗಿ ಮಾತ್ರ ಅಲ್ಲ, ಬದಲಿಗೆ ಆತ್ಮವಿಕಾಸಕ್ಕಾಗಿ ಎಂಬುದು ಭಾರತೀಯರ ದೃಷ್ಟಿಕೋನ. ಪತಿ-ಪತ್ನಿ, ತಂದೆ-ಮಗ, ತಾಯಿ-ಮಗ, ಅತ್ತೆ-ಸೊಸೆ, ರಾಜ್ಯ-ರಾಷ್ಟ್ರ, ವ್ಯಕ್ತಿ-ಸಮಾಜ…………ಹೀಗೆ ಸಕಲ ಚರಾಚರ ಜೀವ ಜಾಲಗಳ ನಡುವಿನ ಅವಿನಾಭಾವ ಸಂಬಂಧದ ಕೊಂಡಿ ಈ ನೆಲದಲ್ಲಿದೆ. ಇವು ಮಾನವನ ಆತ್ಮ ವಿಕಾಸದ ಸೋಪಾನಗಳು. ಭಾರತೀಯ ಸಾಂಸ್ಕೃತಿಕ-ಆಧ್ಯಾತ್ಮಿಕ ಸಚ್ಚರಿತೆ ಭುವನದಲ್ಲಿಯೇ ಅಗ್ರಸ್ಥಾನದಲ್ಲಿದೆ.
ಭಾರತೀಯರು ಜಗತ್ತಿಗೇ ಗುರುವಾಗಿ ನಿಲ್ಲಬಲ್ಲ ಆತ್ಮಶಕ್ತಿಯ ವಾರಸುದಾರರು. ಸಂಕಟಗಳ ಕಾರ್ಗತ್ತಲು ಕವಿದಾಗ ಪರಿಹಾರದ ಹೊಂಬೆಳಕನ್ನು ಉಜ್ಜುಗಿಸಿದ ಭಾರತೀಯ ಸಂತರು, ಮಹರ್ಷಿಗಳು, ಋಷಿ ಮುನಿಗಳ ಜೀವನ ದರ್ಶನವೇ ನಮಗೆ ದಾರಿ ದೀವಿಗೆ.
ನಮ್ಮ ಮಕ್ಕಳ ಚಿತ್ತವನ್ನು ಹದಗೊಳಿಸಿ ಸದ್ವಿಚಾರಗಳ ಬೀಜಗಳನ್ನು ಬಿತ್ತಬೇಕಾಗಿದೆ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ಮನೆಯಿಂದಲೇ ಭಾರತೀಯ ಶಿಕ್ಷಣ ಆರಂಭವಾಗಬೇಕಾಗಿದೆ. ಮಗುವೊಂದು ಭ್ರೂಣ ರೂಪದಲ್ಲಿ ತಾಯ ಗರ್ಭಗುಡಿಯಲ್ಲಿ ಕಣ್ತೆರೆಯುತ್ತಿರಬೇಕಾದರೆ ಸಂಸ್ಕಾರದ ಪಾಠ ಆರಂಭವಾಗಬೇಕಿದೆ.
ಇಂದು ಸ್ವರ್ಣವಲ್ಲೀ ಮಹಾಸಂಸ್ಥಾನ ಹಾಗೂ ರಾಮಚಂದ್ರಾಪುರ ಮಠದ ಮಹಾಸಂಸ್ಥಾನದಿಂದ ಆಯೋಜಿಸುತ್ತಿರುವ “ಧನ್ಯೋ ಗೃಹಸ್ಥಾಶ್ರಮಃ” ಎಂಬ ಶಿಬಿರ ರೂಪದ ಕಾರ್ಯಕ್ರಮಗಳು ಸತ್ಸಂತಾನಕ್ಕೆ ಅಡಿಪಾಯವನ್ನು ಹಾಕಿಕೊಡುತ್ತಿವೆ. ಅಲ್ಲಿಂದ ಉತ್ತಮ ಸಂಸ್ಕಾರಪೂರ್ಣ ಮಗುವನ್ನು ಪಡೆಯಲು ದಂಪತಿಗಳು ಅನುಸರಿಸಬೇಕಾದ ಮಾರ್ಗಗಳು ತೆರೆದುಕೊಳ್ಳುತ್ತವೆ. ಸೂಕ್ತ ಕಾಲದಲ್ಲಿ ಆರೋಗ್ಯವಂತ ಶರೀರ, ಮನಸ್ಸುಗಳ ಮಿಲನವು ಸತ್ಸಂತಾನ ಪ್ರಾಪ್ತಿಗೆ ದಾರಿ ಮಾಡಿಕೊಡುತ್ತದೆ. ಸೀಮಂತ, ಪುತ್ರೋತ್ಸವ, ಬ್ರಹ್ಮೋಪದೇಶ, ಕನ್ಯಾಸಂಸ್ಕಾರ, ವಿವಾಹ ಮಹೋತ್ಸವ……….ಹೀಗೆ ಅನಾದಿ ಕಾಲದಿಂದ ಅನುಪಾಲನೆಗೊಳ್ಳುತ್ತ ಬಂದ ಶಾಸ್ತ್ರ-ಸಂಪ್ರದಾಯಗಳು ಜೀವನ ಶಿಕ್ಷಣದ ಭಾಗಗಳೇ ಆಗಿವೆ. ಇವು ಮನುಜನನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಮೈಲಿಗಲ್ಲುಗಳಾಗಿವೆ. ಇವು ಗುರುಗಳ ಹಾಗೂ ಯತಿವರೇಣ್ಯರಿಂದ ಸಮಾಜಕ್ಕೆ ನೀಡಲ್ಪಡುವ ಶಿಕ್ಷಣದ ರೂಪವಾದರೆ ಸರಕಾರದ ವತಿಯಿಂದ ನೀಡಲ್ಪಡುವ ಔಪಚಾರಿಕ ಶಿಕ್ಷಣದಲ್ಲಿಯೂ ಅಮೂಲಾಗ್ರ ಬದಲಾವಣೆಗೆ ಯೋಜನೆಗಳು ಸಂರಚಿತವಾಗಿವೆ.
೨೦೨೦ ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಮಾಜಮುಖಿಯಾದ ನವ್ಯ ಚಿಂತನೆಗಳನ್ನು ಒಳಗೊಂಡಿದ್ದು ಭಾರತೀಯ ಶಿಕ್ಷಣ ಪದ್ಧತಿಯ ಅಂತಃಸತ್ವವನ್ನು ತನ್ನೊಳಗೆ ಆವಿರ್ಭವಿಸಿಕೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಬೃಹತ್ ಪರಿವರ್ತನೆಯನ್ನು ಕಲ್ಪಿಸಲೋಸುಗ ರಚಿತವಾದ ಈ ನೀತಿಯು ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಭಾರತವನ್ನು ಸರ್ವ ಸಮರ್ಥನೀಯವಾಗಿಸಲು ಪಣ ತೊಟ್ಟಿದೆ. ಭಾರತವನ್ನು ಜಾಗತಿಕ ಜ್ಞಾನದ ಮಹಾಶಕ್ತಿಯಾಗಿ ರೂಪಿಸುವ ತಂತ್ರಗಳನ್ನು ಒಳಗೊಂಡಿದೆ. ಪ್ರಸ್ತುತ ಮತ್ತು ಭವಿಷ್ಯದ ವೈವಿಧ್ಯಮಯ ರಾಷ್ಟ್ರೀಯ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಯುವಕರನ್ನು ಸಿದ್ಧಪಡಿಸುವ ಧ್ಯೇಯಗಳನ್ನು ಒಳಗೊಂಡಿದೆ. ವಿಮರ್ಶಾತ್ಮಕ ಚಿಂತನೆಯಂತಹ ಉನ್ನತ ಕೌಶಲ್ಯಗಳು, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು, ಸಾಂಸ್ಕೃತಿಕ ಅರಿವು, ಪರಾನುಭೂತಿ, ಪರಿಶ್ರಮ, ನಾಯಕತ್ವ, ಸಂವಹನ ಕೌಶಲ, ಮೃದು ಕೌಶಲ, ತಂತ್ರಜ್ಞಾನದ ಸದುಪಯೋಗದೊಂದಿಗೆ ಆದರ್ಶಯುತ ಜೀವನ ವಿಧಾನವನ್ನು ಬೋಧಿಸುವುದಾಗಿದೆ.
ನ್ಯಾಯಯುತ ಸಮಾನತೆಯ ಸಮಾಜ ನಿರ್ಮಾಣ, ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿ, ಗುಣಮಟ್ಟದ ಸಂಶೋಧನೆಗೆ ಆದ್ಯತೆ, ತಂತ್ರಜ್ಞಾನದ ಏಕೀಕರಣಗಳನ್ನು ಈ ನೀತಿಯು ಉತ್ತೇಜಿಸುತ್ತದೆ. ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣ, ಆಡಳಿತ ಮತ್ತು ನಿಯಂತ್ರಕ ವಾಸ್ತುಶಿಲ್ಪದ ಪುರ್ರವಚನೆ, ಬಹುಶಿಸ್ತೀಯ ಪಠ್ಯ ಕ್ರಮ ಮುಂತಾದ ಯೋಜನೆಗಳನ್ನು ಇದು ಹೊಂದಿದೆ. ಸುಸ್ಥಿರ ಅಭಿವೃದ್ಧಿಯ ಗುರಿಗಳ ಪ್ರಕಾರ ೨೦೪೭ ರ ವೇಳೆಗೆ ಭಾರತವನ್ನು ಕೌಶಲ್ಯಪೂರ್ಣ ಮಾನವ ಶಕ್ತಿಯ ಜಾಗತಿಕ ಕೇಂದ್ರವಾಗಿ ಮಾರ್ಪಡಿಸುವುದು ಈ ನೀತಿಯ ಧ್ಯೇಯವಾಗಿದೆ.
ಈ ನೀತಿಯು ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ ಭಾರತೀಯ ಶಿಕ್ಷಣ ಪದ್ಧತಿಯ ಧ್ಯೇಯೋದ್ದೇಶಗಳು ಪೂರ್ಣಗೊಳ್ಳುವುದರಲ್ಲಿ ಸಂಶಯವಿಲ್ಲ.

ಉಪಸಂಹಾರ:

ಅಸೀಮ ಭಾರತದ ಅನಂತ ಶರಧಿ ವಿಸ್ತಾರದ ಸಂಸ್ಕೃತಿಯ ಆಳ, ಅಗಲ, ವಿಸ್ತಾರಗಳನ್ನು, ಗರಿಮೆಯನ್ನು ಪದಗಳಿಂದ ಬಣ್ಣಿಸಲಾಗದು. ಬಣ್ಣಿಸುವ ಹಾದಿಯಲ್ಲಿ ಲೇಖನಿ ಸೋಲುತ್ತದೆ. ನಾಡು, ನುಡಿ, ಸಾಹಿತ್ಯ, ಕಾವ್ಯ, ಸಂಸ್ಕೃತಿ, ಇತಿಹಾಸ ಆಚರಣೆಗಳು ನಮ್ಮೆದೆಯಾಳದ ಅಭಿಮಾನದಕ್ಕರೆಯ ಸಿರಿವಂತಿಕೆಯ ಪ್ರಜ್ವಲ ಪ್ರಣತಿಗಳು. ಭಾರತೀಯತೆಯ ಅಸ್ಮಿತೆಯನ್ನು ಪ್ರತಿಬಿಂಬಿಸುವ ದರ್ಪಣಗಳೆಂದರೆ ಶಿಕ್ಷಣ ಪದ್ಧತಿಗಳು ಮತ್ತು ಶಿಕ್ಷಣ ನೀತಿಗಳು, ಶಿಕ್ಷಣ ಕೇಂದ್ರಗಳು. ಶಿಕ್ಷಣ ಕೇಂದ್ರಗಳು ಪವಿತ್ರ ದೇವಾಲಯಗಳಾದಾಗ ಪ್ರತಿಯೊಂದು ಮಗುವೂ ದೇವಸ್ವರೂಪಿ ಚೈತನ್ಯವನ್ನು ಮೈಮನಗಳಲ್ಲಿ ಆವಾಹಿಸಿಕೊಂಡು ಸತ್ಪçಜೆಯಾಗಿ ರೂಪುಗೊಳ್ಳುತ್ತದೆ. ದೇಶಭಕ್ತಿಯನ್ನು ಮೈದುಂಬಿಕೊಳ್ಳುತ್ತದೆ. ಸದ್ವಿಚಾರವನ್ನು ಉಸಿರಾಡುತ್ತದೆ.

ಸುಶಾಂತ ಸುವೃಷ್ಟಿ ಸಂಪದ ಸದ್ಧರ್ಮ ಪೂರಿತ ರಾಮರಾಜ್ಯ
ಸರ್ವಜನ ಹಿತ ಸಮನ್ವಯಕಾರಕ ಸುರಾಜ್ಯ
ಆತ್ಮ ಸಂಯಮ ಆತ್ಮ ರಕ್ಷಣೆ ಆತ್ಮೋದ್ಧಾರದ ಕರ್ಮಭೂಮಿಯಿದು
ಪೂರ್ಣತೆಯ ಸಂಕಲನ ಭಾವೈಕ್ಯತೆಯ ಏಕೀಕರಣದ ದೇವಭೂಮಿಯಿದು

ಪಂಚಭೂತಗಳನ್ನೊಳಗೊಂಡ ಪ್ರಕೃತಿಯ ಆರಾಧನೆ, ಹಾಡು-ಹಸೆ-ಚಿತ್ತಾರ, ಭಜನೆಗಳ ಸಂಕೀರ್ತನೆ, ಭಗವನ್ನಾಮ ಸ್ಮರಣೆಗಳ ಸದ್ಧರ್ಮ ಸಂಪದ್ಭರಿತ ಭಾರತ ರಾಮರಾಜ್ಯದ ತೆರದಿ ಬೆಳಗಲಿ, ಬೆಳಗುತ್ತಿರಲಿ. ಸರ್ವ ಹೃದಯಗಳ ಬಾಂಧವ್ಯ ಬೆಸೆದು ಎದೆ ಬಡಿತದಿ, ನಾಡಿ ಮಿಡಿತದಿ ತಾಯಿ ಭಾರತಾಂಬೆಯ ಜಯಕಾರದ ಉದ್ಘೋಷ ಮೊಳಗುತ್ತಿರಲಿ. ದೇಶಭಕ್ತಿ, ರಾಷ್ಟ್ರಪ್ರೇಮ, ರಾಷ್ಟ್ರ ರಕ್ಷಣೆಯ ದೇದೀಪ್ಯಮಾನ ಪಣತೆ ಪ್ರಜ್ವಲಿಸಲಿ. ಜಗದ ರಂಗಸ್ಥಳದಿ ದಿವ್ಯ ತಪೋಭೂಮಿ ಭಾರತದ ಹಿರಿಮೆ ಜನಜನಿತವಾಗಲಿ. ಯೋಗ ಯಾಗಗಳ ಪುಣ್ಯ ಭೂಮಿ ಭರತಭೂಮಿಯು ಸಮೃದ್ಧಿಯ ಐಸಿರಿಯಿಂದ ಕಂಗೊಳಿಸಲಿ. ಶಿಕ್ಷಣವು ಮನುಕುಲವನ್ನು ಉದ್ಧರಿಸಲಿ. ಅನವರತ ಕಾಪಾಡಲಿ. ಔನ್ನತ್ಯಕ್ಕೇರಿಸಲಿ. ಭವಿಷ್ಯದಲ್ಲಿ ನವ ಭಾರತ ಪ್ರಖರ ಓಜಸ್ಸಿನೊಂದಿಗೆ, ತೇಜಸ್ಸಿನೊಂದಿಗೆ ಬೆಳಗುತ್ತಿರಲಿ.
ಭಾರತೀಯತೆಯ ಅನನ್ಯತೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ತರ ಕರ್ತವ್ಯವನ್ನು ನಾವೆಲ್ಲ ಸಮರ್ಥವಾಗಿ ನಿಭಾಯಿಸೋಣ. ಸಂಸ್ಕೃತಿಯ ಮಹಾನದಿ ಅವಿರತವಾಗಿ ಪ್ರವಹಿಸುತ್ತಿರಲಿ. ತಾಯಿ ಭಾರತಿಯ ಚರಣಾರವಿಂದಗಳಿಗೆ ಪೊಡಮಡುತ್ತ, ಅಭಿವಂದಿಸುತ್ತ, ನಮ್ಮ ಪೂರ್ವಿಕರು ನಮಗೆ ಬಳುವಳಿಯಾಗಿ ನೀಡಿದ ಸಂಸ್ಕಾರದ ನಿಧಿಯನ್ನು ಚಿರಂತನವಾಗಿಸೋಣ. ಸಂಸ್ಕೃತಿಯ ಉಳಿವಿನ ಮಹಾಕೈಂಕರ್ಯಕ್ಕೆ ಕಂಕಣಬದ್ಧರಾಗೋಣ ಎಂದು ಆಶಿಸುತ್ತ ಹಿಮಕಿರೀಟಿನಿ ಭಾರತಮಾತೆಗೆ ಪ್ರಣಾಮಗಳನ್ನು ಸಲ್ಲಿಸುತ್ತ ಈ ಪ್ರಬಂಧಕ್ಕೆ ಪೂರ್ಣವಿರಾಮವನ್ನು ನೀಡುತ್ತಿದ್ದೇನೆ.

By- ಶ್ರೀಮತಿ ಯಶಸ್ವಿನಿ ಶ್ರೀಧರ ಮೂರ್ತಿ

Leave a Reply

Your email address will not be published. Required fields are marked *