Poetry

ನೋವಿ’ನಲ್ಲಿ’!

ಊರ ಬೀದಿಯಲಿ
ವೃದ್ಧ ಕೊಳಾಯಿ
ಒಂದೇ ಸಮನೆ
– ಬಿಕ್ಕುತ್ತಿದೆ;
ನೇವರಿಸುವರಿಲ್ಲ,
ಕಣ್ಣೊರೆಸುವವರಿಲ್ಲ.

ಜನರ ತಾತ್ಸಾರಕೆ
ಕೊನೆಯುಂಟೇ..?
ನಿಂತು – ನೋಡಿಯೂ
ಹಾಗೇ ಸಾಗುತಿಹರು
ಕಂಡರೂ ಕಾಣದಂತೆ.
ಬಳಿ ಸುಳಿವರಾರಿಲ್ಲ.

ತನ್ನನ್ನೇ ಹಿಂಡಿಕೊಂಡು
ಸಿಹಿನೀರ ಕೊಟ್ಟದ್ದು,
ಬಳಲಿ ಬಂದವರ
ಆಸರು ನೀಗಿದ್ದು,
ಕಣ್ಣ ಮುಂದೆಯೇ ಇದೆ;
ನೊಂದು ನರಳಿದೆ ‘ನಳ’

ಇದರ ಕಥೆ ಮುಗಿಯಿತು
ಬದಲಾಯಿಸ ಬೇಕು –
ಎಂಬುದಷ್ಟೇ ಕೇಳಿಸಿತು,
ಕಣ್ಣಂಚಿನ ಕೊನೆಯಹನಿ
ಉರುಳುವಾಗ ಕೊರಳ ಸೆರೆ
ಉಬ್ಬಿಬಂತು – “ಜನ ಮರೆತರೇ”?

ನಾಳೆ ಇದೇ ದಾರಿಯಲಿ
ನಡೆದು ಬರುವಾಗ
ಕಾಣಬಹುದು ಹೊಸದು,
ನಳ – ನಳಿಸುವ ನಲ್ಲಿ;
ಆದರೆ ಇದೆಲ್ಲಿ –
ಬಿಕ್ಕುತಿರುವುದೋ ನೋವಿ’ನಲ್ಲಿ’?

– ಗುರುಪ್ರಸಾದ ಹೆಗಡೆ

ಫೋಟೋ ಕೃಪೆ: ಗಿರೀಶ ಹೆಗಡೆ
ಫೇಸ್ಬುಕ್ ಪೇಜ್: Hegde Photography (ಲೈಕ್ ಮಾಡಿ!)

Leave a Reply

Your email address will not be published. Required fields are marked *