Article

ರಾಷ್ಟ್ರ ಕಂಡ ಧೀಮಂತ ಭಾರತ ರತ್ನ

ಈ ರಾಜಕೀಯದಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರೆಂದು ಸುಲಭವಾಗಿ ಹೇಳಲು ಅಸಾಧ್ಯ. ಅಂತಹುದರಲ್ಲಿ ಇವರನ್ನು ದೇಶವಲ್ಲ ಈಡಿ ರಾಷ್ಟ್ರವೇ ಹೊಗಳಿ ಕೊಂಡಾಡಿದೆ. ಇವರು ಎಂತಹ ಪರಿಸ್ಥಿತಿ ಬಂದರು ತಮ್ಮ ಪ್ರಾಮಾಣಿಕತೆ, ಸಜ್ಜನತೆ ಬಿಡದ ಮಹಾನ್ ನಾಯಕ. ದೇಶಕ್ಕಾಗಿ ದೃಡ ನಿರ್ಧಾರವನ್ನು ತೆಗೆದುಕೊಂಡ ಒಬ್ಬ ರಾಷ್ಟ್ರ ಕಂಡ ಧೀಮಂತ ನಾಯಕ. ದೇಶದ ಕಷ್ಟಕ್ಕೆ ತಮ್ಮ ಸಂಬಳವನ್ನೆ ಧಾರೆ ಎರೆದ ಮೇರು ವ್ಯಕ್ತಿತ್ವ ಇವರದ್ದು. ಅವರು ಬೇರೆ ಇನ್ಯಾರು ಅಲ್ಲ “ಜೈ ಜವಾನ್ ಜೈ ಕಿಸಾನ್” ಎಂಬ ಘೋಷ ವಾಕ್ಯವ ಘೋಷಿಸಿದ “ಲಾಲ್ ಬಹದ್ದೂರ್ ಶಾಸ್ತ್ರಿ”ಅಕ್ಟೋಬರ್ 02 1904ರಂದು ತಮ್ಮ ಜೀವನದ ಪ್ರತಿ ಉಸಿರಿನಲ್ಲೂ ‘ರಾಷ್ಟ್ರ ರಾಷ್ಟ್ರ’ ಎಂದೂ ಸ್ಮರಿಸಿ ರಾಷ್ಟ್ರಕ್ಕಾಗಿಯೇ ತಮ್ಮ ಉಸಿರನ್ನೇ ಸಮರ್ಪಿಸಿದ ಲಾಲ್ ಬಹದ್ದೂರ್ ಶಾಸ್ತ್ರಿಜೀಯವರ ಜನನ ಉತ್ತರಪ್ರದೇಶದ ಮುಘಲ್ಸರೈ ನಲ್ಲಿ ಆಯಿತು. ಶಾರದಾಪ್ರಸಾದ ಹಾಗೂ ರಾಮದುಲಾರಿ ದೇವಿ ದಂಪತಿಗಳ ಮಗನಾದ ಇವರು ವಾರಣಾಸಿ ಮತ್ತು ರಾಮನಗರದಲ್ಲಿ ವಿದ್ಯಾಭ್ಯಾಸ ಮುಗಿಸಿದರು. 1926 ರಲ್ಲಿ ಇವರಿಗೆ ಕಾಶಿ ವಿದ್ಯಾಪೀಠದಿಂದ “ಶಾಸ್ತ್ರಿ” ಎಂಬ ಬಿರುದು ಕೊಡಲ್ಪಟ್ಟಿತು. 1927 ರಲ್ಲಿ ಇವರ ವಿವಾಹ ಇವರ ಹಳ್ಳಿಯ ಪಕ್ಕದ ಮಿರ್ಜಾಪುರದ ಲಲಿತಾದೇವಿಯೊಂದಿಗೆ ಆಯಿತು.

ಭಾಲಗಂಗಾದರ ತಿಲಕರು ವಾರಣಾಸಿಗೆ ಭೇಟಿ ನೀಡಿ ಸ್ವಾತಂತ್ರ್ಯ ಕ್ಕೆ ಕರೆ ಕೊಟ್ಟು “ಸ್ವರಾಜ್ಯ ನಮ್ಮ‌ ಜನ್ಮಸಿದ್ದ ಹಕ್ಕು” ನಾವು ಅದನ್ನು ಪಡೆದೆ ತೀರುತ್ತೇವೆ. ಎಂದು ಮಾಡಿದ ಪ್ರತಿಜ್ಞೆಯನ್ನು ಕೇಳಿ ಚಿಕ್ಕಂದಿನಲ್ಲೇ ದೇಶಪ್ರೇಮವನ್ನು ಹೊಂದಿದ್ದ ಶಾಸ್ತ್ರಿಯವರಿಗೆ ಮತ್ತಷ್ಟು ಪುಟಿದೇಳಲು ಕಾರಣವಾಯಿತು.  ಒಟ್ಡು 9ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ  ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗೃಹ ಚಳುವಳಿ ಪ್ರಾರಂಭವಾದ ನಂತರ 1946 ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.1946 ರಲ್ಲಿ ಕಾಂಗ್ರೆಸ್ ಸರಕಾರ ರಚನೆಯಾದಾಗ ಇವರನ್ನು ಉತ್ತರಪ್ರದೇಶದ ಸಂಸದೀಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಸ್ವಾತಂತ್ರ್ಯಾನಂತರ ಪೋಲಿಸ್ ಖಾತೆಯನ್ನು ವಹಿಸಿಕೊಂಡರು. ಲೋಕಸಭೆಗೆ ಜನರಲ್ ಸೆಕ್ರೆಟರಿ ಆಗಿ 1951 ರಲ್ಲಿ ಆಯ್ಕೆಯಾದರು. ಇವರು ರೈಲ್ವೆ ಖಾತೆಯನ್ನು ನಿರ್ವಹಿಸಿದ್ದರು.

ಇಂದಿನ ರಾಜಕಾರಣಿಗಳು ತಮ್ಮ ಮೇಲೆ ನೂರೆಂಟು ಪ್ರಕರಣಗಳಿದ್ದರು ತಮ್ಮ ಖಾತೆಯನ್ನು ಬಿಡುವುದಿಲ್ಲ. ಆದರೆ ಅಂದು ‘ಅರಿಯಳರೂ’ ಎಂಬ ಊರಿನ ಬಳಿ ಆದ ರೈಲ್ವೆ ದುರಂತದ ಹಿನ್ನೆಲೆಯಲ್ಲಿ ರೈಲ್ವೆ ಮಂತ್ರಿಯಾಗಿದ್ದ ಶಾಸ್ತ್ರಿಯವರು ತಮ್ಮ ಖಾತೆಗೆ ರಾಜೀನಾಮೆಯನ್ನು ನೀಡಿದ ಮೇರು ವ್ಯಕ್ತಿತ್ವದ ಮನುಜ. 1961 ರಲ್ಲಿ ಗೃಹಮಂತ್ರಿಯಾದರು. 1964 ರಲ್ಲಿ  ನೆಹರು ಅವರು ಮರಣಹೊಂದಿದರು. ಕಾಂಗ್ರೆಸ್ ನ ಕೆಲವು ಪ್ರಮುಖರಿಗೆ ಬೇಕಾದಷ್ಟು ಬೆಂಬಲ ಸಿಗದ ಕಾರಣ ತುಂಬಾ ಸರಳರು ಮತ್ತು ಅಧಿಕಾರ ದಾಹಿಯೇ ಅಲ್ಲದ ಲಾಲ್ ಬಹದ್ದೂರರಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಅದೇ ವರ್ಷ ಜೂನ್ 09 ರಂದು ಭಾರತದ ಪ್ರಧಾನಿಯಾದರು.ಅಂದು ಅವರು ಪ್ರಧಾನಿಯಾದ ಕಾಲದಿಂದ ಸರಿಸುಮಾರು ಇಲ್ಲಿಯವರೆಗೂ ಪ್ರಮುಖ ಸಮಸ್ಯೆ ಪಾಕಿಸ್ತಾನವೇ ಆಗಿದೆ. ಅಂದು ಕಚ್ ಬಳಿ ನಡೆದ ಯುದ್ದ ಯು.ಎನ್ ಮದ್ಯಸ್ಥಿಕೆಯಿಂದ ನಿಂತಿತು. ಆದರೂ ಜಮ್ಮು ಕಾಶ್ಮೀರ ಯುದ್ದವೂ ಆರಂಭವಾಯಿತು. ಭಾರತ ಪಾಕಿಸ್ತಾನ ಎರಡನೇ ಯುದ್ದದಲ್ಲಿ ಭಾರತವೂ ಲಾಹೋರ್ ತಲುಪಿತು. ಅನಂತರ ಶಾಂತಿ ಒಪ್ಪಂದವಾಯಿತು.

ಜನವರಿ 10 1966 ರಂದು ಶಾಸ್ತ್ರಿಜೀ ಹಾಗೂ ಪಾಕಿಸ್ತಾನಿ ಎದುರಾಳಿ ಆಯೂಬ್ ಖಾನ್ ಅವರು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದರು.  ಒಪ್ಪಂದಕ್ಕೆ ಸಹಿಹಾಕಿದ ನಂತರ ಜನವರಿ 11 ರಂದು ಲಾಲ್ ಬಹದ್ದೂರರ ನಿಗೂಢ ಸಾವಾಯಿತು. ಅದು ಸಹಜ ಸಾವಲ್ಲ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೂ  ಅಂದಿನಿಂದ ಇಂದಿನವರೆಗೂ ಅವರ ಸಾವು ನಿಗೂಢವಾಗೆ ಉಳಿದಿದೆ. ಅಂದಿನ ಸರಕಾರವು ಕೂಡ ಅತಿಯಾಗಿ ಮುತುವರ್ಜಿಯಿಂದ ತನಿಖೆಯನ್ನು ಮಾಡುವ ಕೆಲಸಕ್ಕೆ ಹೋಗಲಿಲ್ಲ.  ಅಂದಿಗೆ ಭಾರತ ಕಂಡ ಒಬ್ಬ ಶ್ರೇಷ್ಠ, ಸಜ್ಜನ ವ್ಯಕ್ತಿಯ ಅಂತ್ಯವಾಯಿತು. ತಮ್ಮ ಬದುಕಿನ ಪ್ರತಿ ಉಸಿರಿನಲ್ಲೂ ‘ರಾಷ್ಟ್ರ ರಾಷ್ಟ್ರ’ ಎಂದು ರಾಷ್ಟ್ರಕ್ಕಾಗಿಯೇ ಪರರಾಷ್ಟ್ರದಲ್ಲಿ ಮರಣವಪ್ಪಿದ ಮೋದಲ ಪ್ರಧಾನಿ.

ಶಾಸ್ತ್ರಿಜೀ ಅವರು ಭಾರತವನ್ನು ಸ್ವಾಭಿಮಾನಿ ದೇಶವನ್ನಾಗಿಸುವಲ್ಲಿ ತುಂಬಾ ಶ್ರಮಿಸಿದ್ದಾರೆ. ಒಮ್ಮೆ ದೇಶದಲ್ಲಿ ಬರಗಾಲ ಬಂದಿತು. ಆಗ ಹೋರದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಆಗ ಸಾಲದ ಭಾರ ಅಧಿಕವಾಯಿತು. ಇದನ್ನು ಕಂಡ ಶಾಸ್ತ್ರಿಜೀಯವರು ವಾರದಲ್ಲಿ ಒಂದು ದಿನ ಊಟವನ್ನು  ಬಿಟ್ಟರೆ ಎಷ್ಟು ಆಹಾರ ಸಂಗ್ರಹವಾಗುತ್ತದೆಂದು ಲೆಕ್ಕಾಚಾರ ಹಾಕಿ ಸೋಮವಾರ ರಾತ್ರಿ ಊಟವನ್ನು ತ್ಯಜಿಸಲು ಈಡಿ ದೇಶಕ್ಕೆ ಕರೆ ನೀಡೊದರು. ಸ್ವತಹಃ ತಾವೂ ಸಹ ಉಪವಾಸವನ್ನು  ಮಾಡಿದರು. ಅದು ಶಾಸ್ತ್ರಿ ಸೋಮವಾರವೆಂದೆ ಪ್ರಚಲಿತವಾಯಿತು. ಇದೊಂದು ಶಾಸ್ತ್ರಿಯವರ ಸ್ವಾಭಿಮಾನಕ್ಕೆ, ಆಡಳಿತ ದಕ್ಷತೆಗೆ ಒಂದು ನಿದರ್ಶನ.ಅಂತಹ ಒಬ್ಬ ಅತ್ಯುನ್ನತ ವ್ಯಕ್ತಿ. ಆಡಳಿತ ವ್ಯವಸ್ಥೆಗೆ ಕಿಂಚಿತ್ತು ಕುಂದುಂಟು ಬರದಂತೆ ನಡೆಸಿದ ಮಹಾನ್ ವ್ಯಕ್ತಿ. ಆಡಳಿತ ಮಾಡಿದ್ದು ಕ್ಷಣಿಕ ಕಾಲವಾದರು ಎಲ್ಲರ ಮನಸಲ್ಲಿ ಅಚ್ಚಳಿಯಾಗಿ ಉಳಿದರು.

ಅಂತಹ ವ್ಯಕ್ತಿಗೆ 1966 ರಲ್ಲಿ ಮರಣೋತ್ತರ “ಭಾರತರತ್ನ” ವನ್ನು ಪ್ರಧಾನಮಾಡಿದ್ದಾರೆ. ಇವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಿ ಗೌರವಿಸಲಾಯಿತು.

ಅವರ ಬಗ್ಗೆ ಹೇಳಿದಷ್ಟು ಮುಗಿಯದು.

*ಹಲವಾರು ಮಾಹಿತಿಗಳಿಂದ ಸಂಗ್ರಹಿಸಿದ ಮಾಹಿತಿ..

“ಬದುಕಿದ ಪ್ರತಿಕ್ಷಣವೂ ರಾಷ್ಟ್ರ ರಾಷ್ಟ್ರ ಎಂದು ಜಪಿಸಿದ
ರಾಷ್ಟ್ರಕ್ಕಾಗಿ ತನ್ನ ಸಂಬಳವನ್ನು ತ್ಯಜಿಸಿದ
ಭಾರತವ ಸ್ವಾಭಿಮಾನಿಯಾಗಿಸಿದ
ಶಾಸ್ತ್ರಿಜೀಯವರಿಗೆ ಸಲ್ಲಿಸುವೆ ನನ್ನದೊಂದು  ನಮನ”

Leave a Reply

Your email address will not be published. Required fields are marked *