Article

ಭವ್ಯ ಭಾರತೀಯ ಸಂಸ್ಕೃತಿ- 2

ಬದುಕನ್ನು ರೂಪಿಸುವ ಸಂಸ್ಕೃತಿ ಹಾಗೂ ಸಂಸ್ಕಾರದ ಬೇರು ಭರತ ಖಂಡದ ಭಾರತದೇಶ. ಹರಿವ ಗಂಗೆ, ಹರಿದ್ವರ್ಣದ ಪಶ್ಚಿಮಘಟ್ಟ, ಭೋರ್ಗರೆವ ಜಲಪಾತ, ಮೂರ್ದಿಶೆಗಳನ್ನು ಆವರಿಸುವ ಸಾಗರಗಳು, ವಿದ್ಯಾಕಾಶಿಯ ಕಾಶ್ಮೀರ, ಹಿಮಾವೃತದ ಹಿಮಾಲಯ, ಸುಡುವ ಮರುಳುಭೂಮಿ, ಕರೆವ ಕಡಲತೀರ, ನೂರೆಂಟು ಭಾಷಾ-ಭಾವವೈವಿಧ್ಯ, ಪಶು, ಪಕ್ಷಿ, ಸರೀಸೃಪಗಳ ವಿವಿಧತೆ, ಜನ-ನಾಡು-ನುಡಿಯ ಮನೋಜ್ಞತೆಯ ಒಟ್ಟೂ ಹೆಸರು ಭಾರತ.

ಚಿಗುರೊಡೆದು ಗಿಡವಾಗಿ,ಮರವಾಗಿ ಹಮ್ಮುವ ಬೀಜಕ್ಕೆ ಅಗೋಚರ ಶಕ್ತಿಯೊಂದು ಅದಮ್ಯ ಚೇತನವನ್ನು ಎರಕ ಹೊಯ್ದಿರಬಹುದೆಂಬುದು ಭಾರತೀಯರ ನಂಬಿಕೆ. ಬೆಳೆವ ಬೀಜಕ್ಕೆ ಮರವಾಗಿ ನೆರಳು ನೀಡಬೇಕೆಂಬ ಸಂಸ್ಕಾರ, ಸಂಸ್ಕೃತಿ ಹುಟ್ಟಿನಿಂದಲೇ ಬಂದೊದಗಿರುತ್ತದೆ. ಮರಗಳಿಗೇ ಇರಬಹುದಾದ ಈ ಸಂಸ್ಕಾರ ಸ್ವಸ್ಥ ಜೀವನದ ಕನಸು ಕಾಣುವ, ಸಾಮರಸ್ಯ ಸಮಾಜದಲ್ಲಿ ಬೆಳೆಯುವ ಮನುಜ ಪ್ರಾಣಿಗಳಲ್ಲಿ ಅಡಗಿಹುದಿಲ್ಲವೇ? ಆ ಸಂಸ್ಕಾರದ ತಳಪಾಯ ಸಂಸ್ಕೃತಿಯೆಂಬ ಪಾರಂಪರಿಕ ಹಾಗೂ ಪಾವಿತ್ರ್ಯತೆಯ ಹೆಮ್ಮರದಿಂದ. ವೇದ, ಪುರಾಣ, ಉಪನಿಷತ್ತುಗಳೆಂಬ ಭವ್ಯತೆಗಳಿಂದ.

ಭರತ ಭೂಮಿಯ ಕಾವ್ಯಗಳ ಪ್ರಕಾರ ಸಂಸ್ಕೃತಿಯೆಂಬುದೊಂದು ಜೀವನದ ವಿಧಾನ. ಪಶ್ಚಿಮ ದೇಶಗಳ ‘Culture’ ಹಾಗೂ ಭಾರತದ ಸಂಸ್ಕೃತಿಯೆಂಬುದು ಸಮತೆರನಾದುದಲ್ಲ. ಭಾರತೀಯ ಸಂಸ್ಕೃತಿಯೆಂಬುದು ಬದುಕು ತಂದೊಡ್ಡುವ ಸಾವಿರಾರು ಕ್ಲೇಷಗಳ ಮಧ್ಯೆಯೂ ಸ್ವಾಸ್ತ್ಯವಾಗಿ ಜೀವನ ನಡೆಸುವ ವಿದ್ಯೆ ಹಾಗೂ ವಿಧಾನದ ಸಮಾಗಮ. ಬಾಹ್ಯ ಉನ್ನತಿ ಹಾಗೂ ಆಂತರಿಕ ಔನ್ನತಿಯ ಒಟ್ಟೂ ಮೊತ್ತ ಭಾರತೀಯ ಸಂಸ್ಕೃತಿ. ಬದುಕು ಬಂದ ಹಾಗೆ ಸ್ವೀಕರಿಸುವ ಜೊತೆಗೆ ನಮ್ಮದೇ ಒಂದು ಧರ್ಮದ ಚೌಕಟ್ಟಿನಲ್ಲಿ ತಪ್ಪು ಒಪ್ಪುಗಳ ಸಮಾಗಮದಲ್ಲಿ ಬದುಕನ್ನು ರೂಪಿಸುವ ಲೇಖನಿ ಸಂಸ್ಕೃತಿಯೆಂಬುದು.

ಸಂಸ್ಕೃತಿಯೆಂಬುದರ ಮೂಲ ತಿರುಳು ಸ್ವಸ್ಥ ಸಮಾಜ ಹಾಗೂ ಸ್ವಸ್ಥ ವ್ಯಕ್ತಿತ್ವ ನಿರ್ಮಾಣ. ವಿಶ್ವ ಆರೋಗ್ಯ ಸಂಸ್ಥೆಯ ಅಧೀನತೆಯಲ್ಲಿ ಸ್ವಸ್ಥ ಪದದ ಅರ್ಥ ಆರೋಗ್ಯಕ್ಕೆ ಸಂಬಂಧಿಸಿದ್ದು ಮತ್ತು ಬಾಹ್ಯ ದೇಹದ ಆರೋಗ್ಯಕ್ಕೆ ಜಾಸ್ತಿಯಾಗಿ ಒತ್ತನ್ನು ನೀಡುವಂತಹದ್ದು. ಆದರೆ, ಭಾರತೀಯ ಸಂಸ್ಕೃತಿಯ ಕುರುಹಾದ ಆಯುರ್ವೇದ ಸಾಹಿತ್ಯ ಬೋಧಿಸುವುದು:

ಸಮದೋಷ, ಸಮಾಗ್ನಿಶ್ಚ, ಸಮಧಾತುಃ, ಮಲಕ್ರಿಯಃ|
ಪ್ರಸನ್ನಾತ್ಮೇಂದ್ರಿಯಮನಃ ಸ್ವಸ್ಥ ಇತ್ಯಭಿಧೀಯತೆ||

ದೇಹದ ಸಪ್ತಧಾತುಗಳು, ತ್ರಿಗುಣಗಳು, ವಿರೇಚನಾದಿ ಕ್ರಿಯೆಗಳು ಸರಿಯಾದ ಕ್ರಿಯೆಯಲ್ಲಿ ನಡೆದು, ಜೊತೆಯಲ್ಲಿ ಇಂದ್ರಿಯ, ಆತ್ಮ ಹಾಗೂ ಮನಸ್ಸೂ ಸಹ ಪ್ರಸನ್ನತೆಯಿಂದ ಪ್ರಫುಲ್ಲವಾಗಿರುವುದನ್ನು ಸ್ವಸ್ಥ ಎಂಬುದಾಗಿ ವಿವರಿಸುತ್ತದೆ. ಈ ವಿಷಯಗಳಲ್ಲಿ ಯಾವುದಾದರೂ ಒಂದು ಆಚೀಚೆಯಾದರೂ ಜೀವನ ವಿಧಾನದಲ್ಲಿ ಏರುಪೇರು ಕಾಣಬಹುದು. ಅಂತಹ ಏರುಪೇರುಗಳನ್ನು ಸಮದೂಗಿಸುವುದಕ್ಕಾಗಿ ರೂಪುಗೊಂಡಿದ್ದು ಆಚಾರ.
ಪಂಚೇಂದ್ರಿಯಸ್ಯ ದೇಹಸ್ಯ ಬುದ್ಧೇಶ್ಚ ಮನಸ ಸ್ತಥ|
ದ್ರವ್ಯದೇಶ ಕ್ರಿಯಾಣಾಂಚ ಶುದ್ಧಿಃ ಆಚಾರಯಿಷ್ಯತೇ||

ಆಚಾರವೆಂಬುದು ಬಾಹ್ಯಾಂತರ್ಯ ಶುದ್ಧಿ. ವೈಜ್ಞಾನಿಕ ನಿಟ್ಟಿನಲ್ಲಿ ದೇಹವೆಂಬುದು ಅವಯಗಳ ಸಂಘಾತ. ಆದರೆ, ಅದೇ ದೇಹವೆಂಬುದು ಭಾರತೀಯರಿಗೆ ಈಶ್ವರ ಪ್ರೇರಣೆಯ ಕುರುಹು. ಹುಟ್ಟು ಸಾವುಗಳ ಮಧ್ಯದಲ್ಲಿನ ಜೀವನವನ್ನು ಅನುಭಾವಿಸಿ ಅನುಭವಿಸುವ ಯೋಗಭೋಗಗಳೊಂದಿಗೆ ಆತ್ಮದಿಂದ ಕೂಡಿದ ಶ್ರೇಷ್ಠತಮವಾದ ಆಶ್ರಯವೆಂಬುದು ಶರೀರ.. “ಈಶ್ವರ ಪ್ರೇರಿತ ಚೇಷ್ಠಾಶ್ರಯಃ ಆತ್ಮನಃ ಯೋಗಭೋಗಾಯತನಂ ಶರೀರಂ”.

ಭಾರತೀಯ ಸಂಸ್ಕೃತಿಯ ಪರಂಪರೆಗೆ ಕಾಲಘಟ್ಟದ ಅವಶ್ಯಕತೆಯೂ ಇರುವುದಿಲ್ಲವೇನೋ. ಅನಾದಿ ಕಾಲದಿಂದ ಅನಂತದವರೆಗೆ ಮಿಹಿರರಶ್ಮಿಯ ಹೊಳಪಿನಿಂದ ಹೊಮ್ಮುವ ಅಗಾಧತೆಯದು. ಆಧ್ಯಾತ್ಮವೆಂಬುದು ಸಂಕೀರ್ಣ ವಿಷಯವಸ್ತು ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತಳವೂರದು ಎಂಬುದನ್ನು ಧ್ವನಿಯಾಗಿಸುವ ಮೊದಲು ಅದರಒಳ ಹೊರಗನ್ನೊಮ್ಮೆ ಇಣುಕಿ ನೋಡಬೇಕು. ಭಾರತೀಯ ಸಂಸ್ಕೃತಿ ಆಧ್ಯಾತ್ಮದೊಂದಿಗೆ ಲೌಕಿಕದ ವಾಸ್ತವವನ್ನು ಅಷ್ಟೇ ನಿಖರವಾಗಿ ಬಿಂಬಿಸುತ್ತದೆ. ಧರ್ಮಾರ್ಥ ಕಾಮ ಮೋಕ್ಷವೆಂಬ ಚತುರ್ಪುರುಷಾರ್ಥಗಳಲ್ಲಿ ಅರ್ಥ ಹಾಗೂ ಕಾಮವೆಂಬುದು ಲೌಕಿಕವಲ್ಲವೇ? ಅದನ್ನು ಹೊರತು ಪಡಿಸಿ ಯಾವ ಮನುಜನೂ ಸಹ ಜೀವನದ ಪರಮೋಚ್ಚ ಗುರಿಯಾದ ಮೋಕ್ಷವನ್ನು ಪಡೆಯಲಾರ. ಮೋಕ್ಷದ ಹಾದಿಯಲ್ಲಿ ಜೀವನದ ಪಾಠವನ್ನು, ಪಥವನ್ನು ಜಗತ್ತಿಗೆ ಸಾರಿದಂತಹ ಏಕೈಕ ರಾಷ್ಟ್ರ ಭಾರತ. ಧರ್ಮದ ಚೌಕಟ್ಟಿನಲ್ಲಿ ಭದ್ರವಾದ ಬುನಾದಿಯನ್ನು ಜೀವನಕ್ಕೆ ಹಾಕಿಕೊಟ್ಟಿದ್ದು ಭಾರತೀಯ ಪರಂಪರೆ ಹಾಗೂ ಸಂಸ್ಕೃತಿ. ಇಡೀ ವಿಶ್ವವೇ ಅಪ್ಪಿ ಒಪ್ಪುವ ಭಗವದ್ಗೀತೆ ಎಂಬ ಮಹಾಕಾವ್ಯ ಸಂಸ್ಕೃತಿಯೊಂದರ ಅಸ್ಮಿತೆಯಲ್ಲವೇ? ಧರ್ಮಗ್ರಂಥಗಳದೆಷ್ಟೇ ಇದ್ದರೂ ಜಗತ್ತಿನ ಪ್ರತಿ ಮೂಲೆಯಲ್ಲೂ ಗೀತೆಯೊಂದಕ್ಕಿರುವ ಮನ್ನಣೆ, ಪ್ರಾಶಸ್ತ್ಯಗಳು ಅದ್ವಿತೀಯ ಹಾಗೂ ಅಜರಾಮರ. ಅಂತಹ ಪರಿಪಕ್ವ ಪರಿಕರಗಳನ್ನು, ಜ್ಞಾನದ ಹೊಳೆಯನ್ನು ಹರಿಸಿದ್ದು ಭಾರತೀಯ ಸಂಸ್ಕೃತಿ.

ಪಾಶ್ಚಿಮಾತ್ಯ ಸಂಸ್ಕೃತಿಯೆಂಬುದು ವಸ್ತುಕೇಂದ್ರಿತ. ಆದರೆ, ಭಾರತೀಯ ಸಂಸ್ಕೃತಿ ಆಧ್ಯಾತ್ಮ ಕೇಂದ್ರಿತ. ಮಗುವಾಗಿ ಬೆಳೆದಾಗಿನಿಂದ ನಮ್ಮ ರುಧಿರನಾಡಿಯಲ್ಲಿ, ನಡೆವ ನುಡಿಯಲ್ಲಿ, ಕಾಣುವ ಕಲ್ಲಿನಿಂದ ಹಿಡಿದು ಎಣಿಸಲಾಗದ ತಾರಾಮಂಡಲದವರೆಗೂ ಎಲ್ಲವನ್ನೂ ಎಲ್ಲರನ್ನೂ ಆರಾಧ್ಯ ಭಾವದಿಂದ, ಪೂಜನೀಯದಿಂದ ಕಾಣುತ್ತೇವೆ. ಪ್ರತಿಯೊಂದು ಜೀವಕಣದಲ್ಲೂ ದೈವತ್ವ ಕಾಣುವ ದೈವದತ್ತ ಮನೋಭಾವ. ಪರಿಸರವಿರುವುದು ಆರಾಧಿಸಲು ಎಂಬ ಧ್ಯೇಯ. ಪರಿಸರದಲ್ಲಿ ನಾವೂ ಒಂದು ಭಾಗ ಎಂದು ಭಾವಿಸುವಾಗ ಪರಿಸರ ನಾಶವನ್ನು ಯಥೇಚ್ಛವಾಗಿ ಮಾಡಲು ಮನವೂ ಹಿಂಜರಿಯುತ್ತದೆ. ಆದರೇ, ಪಾಶ್ಚಾತ್ಯ ಸಂಸ್ಕೃತಿಯ ಪ್ರಕಾರ ಪರಿಸರವಿರುವುದೇ ನಮಗಾಗಿ ಹಾಗೂ ಅದರಿಂದ ಉಪಯೋಗವನ್ನು ಪಡೆದುಕೊಳ್ಳುವುದು ಸಮ್ಮತವೆಂಬ ಮನೋಭಾವನೆ ನಿಸರ್ಗ ನಾಶಕ್ಕೆ ಯಾವುದೇ ತಡೆಗೋಡೆಯನ್ನೊಡ್ಡುವುದಿಲ್ಲ. ಭಾರತೀಯ ಸಂಸ್ಕೃತಿಯನ್ನು, ಭಾರತವನ್ನು ವಿಶ್ವಗುರು ಎಂಬ ಕಿರೀಟದಿಂದ ವಿಜ್ರಂಭಿಸಿದರೆ ಅತಿಶಯೋಕ್ತಿಯಾಗದು.

ನಮ್ಮ ಸಂಸ್ಕೃತಿಯ ಅಸ್ತಿತ್ವಕ್ಕೆ ಅಸ್ಮಿತೆಗಳಾಗಿ ಹೇರಳವಾಗಿ ಉಳಿದಿರುವುದು ಸಾಹಿತ್ಯ ಹಾಗೂ ಗುಡಿ ಗೋಪುರಗಳು. ತಮಿಳುನಾಡಿನ ತಂಜಾವೂರಿನಲ್ಲಿರುವ ಬ್ರಹದೇಶ್ವರ ದೇವಸ್ಥಾನದ ನೆರಳು ವಸುಧೆಯ ಮಡಿಲನ್ನು ಎಂದಿಗೂ ತಾಕುವುದಿಲ್ಲ. ಶಿಲ್ಪಕಲೆಯ ಅದ್ವಿತೀಯ ರಚನೆಯದು, ಹಾಗೂ ಸಂಸ್ಕೃತಿಯೆಂಬುದರ ಸ್ಮಾರಕ. ಮಂತ್ರ, ಜಪ, ತಪಗಳಲ್ಲಿನ ಅನೂಹ್ಯ ಶಕ್ತಿಯನ್ನು ಇಂದು ಇಡೀ ವಿಶ್ವವೇ ಒಪ್ಪುತ್ತದೆ. ವೈಜ್ಞಾನಿಕ ಬುನಾದಿಯಿಂದಲೂ ಶ್ಲಾಘನೀಯವಾದ ಮಂತ್ರ ಶಕ್ತಿ ಹೊಮ್ಮುವುದು ಕಂಪನಗಳ ಆವರ್ತನದ ಬದಲಾವಣೆಯಿಂದ. ಮನುಷ್ಯನ ದೇಹವು ಸಪ್ತಚಕ್ರಗಳಿಂದ ಮಿಳಿತವಾಗಿರುವಾಗ ಪ್ರತಿ ಕಂಪನವೂ ಅದರದೇಯಾದಂತಹ ಆವರ್ತನವನ್ನು ಹೊಮ್ಮಿಸಿ ದೇಹದ ಹಾಗೂ ಮನೋಬಲದ ದ್ವಿಗುಣತೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ. ಸಾತ್ತ್ವಿಕ ಆಹಾರದ ನೋಟವನ್ನು ಪ್ರತಿಯೊಂದು ಸಾಧಕ ಬಾಧಕಗಳೊಂದಿಗೆ ಜಗತ್ತಿಗೆ ನೀಡಿದ್ದು ಭಾರತ. ಸ್ವಾಸ್ತ್ಯ ಬದುಕಿನ ಸುವಿಚಾರಗಳಲ್ಲಿ ಇದೂ ಒಂದು. ಜಗತ್ತಿನ ಪ್ರತೀ ಮನುಷ್ಯನು ಒಪ್ಪಿ ಅಪ್ಪುತ್ತಿರುವ ಯೋಗ, ಭಾರತೀಯ ಪರಂಪರೆಯ ಕೊಡುಗೆ. ಜೀವನ ವಿಧಾನವನ್ನು ಕಲಿಸುತ್ತಿದೆಯಲ್ಲ ಭಾರತೀಯ ಸಂಸ್ಕೃತಿ, ಜಗತ್ತಿನಾದ್ಯಂತ!
‘ಕೃಣ್ವಂತೋ ವಿಶ್ವಮಾರ್ಯಂ’ ಎಂಬುದು ಭಾರತೀಯ ಸಂಸ್ಕೃತಿಯ ಧ್ಯೇಯೋಕ್ತಿ. ವಿಶ್ವದ ಪ್ರತಿಯೋರ್ವ ಮನುಜನನ್ನು ಆರ್ಯರನ್ನಾಗಿಸುವ ಉದ್ದೇಶ. ಆರ್ಯನೆಂದರೆ ಸದ್ಗುಣ, ಸುಶೀಲ ವ್ಯಕ್ತಿತ್ವವನ್ನಾಗಿಸುವುದು, ಜಾತಿ, ಮತ, ಧರ್ಮಗಳ ಹಂಗಿಲ್ಲದೆ. ವಸುದೈವ ಕುಟುಂಬಕಮ್ ಎಂದು ಸಾರುವ ನಮಗೆ, ನಮ್ಮ ಸಂಸ್ಕೃತಿಗೆ ಗಡಿಗಳ ಹಂಗೆಲ್ಲಿಹುದು.? ವೇದ, ಪುರಾಣ, ಉಪನಿಷತ್ತುಗಳು ಅಮೃತಧಾರೆಯನ್ನಾಗಿ ನೀಡಿದ ನುಡಿಮುತ್ತುಗಳಿವು.

ಕ್ಯಾಂಬೆಲ್ ಎಂಬಾತ, ೨೧ನೇ ಶತಮಾನದಲ್ಲಿ ಪ್ರಪಂಚಕ್ಕೆ ಭಾರತವೇ ಸಂದೇಶವನ್ನು ನೀಡುತ್ತದೆ ಎಂಬುದಾಗಿ ನುಡಿದಿದ್ದ. ಅಂತೆಯೇ, ಜಗತ್ತಿನ ದೊಡ್ಡಣ್ಣನೆಂದು ಕರೆಯಲ್ಪಡುವ ಅಮೆರಿಕಾದಲ್ಲಿ Spiritual anatomy, Spiritual psychology ಎಂಬ ಹಲವಾರು ವಿಷಯಗಳ ಬಗ್ಗೆ ಅಧ್ಯಯನ ನಡೆಯುತ್ತಿದ್ದು,ಅದರ ಫಲಿತಾಂಶದ ಪ್ರಕಾರ ಜೀವನದ ಪರಮೋಚ್ಚ ಸತ್ಯವನ್ನು ಬೋಧಿಸಿದ್ದು ಉಪನಿಷತ್ತುಗಳ ಋಷಿಗಳು ಎಂಬುದಾಗಿ. ಪಾಶ್ಚಾತ್ಯ ದೇಶಗಳಲ್ಲಿನ Great Depression ಎಂಬ ಕಾಯಿಲೆಗೋ, ಮನೋವ್ಯಾಧಿಗೋ ಔಷಧವೆಂಬಂತೆ ಗೋಚರವಾದದ್ದು ಭಾರತೀಯ ಕೌಟುಂಬಿಕ ವ್ಯವಸ್ಥೆ. ಅಲ್ಲಿಯ ಸಂಸ್ಥೆಗಳೇ ಭಾರತದ ಕುಟುಂಬ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡರೆ ಮನೋವ್ಯಾಧಿಗಳು ಗೌಣವಾಗುತ್ತದೆ ಎಂಬುದಾಗಿ ಒಪ್ಪಿಕೊಂಡಿವೆ. ಸಾಕಲ್ಲವೇ, ಭಾರತದ ಸಂಸ್ಕೃತಿಯ ಬೇರಿನ ವ್ಯಾಪಕತೆಯನ್ನರಿಯಲು?
ಭವ್ಯತೆಯೆಂಬುದು ವರ್ತಮಾನ ಹಾಗೂ ಭವಿಷ್ಯತ್ತಿನ ಸಮಾಗಮ. ಭವಿಷ್ಯತ್ತಿನ ಕನಸುಗಳಿಗೆ ವಾಸ್ತವದ ಜೀವನಶೈಲಿಯು ಮೆಟ್ಟಿಲಾಗುವಾಗ ಭಾರತೀಯ ಸಂಸ್ಕೃತಿಯ ಕೊಡುಗೆ ಅಪಾರವಾದುದು. ಈ ಎಲ್ಲ ಕಾರಣದಿಂದ ಭಾರತೀಯ ಸಂಸ್ಕೃತಿಯೆಂಬುದು ಸನಾತನ, ಸದಾತನ ಹಾಗೂ ನಿರಂತರ.ಜಗದ ಪ್ರತಿ ಮೌಢ್ಯತನಕ್ಕೂ, ಜಂಜಾಟಗಳಿಗೂ, ಕ್ಷಾಮಕ್ಕೂ, ಅಮಾನವೀಯತೆಯ ಕಾರ್ಯಗಳಿಗೂ, ಪ್ರತಿ ಪ್ರಶ್ನೆಗೂ ನಿಖರ ಉತ್ತರ ನೀಡಬಲ್ಲ ಸಂಸ್ಕೃತಿ ಭಾರತೀಯ ಸಂಸ್ಕೃತಿ. ತಮದ ಹಾದಿಯಲ್ಲಿ ಕಂದೀಲಾಗುವ ನಂದಾದೀವಿಗೆ.

By- ಕು.ಸಿಂಧೂರಾ ಹೆಗಡೆ

One Comment

Leave a Reply

Your email address will not be published. Required fields are marked *