ಅದೊಂದು ಕರಾಳ ರಾತ್ರಿ – ಒಂದು ಕನಸಿನ ಕಲ್ಪನೆಯ ಕಥೆ
ಅನುದಿನದಂತೆ ಅಂದು ಕೂಡ ಬೆಳಿಗ್ಗೆ ಎದ್ದೆ. ದಿನವೂ ನಾನು ಏಳುವುದರೊಳಗೆ ಬೆಳಗಿನ ಶುಭಕೋರಿದ ಸಂದೇಶಗಳು ಅವಳಿಂದ ಬಂದಿರುತ್ತಿದ್ದವು. ಆದರೆ ಅಂದು ಬಂದಿರಲೇ ಇಲ್ಲ. ಏನಾಗಿರಬಹುದೆಂದು ಯೋಚಿಸುತ್ತಲೇ ಹಾಸಿಗೆಯನ್ನು ಮಡಿಸಿ ಎದ್ದು ಕೆಳಗಡೆ ಬಂದೆ. ಬೆಳಗಿನ ಒಂದಿಷ್ಟು ಕೆಲಸಗಳನು ಮುಗಿಸಿದೆ.
ಕೆಲಸಗಳು ಮುಗಿದ ಬಳಿಕ ಬೆಳಗಿನ ತಿಂಡಿಗೆಂದು ಬರುವಾಗ ಒಮ್ಮೆ ನೋಡಿದೆ ಆಗ ಸಾದಾರಣವಾದ ಸಂದೇಶ ಬಂದಿತ್ತು. ದಿನದಂತೆ ಬರಲೇ ಇಲ್ಲ. ಅದರಲ್ಲಿ ತಿಳಿಯುವುದೊಂದೆ ಬಹುಶಃ ನನ್ನ ಮೇಲೆ ಸಿಟ್ಟು ಅಥವಾ ಬೇರೆ ಏನೊ ಸಮಸ್ಯೆಯಾಗಿದೆಯೆಂದು. ಎಂದಿನಂತೆ ಇರದ ಆ ದೂರದಂತಿರುವ ಸಂದೇಶಗಳನು ನೋಡಿ ಬೇಸರವಾದರೂ. ಇರಲಿ ಏನಾಯಿತೆಂದು ನೋಡೊಣ ಎಂದುಕೊಂಡು. ನಾನುಕೂಡ ಸಾದಾರಣ ಸಂದೇಶವ ರವಾನಿಸಿದೆ.
ತಿಂಡಿಯನ್ನು ಮುಗಿಸಿದೆ.. ನಂತರ ನಿಮಗೆ ಗೊತ್ತಲ್ಲ ಮಲೆನಾಡಿನ ಕೃಷಿಕರ ಜೀವನ, ಕೆಲಸ. ಹಾಗೇಯೆ ನಾನೂ ಕೂಡ ತೋಟ ಗದ್ದೆ (ಹನಿತುದಿ ಕೆಲಸ ಅಂತಾರೆ ನಮ್ಮಕಡೆ) ಕೆಲಸಕ್ಕೆ ಹೋದೆ. ಮದ್ಯಾಹ್ನದ ಊಟಕ್ಕಾಗಿ ಮನೆಗೆ ಬಂದಾಗ ಮೊಬೈಲ್ ಅನ್ನು ನೋಡಿದೆ. ಒಂದು ಅಸಡ್ಡೆಯ ಸಂದೇಶವ ಬಿಟ್ಟರೆ ಮತ್ತೆನಿಲ್ಲ. ಇವಳು ನಿಜವಾಗಿಯೂ ನನ್ನವಳೆ ಹೌದೆ? ಇಷ್ಟು ವರುಷಗಳ ಸಾಗಿಬಂದ ಜೀವನದ ದಾರಿಯಲಿ ನನ್ನ ಜೋತೆ ಇದ್ದವಳು ನಾನೆ ಎಲ್ಲ ಎಂದವಳು ಇವಳೇನಾ ? ಎಂದೆಲ್ಲ ಅನಿಸಿತು.
ಅದೇನಾದರು ಆಗಲಿ ಮೊದಲು ವಿಚಾರಿಸಿಯೇ ಬಿಡುವ ಎಂದು ಪ್ರಯತ್ನಿಸಿದೆ. ನನ್ನಿಂದ ಏನಾದರೂ ಪ್ರಮಾದ ಆಗಿದೆಯೆ? ಎಂದು ಕೇಳಿದೆ. ಅಥವಾ ಬೇರೆ ಇನ್ನಾವುದಾದರು ತೊಂದರೆ (ಸಮಸ್ಯೆ) ಆಯಿತೆ ? ಎಂದೆಲ್ಲಾ ಬಗೆಬಗೆಯಲಿ ವಿಚಾರಿಸಿದೆ. ಆದರೇನು ಪ್ರಯೋಜನ ನನ್ನವಳಿಗೆ ನನ್ನಬಳಿ ಮಾತಾಡುವ ಹಂಬಲವೂ ಇಲ್ಲದಂತೆ ಅಸಡ್ಡೆಯ ಕೇವಲ ‘ಹಂ’ ಎಂಬ ಉತ್ತರ.. ಯಾವುದಕ್ಕು ಏನೂ ಸರಿಯಾಗಿ ಉತ್ತರವ ನಿಡಲಿಲ್ಲ. ಅವಳಿಗೆ ನಾನ್ಯಾರೊ ಎಂಬಂತೆ ಆಗಿಬಿಟ್ಟಿತ್ತು. ಕಾರಣ ಮಾತ್ರ ತಿಳಿಯದಂತಾಗಿತ್ತು.
ನಾನು ತುಂಬಾ ಬೇಸರವಾದೆ. ಜೀವನದಲ್ಲಿ ಯಾವ ಜೀವ ಹೋಗುವ ವಿಷಯವಿದ್ದರೂ ನನಗೆ ತಲೆನೋವು ಬಾರದು, ಆದರೆ ಇವಳು ದೂರಾಗುವಳೇನೊ ಎಂದು ಸಣ್ಣ ಯೋಚನೆ ಬಂದರು ತಲೆನೋವು ವಿಪರಿತವಾಗುತ್ತಿತ್ತು . ಯಾಕೆಂದು ನಾ ತಿಳಿಯೇ! ಮದ್ಯಾಹ್ನ ಮನಯಲ್ಲೆ ಉಳಿದೆ. ತಲೆನೋವು ವಿಪರಿತವಿದ್ದ ಕಾರಣ ಸ್ವಲ್ಪಕಾಲ ಮಲಗುವ ಎಂದು ಮಲಗಿದೆ. ಏನು ಮಾಡಿದರೂ ಸುಮ್ಮನಿರಲು ಆಗದು. ಅವಳದೆ ನೆನಪು ಎಲ್ಲಾದರೂ ದೂರಾದರೆ ಎಂಬ ಭಯ. ಎನೋ ಮನದ ಭಾವನೆಗಳ ತೊಳಲಾಟ ಒಂದು ಕ್ಷಣ ಏನಾಗುತ್ತಿದೆ ಎಂಬುದ ನಾ ಅರಿಯದಾದೆ.
ಆಗಿದ್ದಾಗಲಿ ಎಂದು ಗಟ್ಟಿ ಧೈರ್ಯವ ಮಾಡಿ ಕೇಳಿಯೇಬಿಟ್ಟೆ. ಯಾಕಾಗಿ ಹೀಗೆ ಮಾಡುತಲಿರುವೆ ಏನಾಗಿದೆಯೆಂದು? ನಾನು ಯಾರೊ ಎಂಬಂತೆ ಮಾಡುತಿರುವೆಯಲ್ಲ , ನಿನಗೆ ಬೇಡವೆಂದಾದರೆ , ನನ್ನಿಂದ ದೂರಾದರೆ ನಿನಗೆ ಆನಂದವಾಗುದಾದರೆ ದಯಮಾಡಿ ಬಿಟ್ಟುಬಿಡು ಗೆಳತಿ ಏನು ತೊಂದರೆಯಿಲ್ಲ. ಕೆಲವು ದಿನಗಳ ಕಾಲ ಕಷ್ಟವಾಗಬಹುದು ಆದರೆ ನಿನ್ನಾಸೆಯ ಮುಂದೆ ಆ ಕಷ್ಟವೆನು ಲೆಕ್ಕವಲ್ಲ ನನಗೆ. ಅದು ಹ್ಯಾಗೊ ಬದುಕುವೆ. ನೀ ಖುಷಿಯಾಗಿರ ಎಂದು ಹೇಳಿದೆ. ಅದಕ್ಕೂ ಅವಳು ಸರಿಯಾದ ಉತ್ತರವ ಕೊಡದಾದಳು. ಬೇರೆ ಯಾರೊಎಂಬಂತೆ, ಆತ್ಮೀಯತೆಯ ಭಾವವೆ ಇಲ್ಲದ ಸಂದೇಶಗಳ ಕಳುಹಿದಳು. ಬೇರೆ ದಾರಿ ಕಾಣದೆ ಬೇಡವೆಂದಾದರೆ ಸಂಪರ್ಕಿಸದಿರು , ಬೇಕೆಂದಾದರೆ ಮಾತ್ರ ಸಂಪರ್ಕಿಸೆನ್ನ ಎಂದು ಹೇಳಿದೆ ಅಷ್ಟರಮೇಲೆ ok ಎಂದು ನಿಲ್ಲಿಸಿದಳು ಸಂದೇಶಗಳ ರವಾನಿಕೆಯ.
ಬೇಸರದಿ ಕಳೆದೆನು ಸಂಜೆಯ ಸಮಯ. ರಾತ್ರಿಯ ಊಟದ ಬಳಿಕ ಮಲಗಿದೆ. ಆದರೆ ಏನು ಮಾಡುವುದು ಮಾಡಿದ ಪ್ರೀತಿ ನಿಜವಲ್ಲವೆ. ಜೀವಕ್ಕೆ ಜೀವವಾಗಿರುವೆ ಎಂದವಳೆ ನಡುವೇ ಕೈಕೊಟ್ಟು ಹೋದಳು. ಎಷ್ಟೆ ಆದರೂ ಕಾಡದಿದ್ದಿತೆ ಪ್ರೀತಿ ಮಾಡಿದ ಮನಕೆ. ಏನೆ ಮಾಡಿದರೂ ಹೇಗೆ ಮಲಗಿದರು ನಿದ್ರೆಯ ಸುಳಿವೂ ಬರಲಿಲ್ಲ. ಸರಿ ಸುಮಾರು 2 ಗಂಟೆಯ ಸಮಯ ಇನ್ನೆನೂ ನಿದ್ರೆ ಬರಲೂ ಕಣ್ಣು ಮುಚ್ಚಲಾರಂಬಿಸಿತು. ಕಣ್ಣು ಮುಚ್ಚಿದೆ. ಯಾರೊ ಬಂದಂತಹ ಅನುಭವ ಕಣ್ತೆರೆದು ನೋಡಿದರೆ ಬಂದಿರ್ವರು ನನ್ನ ಕೊಲ್ಲಲೆಂದು ಅದು ಹುಡುಗ,ಹುಡುಗಿ ಅವರು ಯಾರೆಂದು ಸರಿಯಾಗಿ ನಾ ಕಾಣೆ. ಎಲ್ಲ ಮಸುಬು. ಇನ್ನೆನು ಅವರು ನನ್ನ ಕತ್ತುಹಿಸುಕಬೇಕು . ಅಷ್ಟರಲ್ಲಿ ಒಮ್ಮೆಲೆ ಎಚ್ಚರವಾಗಿಬಿಟ್ಟೆ. ಕಣ್ತೆರೆದು ನೋಡಿದರೆ ಯಾರೂ ಇಲ್ಲ.
ಅಯ್ಯೊ ದೇವರೆ ಎಂತಹ ದುಸ್ವಪ್ನ. ಆದರೂ ಇಷ್ಟೊತ್ತು ನಡೆದಿದ್ದು ಕನಸಿನಲ್ಲಿ ನಿಜವೇನಲ್ಲವಲ್ಲ ಎಂಬ ಸಮಾಧಾನವು ಒಂದುಕಡೆ. ಇಂತಹ ಕನಸು ಯಾಕಾಗಿ ಬಿತ್ತು? ಅಕಸ್ಮಾತ ನಿಜವಾಗಿಬಿಡಬಹುದೆ ಎಂಬ ಅಸಮಾಧಾನವು ಇನ್ನೊಂದುಕಡೆ. ನಿಜವಾಗದಿರಲಿ ಎಂಬ ಆಸೆ ಒಂದು ಕಡೆ. ಅಕಸ್ಮಾತಾಗಿ ನಿಜವಾದರೆ ಈ ಜೀವವ ತೆಗಿಯಲೆಂಬ ಬಯಕೆ ಇನ್ನೊಂದುಕಡೆ. ಎಂತಹ ಕರಾಳ ರಾತ್ರಿ!!!!!!!!!
“ಜೀವ ಭಾವಗಳ ಅನತಿ ದೂರದ ಪಯಣವಿದು ಜೀವನ|
ಆಗಲದು ಸ್ನೇಹ,ಪ್ರೀತಿ,ನಂಬಿಕೆ,ವಿಶ್ವಾಸ, ಒಳ್ಳೆಯ ಕಾರ್ಯಗಳಿಂದ ಪಾವನ||”